ಲೋಕಾ ಬಂದು ಹೋದ ಮೇಲೆ ಆತ್ಮಾವಲೋಕನ

KannadaprabhaNewsNetwork |  
Published : Sep 01, 2025, 01:03 AM IST
31ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ರಾಯಚೂರಿನಲ್ಲಿ ಕೈಗೊಂಡ ಮೂರು ದಿನಗಳ ಪ್ರವಾಸದ ಪರಿಣಾಮ ಅಧಿಕಾರಿ-ಸಿಬ್ಬಂದಿ ಗಾಢವಾಗಿ ಚಿಂತೆಗೆ ಬಿದ್ದಂತಾಗಿದ್ದು, ಇದರೊಟ್ಟಿಗೆ ಪರಿಸರ, ಬಡವರ ಕಾಳಜಿ ವಹಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವ ಸಂದೇಶವನ್ನು ಲೋಕಾ ಟೀಮ್‌ ರವಾನಿಸಿ ಹೋಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ರಾಯಚೂರಿನಲ್ಲಿ ಕೈಗೊಂಡ ಮೂರು ದಿನಗಳ ಪ್ರವಾಸದ ಪರಿಣಾಮ ಅಧಿಕಾರಿ-ಸಿಬ್ಬಂದಿ ಗಾಢವಾಗಿ ಚಿಂತೆಗೆ ಬಿದ್ದಂತಾಗಿದ್ದು, ಇದರೊಟ್ಟಿಗೆ ಪರಿಸರ, ಬಡವರ ಕಾಳಜಿ ವಹಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವ ಸಂದೇಶವನ್ನು ಲೋಕಾ ಟೀಮ್‌ ರವಾನಿಸಿ ಹೋಗಿದೆ.

ಇದಕ್ಕೆ ಕಾರಣ ಉಪಲೋಕಾಯುಕ್ತರು ಬಂದು ಹೋದ ಮೇಲೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪರ-ವಿರೋಧದ ಚರ್ಚೆಗಳು ಬಲವಾಗಿ ನಡೆದಿದಷ್ಟೇ ಅಲ್ಲದೇ ಭ್ರಷ್ಟಾ ಚಾರ, ಸಾರ್ವಜನಿಕ ಸೇವೆಗೆಯಲ್ಲಿ ನಿಷ್ಕಾಳಜಿ, ಪರಿಸರ ನಾಶ, ಸಂಘಟನೆಗಳ ಮುಖಂಡರ ತಪ್ಪು ದಾರಿ, ವಕೀಲರ, ಪತ್ರಕರ್ತರ ನಿಜವಾದ ಕೆಲಸ-ಕಾರ್ಯಗಳು ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿ-ಶಿಸ್ತು ಮತ್ತು ದೇಶದಾಭಿವೃದ್ಧಿ ಕುರಿತು ತಮ್ಮನ್ನು ತಾವು ಆತ್ಮಾವಲೋಕನೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎನ್ನುವ ಸಮಾಲೋಚನೆಗಳು ಎಲ್ಲೆಡೆ ಸಾಗಿವೆ.

ಹಾಟ್‌ ಟಾಪಿಕ್: ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು, ಕೈಗಾರಿಕಾ ವಲಯ, ಜಲ ಶುದ್ಧೀಕರಣ ಘಟಕ, ಕಲ್ಲು ಗಣಿಗಾರಿಕೆಗಳ, ಹಾಸ್ಟೆಲ್ ಸೇರಿ ವಿವಿಧೆಡೆ ಅನಿರೀಕ್ಷಿತ ಭೇಟಿ, ಅಲ್ಲಿಯ ಲೋಪದೋಷಗಳನ್ನು ಪತ್ತೆ ಹಚ್ಚಿ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳ ಅಧಿಕಾರಿ-ಸಿಬ್ಬಂದಿಯ ಕಾರ್ಯವೈಖರಿ, ದಾಖಲೆಗಳ ನಿರ್ವಹಣೆ ಜೊತೆಗೆ ಅವರ ಮೊಬೈಲ್‌ ಗಳನ್ನು ಜಾಲಾಡಿ ಭ್ರಷ್ಟಾಚಾರ,ಅಕ್ರಮ ಹಣ ವರ್ಗಾವಣೆಯ ಮೇಲೂ ಲೋಕಾ ತಂಡ ನಿಗಾ ವಹಿಸಿ ಹೋಗಿರುವುದು ಇದೀಗ ಆಡಳಿತ ವರ್ಗದಲ್ಲಿ ಹಾಟ್‌ ಟಾಪಿಕ್‌ ಆಗಿ ಮಾರ್ಪಟ್ಟಿದೆ.

