ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ವಿ.ಸಿ.ಫಾರಂನಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಫಿಲಿಪೀನ್ಸ್ ದೇಶದಲ್ಲಿ ೧,೭೪,೦೦೦ ಭತ್ತದ ತಳಿಗಳಿವೆ. ಆ ದೇಶದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದೊಂದು ಭತ್ತದ ತಳಿಯನ್ನು ಪರಿಚಯಿಸಲಾಗುತ್ತಿದೆ. ಉಪ್ಪು ನೀರಿನಲ್ಲಿ ಬೆಳೆಯಬಹುದಾದ ಭತ್ತ, ನೀರಿನಲ್ಲಿ ಮುಳುಗಿದ್ದರೂ ಉತ್ತಮವಾಗಿ ಬೆಳೆಯುವ ಭತ್ತ, ಚಪಾತಿಗಿಂತಲೂ ಸಕ್ಕರೆ ಅಂಶವನ್ನು ಕಡಿಮೆ ಹೊಂದಿರುವ ಭತ್ತ, ರಕ್ತದ ಒತ್ತಡವನ್ನು ಕಡಿಮೆ ಮಾಡುವ ಸೇರಿದಂತೆ ವಿವಿಧ ಆರೋಗ್ಯಯುಕ್ತ ಭತ್ತದ ತಳಿಗಳು ಆ ದೇಶದಲ್ಲಿವೆ. ಅವುಗಳಲ್ಲಿ ೨೦೦ ಭತ್ತದ ತಳಿಗಳನ್ನು ಆರಿಸಿ ತಂದು ಇಲ್ಲಿ ರೈತರೊಂದಿಗೆ ಪ್ರಾತ್ಯಕ್ಷಿಕೆ ನಡೆಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಈ ಸಂಬಂಧ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಫಿಲಿಪೀನ್ಸ್‌ಗೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಅಲ್ಲಿರುವ ಅಂತಾರಾಷ್ಟ್ರೀಯ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿ ಮಂಡ್ಯ ಮೂಲದ ಡಾ.ವೇದ ಪ್ರಸಾದ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಯಾಗಿದ್ದ ಡಾ.ಮಲ್ಲಿಕಾರ್ಜುನಸ್ವಾಮಿ ಅವರ ಪರಿಚಯವಾಗಿ ಭತ್ತದ ತಳಿಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲಾಗಿದೆ. ಜೊತೆಗೆ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಭತ್ತದ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಹೇಳಿದರು.ಒಪ್ಪಂದದ ಮೂಲಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಅಧ್ಯಯನ ಮಾಡುವುದು ಮತ್ತು ಹೆಚ್ಚಿಸುವುದು. ಹವಾಮಾನ-ನಿರೋಧಕ ಮತ್ತು ಪೋಷಕಾಂಶ-ಭರಿತ ಮಿಶ್ರತಳಿ ಅಭಿವೃದ್ಧಿಪಡಿಸುವುದು. ಉತ್ತಮ ಬೆಳೆ ನಿರ್ವಹಣೆ ಪದ್ಧತಿ ಉತ್ತೇಜಿಸುವುದು. ಭತ್ತದ ಸಂಶೋಧನೆ ಮತ್ತು ಕೃಷಿಯಲ್ಲಿ ವಿಜ್ಞಾನಿಗಳು ಮತ್ತು ರೈತರನ್ನ ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಗೋಷ್ಠಿಯಲ್ಲಿ ಜಿ.ಎಂ.