ಕನ್ನಡಪ್ರಭ ವಾರ್ತೆ ತುಮಕೂರು
ಡಾ.ಪರಮೇಶ್ವರ್ ಅವರ ಭಾವಚಿತ್ರ ಪ್ರದರ್ಶಿಸಿ, ಅವರನ್ನು ಮುಖ್ಯಮಂತ್ರಿ ಮಾಡಿಬೇಕು. ದಲಿತ ಮುಖ್ಯಮಂತ್ರಿ ಆಗಲೇಬೇಕು ಎಂಬ ಘೋಷಣೆ ಕೂಗಿದ ಬೆಂಬಲಿಗರು, ಕೆಲ ಹೊತ್ತು ಕೋಡಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.
ಮುಖಂಡ ಮಾಗಡಿ ಜಯರಾಮ್ ಮಾತನಾಡಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಎಂದು ಕೇಳುತ್ತಿಲ್ಲ. ಆದರೆ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಈಗ ಚರ್ಚೆಯಲ್ಲಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎನ್ನುವುದಾದರೆ ಡಾ.ಜಿ.ಪರಮೇಶ್ವರ್ ಅವರನ್ನೇ ಮಾಡಬೇಕು ಎಂದು ಒತ್ತಾಯಿಸಿದರು.ಡಾ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ, ವಿವಿಧ ಸಚಿವ ಪದವಿ ಪಡೆದು ಉತ್ತಮ ಕೆಲಸ ಮಾಡಿ ಅನುಭವ ಇರುವ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸರ್ವ ರೀತಿಯಲ್ಲೂ ಅರ್ಹರಾಗಿದ್ದಾರೆ. ಸ್ವಾತಂತ್ರ ಬಂದಾಗಿನಿಂದ ದಲಿತ ನಾಯಕರೊಬ್ಬರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿಲ್ಲ. ಈಗ ಕಾಲ ಕೂಡಿ ಬಂದಿದೆ. ಎಲ್ಲೆಡೆ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬಂದಿದೆ. ಎಲ್ಲಾ ಜಾತಿ, ಧರ್ಮದವರೂ ಒಪ್ಪುವಂತಹ ನಾಯಕರಾಗಿರುವ ಡಾ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮಾಗಡಿ ಜಯರಾಮ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದರು.
ಮತ್ತೊಬ್ಬ ಮುಖಂಡ ಸತೀಶ್ ಮಾತನಾಡಿ, ಸಜ್ಜನರು, ಜನಾನುರಾಗಿ ನಾಯಕರಾಗಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಈ ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ಸಿಗಬೇಕು. ಅದಕ್ಕಾಗಿ ಪಕ್ಷದ ವರಿಷ್ಠರ ಗಮನ ಸೆಳೆಯುತ್ತಿರುವುದಾಗಿ ಹೇಳಿದರು. ಹನುಮ ಜಯಂತಿಯಂದು ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರಿಗೆ ಸಿಎಂ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ನಿಷ್ಠ ನಾಯಕರಾಗಿ, ಉತ್ತಮ ಆಡಳಿತಗಾರರಾಗಿ ಹೆಸರಾಗಿರುವ ಡಾ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾದರೆ ರಾಜ್ಯದ ಅಭಿವೃದ್ಧಿ ಹೊಸ ದಿಕ್ಕಿನತ್ತ ಸಾಗುತ್ತದೆ. ಹಲವು ವರ್ಷಗಳ ಬೇಡಿಕೆಯಾದ ದಲಿತ ಮುಖ್ಯಮಂತ್ರಿ ಬೇಕೆಂಬ ಹೋರಾಟಕ್ಕೂ ನ್ಯಾಯದೊರೆಯುತ್ತದೆ ಎಂದು ಸತೀಶ್ ಹೇಳಿದರು. ಮುಖಂಡರಾದ ಕೇಶವಮೂರ್ತಿ, ಯೋಗೀಶ್ ದಿಬ್ಬೂರು, ಡಿಎಸ್‌ಎಸ್ ಮುಖಂಡ ಹರೀಶ್, ದೀಕ್ಷಿತ್, ಶಿವರಾಜ್ ಮೊದಲಾದವರು ನೇತೃತ್ವ ವಹಿಸಿದ್ದರು.