ಅಷ್ಟೇ ಅಲ್ಲದೇ ಅನಿರೀಕ್ಷಿತ ಭೇಟಿ ವೇಳೆ ಅಧಿಕಾರಿ, ಸಿಬ್ಬಂದಿಗೆ, ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಮಯದಲ್ಲಿ, ವಕೀಲರೊಂದಿಗೆ ಉಪನ್ಯಾಸದ ಕಾರ್ಯಕ್ರಮ ಹಾಗೂ ಕುಂದುಕೊರತೆ ಸಭೆಯಲ್ಲಿ ಅತೀಯಾಗಿ ವರ್ತಿಸಿದ ವಿವಿಧ ಸಂಘಟನೆಗಳ ಮುಖಂಡರು, ಜನಸಾಮಾನ್ಯರೊಂದಿಗೆ ಸಮಾಲೋಚನೆ ಮಾಡಿದ ಉಪಲೋಕಾಯುಕ್ತರು ಬಿ.ವೀರಪ್ಪ ಮತ್ತು ತಂಡವು ಅವರಿಗೆ ಕ್ಲಾಸ್‌ ತೆಗೆದುಕೊಂಡು ಜವಾಬ್ದಾರಿ ಗುರುತಿಸುವ ಕೆಲಸವನ್ನು ಮಾಡಿ ಹೋಗಿದೆ.

ಚರಿತ್ರೆ ಪುಟ ಸೇರಿದ ಕಾರ್ಯಕ್ರಮ: ಉಪಲೋಕಾಯುಕ್ತ ಬಿ.ವೀರಪ್ಪ ಮತ್ತು ಅವರ ತಂಡವು ಕಳೆದ ಆ.28 ರಿಂದ 30 ವರೆಗೆ ರಾಯಚೂರು ನಗರ ಹಾಗೂ ತಾಲೂಕಿನ 24 ವಿವಿಧ ಪ್ರದೇಶದಲ್ಲಿ ಅನಿರೀಕ್ಷಿತ ಭೇಟಿ, 18 ಸುಮೊಟೊ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕೃಷಿ ವಿವಿಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕ ಅಹವಾಲು ಸ್ವೀಕಾರ, ದೂರಾರ್ಜಿಗಳ ವಿಚಾರಣೆ ಹಾಗೂ ವಿಲೇವಾರಿ ಪ್ರಕ್ರಿಯೇಯಲ್ಲಿ ಒಟ್ಟು 503 ಟೋಕನ್ ನೀಡಲಾಗಿತ್ತು. ಆ ಪೈಕಿ 260 ಹೊಸ ದೂರುಗಳನ್ನು ವಿಚಾರಣೆ ‌ಮಾಡಿ ಅದರಲ್ಲಿ ಒಟ್ಟು 100 ದೂರು ಅರ್ಜಿಗಳನ್ನು ವಿಲೆ ಮಾಡಲಾಗಿದೆ. ಇಷ್ಟೇ ಅಲ್ಲದೇ ಒಟ್ಟು 125 ಬಾಕಿ ದೂರುಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ಈ ಪೈಕಿ 71 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಹೊಸ ಅರ್ಜಿಗಳು 503 ಮತ್ತು 125 ಬಾಕಿ ಅರ್ಜಿಗಳು ಸೇರಿ ಒಟ್ಟು ರಾಯಚೂರು ಜಿಲ್ಲೆಯಲ್ಲಿ 628 ಅರ್ಜಿಗಳ ಪೈಕಿ 171 ಪ್ರಕರಣಗಳನ್ನು ಮುಕ್ತಾಯ ಮಾಡಿ ದಾಖಲೆ ಕಾರ್ಯಕ್ರಮವಾಗಿ ಚರಿತ್ರೆಯ ಪುಟಸೇರಿದೆ.