ದೇವಗಿರಿ, ಡಾ.ಫಾತಿಮಾ, ಮುನಿಸ್ವಾಮಿಗೌಡ, ಡಾ.ಬಿ.ಎನ್.ಬಸವರಾಜು, ಡಾ.ಎ.ಡಿ.ರಂಗನಾಥ್, ಡಾ.ಸಿ.ರಾಮಚಂದ್ರ ಇದ್ದರು.ಡಿ.೫ರಿಂದ ಮೂರು ದಿನಗಳ ಕಾಲ ಕೃಷಿ ಮೇಳಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಮೊದಲ ಬಾರಿಗೆ ಡಿ.೫ ರಿಂದ ೭ರವರೆಗೆ ಮೂರು ದಿನಗಳ ಕಾಲ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಕೃಷಿ ಮೇಳದಲ್ಲಿ ಒಂದೇ ಸೂರಿನಡಿ ಕೃಷಿ ಮೇಳದಲ್ಲಿ ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ, ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನುಕೃಷಿ, ಸಸ್ಯಕ್ಷೇತ್ರ ನಿರ್ವಹಣೆಯಲ್ಲಿ ದೇಸಿ ಮತ್ತು ವಿದೇಶಿ ತಳಿಗಳ ಬಗ್ಗೆ ಮಾಹಿತಿ ಮತ್ತು ಮಾರಾಟ, ರೇಷ್ಮೆ ಕೃಷಿ, ಸಾವಯವ ಕೃಷಿ, ಬಹುಬೆಳೆ ಪದ್ಧತಿ, ಕಾಫಿ-ಸಾಂಬಾರ ಬೆಳೆಗಳ ತಂತ್ರಜ್ಞಾನಗಳು, ಕಬ್ಬು ಬೆಳೆಯಲ್ಲಿ ತರಗು ಮುಚ್ಚಿಗೆಯ ಪ್ರಾತ್ಯಕ್ಷಿಕೆ, ಸಮುದಾಯ ಕೃಷಿ, ಜೈವಿಕ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ-ಮಾಹಿತಿ ನೀಡಲಾಗುವುದು.
ವಿಸ್ಮಯಕಾರಿ ಕೀಟ ಪ್ರಪಂಚದ ಪ್ರದರ್ಶನ, ಜೇನು ಕೃಷಿ, ಹೈಟೆಕ್ ನರ್ಸರಿ ಪ್ರದರ್ಶನ ಮತ್ತು ಮಾರಾಟ, ರೈತರು ಬೆಳೆದ ಉತ್ಪನ್ನ ಕೈಗೊಂಡ ಮೌಲ್ಯವರ್ಧನೆಯನ್ನು ನೇರ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ, ಕೃಷಿಯಲ್ಲಿ ಕೃಷಿ ಬುದ್ಧಿಮತ್ತೆ, ಕೃಷಿ ಪ್ರವಾಸೋದ್ಯದ ಬಗ್ಗೆ ಮಾಹಿತಿ, ಪ್ರಚಲಿತ ವಿಷಯಗಳ ಆಧಾರದ ಮೇಲೆ ರೈತ ವಿಜ್ಞಾನಿಗಳೊಂದಿಗೆ ಸಂವಾದ, ಚರ್ಚಾಗೋಷ್ಠಿಗಳು ನಡೆಯಲಿವೆ.ಸಾಧಕ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಐದು ಜಿಲ್ಲೆಗಳಿಂದ ಒಟ್ಟು ೧೦ ಮಂದಿ ಜಿಲ್ಲಾಮಟ್ಟದ ಪ್ರಗತಿಪರ ರೈತ, ರೈತ ಮಹಿಳೆ ಪ್ರಶಸ್ತಿ ಮತ್ತು ೫೫ ಜನ ಯುವ ರೈತ, ರೈತ ಮಹಿಳೆಯರಿಗೆ ತಾಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕೃಷಿ ಮೇಳದ ವಸ್ತುಪ್ರದರ್ಶನದಲ್ಲಿ ೩೫೦ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮೇಳಕ್ಕೆ ಬರುವವರಿಗೆ ನಗರದಿಂದ ವಾಹನದ ವ್ಯವಸ್ಥೆ ಮಾಡಿದೆ. ರಿಯಾಯ್ತಿ ದರದಲ್ಲಿ ಸಾಂಪ್ರದಾಯಿಕ ಪದ್ಧತಿಯ ಆಹಾರವನ್ನು ನೀಡಲಾಗುವುದು.