ಕುಂದುಕೊರತೆ ಸಭೆಯಲ್ಲಿ ವರ್ಷಗಳಿಂದ ಮೂಲೆಗುಂಪಾಗಿದ್ದ ಬಡವರ, ಅನ್ಯಾಯಕ್ಕೊಳಗಾದವರ ದೂರಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ವಿಚಾರಣೆ ಮಾಡಿ ಪರಿಹಾರದ ಭರವಸೆ ಕೊಟ್ಟು ಹೋಗಿರುವ ಲೋಕಾಯುಕ್ತರ ಕಾರ್ಯಕ್ರಮವು ಹಾಗಾಗ ನಡೆಸಿದ್ದಲ್ಲಿ ಭ್ರಷ್ಟಾಚಾರ, ಅನ್ಯಾಯ, ದಬ್ಬಾಳಿಕೆ, ಮೋಸ ಪ್ರಕರಣಗಳನ್ನು ನಿಯಂತ್ರಿ ಸಬಹುದು ಎಂದು ಸಾರ್ವಜನಿಕರು ಆಶಯವ್ಯಕ್ತಪಡಿಸುತ್ತಿದ್ದಾರೆ.

ಉತ್ತಮ ಮಾರ್ಗದರ್ಶನ ದೊರೆತಂತಾಯ್ತು: ಡಿಸಿ

ರಾಯಚೂರು: ಉಪ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜಿಲ್ಲೆಯಲ್ಲಿ ಕೈಗೊಂಡ ಪ್ರವಾಸದ ಕುರಿತು ಜಿಲ್ಲಾಧಿಕಾರಿ ನಿತೀಶ್‌ ಕೆ. ಮಾತ ನಾಡಿ, ಉಪಲೋಕಾಯುಕ್ತರ ಆಗಮನದಿಂದಾಗಿ ಜಿಲ್ಲೆಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ಲಭಿಸಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಾನ್ಯ ಉಪ ಲೋಕಾಯುಕ್ತರ ಭೇಟಿಯಿಂದಾಗಿ ಕೆಲ ಕಚೇರಿಗಳಲ್ಲಿನ ಲೋಪ ದೋಷಗಳೇನು ಎಂಬುದು ಗೊತ್ತಾಗಿ ಆಘಾತವೆನಿಸಿದೆ; ತಲೆ ತಗ್ಗಿಸುವಂತಾಗಿದೆ. ಇದು ಇಲ್ಲಿಗೆ ಕೊನೆಯಾಗಬೇಕು. ಆಯಾ ಇಲಾಖೆಯ ಮೇಲಧಿಕಾರಿಗಳು ತಮ್ಮ ತಮ್ಮ ಕಚೇರಿಯ ಇನ್ನೀತರ ಅಧಿಕಾರಿ, ಸಿಬ್ಬಂದಿ ಮೇಲೆ ನಿರಂತರ ನಿಗಾವಹಿಸಿ ಕ್ರಮ ಜರುಗಿಸಬೇಕು. ನಾವಷ್ಟೇ ಸರಿಯಿದ್ದರೆ ಸಾಲದು, ನಮ್ಮ ಅಕ್ಕಪಕ್ಕದವರು, ಕೆಳಗಿನವರು ಸಹ ಸರಿ ಇರಬೇಕು. ಕಚೇರಿಯಲ್ಲಿ ಒಬ್ಬರು ಭ್ರಷ್ಟರಾದರೆ ಅವರಿಂದ ಇಡೀ ಕಚೇರಿಗೆ ಕೆಟ್ಟ ಹೆಸರು ಬರುತ್ತೆ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಂದಬೇಕು ಎಂದು ಡಿಸಿ ಸಲಹೆಯನ್ನು ಸಹ ನೀಡಿದ್ದಾರೆ.

ಲೋಕಾಯುಕ್ತರು ನಮ್ಮಲ್ಲಿ ಬಂದು ನಮ್ಮ ಲೋಪ ದೋಷ ತಿಳಿಸಿದ್ದು, ಅವರ ಭೇಟಿಯಿಂದಾಗಿ ನಮಗೆ ಸರಿಯಾಗಿ ಕೆಲಸ ಮಾಡುವ ಪ್ರೇರಣೆ ಸಿಕ್ಕಿದೆ. ರಾಯಚೂರ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಮುಂದಿನ ದಿನಗಳಲ್ಲಿ ನಾವು ನಮ್ಮ ಕೈ ಮತ್ತು ಮನಸು ಸ್ವಚ್ಚವಾಗಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದು ನಾವೆಲ್ಲರೂ ಉಪಲೋಕಾಯುಕ್ತರಿಗೆ ಆಶ್ವಾಸನೆ ಕೊಡೋಣ. ಲೋಪದೋಷಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆಂದು ಉಪಲೋಕಾಯುಕ್ತರಿಗೆ ನಾವೆಲ್ಲರೂ ಮಾತು ಕೊಡೋಣ ಎಂದು ಡಿಸಿ ನುಡಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