ತಲೆಕೆಳಗಾದ ಸಮಾಜವಾದ, ಸಮತಾವಾದ: ಶಾಸಕ ಬಿ.ಆರ್‌. ಪಾಟೀಲ್

KannadaprabhaNewsNetwork |  
Published : Jan 15, 2024, 01:45 AM IST
ಬಳ್ಳಾರಿಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಜರುಗಿದ ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವದಲ್ಲಿ ಲೋಹಿಯಾ ಪ್ರಕಾಶನ ಹೊರತಂದ ಕೃತಿಗಳು ಲೋಕಾರ್ಪಣೆಗೊಂಡವು.  | Kannada Prabha

ಸಾರಾಂಶ

ಕರ್ಪೂರ್ ಠಾಕೂರ್ ಅವರು ಎರಡು ಬಾರಿ ಸಿಎಂ ಆಗಿದ್ದರೂ ಇರಲು ಮನೆಯಿರಲಿಲ್ಲ. ಅವರು ಸಿಎಂ ಆಗಿದ್ದಾಗಲೂ ಅವರ ತಂದೆ ಕ್ಷೌರಿಕ ವೃತ್ತಿಯನ್ನೇ ಮುಂದುವರಿಸಿದ್ದರು.

ಬಳ್ಳಾರಿ: ಪ್ರಸ್ತುತ ದಿನಗಳಲ್ಲಿ ಸಮಾಜವಾದ- ಸಮತಾವಾದ ತಲೆಕೆಳಗಾಗಿ ನಿಂತಿದ್ದು, ವ್ಯಕ್ತಿವಾದ, ಜಾತಿವಾದ ಮತ್ತು ಬಂಡವಾಳವಾದ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹಿರಿಯ ಸಮಾಜವಾದಿ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಲೋಹಿಯಾ ಪ್ರಕಾಶನ ಹಮ್ಮಿಕೊಂಡಿದ್ದ ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜವಾದ ನೆಲೆಯಲ್ಲಿ ಬಂದಿರುವ ದೇಶದ ಅನೇಕ ರಾಜಕೀಯ ನಾಯಕರು ವ್ಯವಸ್ಥೆಯೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ನಿಷ್ಠುರವಾಗಿಯೇ ಬದುಕಿದ್ದಾರೆ. ಕರ್ಪೂರ್ ಠಾಕೂರ್ ಅವರು ಎರಡು ಬಾರಿ ಸಿಎಂ ಆಗಿದ್ದರೂ ಇರಲು ಮನೆಯಿರಲಿಲ್ಲ. ಅವರು ಸಿಎಂ ಆಗಿದ್ದಾಗಲೂ ಅವರ ತಂದೆ ಕ್ಷೌರಿಕ ವೃತ್ತಿಯನ್ನೇ ಮುಂದುವರಿಸಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರ ಬಳಿ ಕಾರು ಇರಲಿಲ್ಲ. ನಿಧನರಾದಾಗ ಹೂಳಲು ಸ್ವಂತ ಜಾಗವಿರಲಿಲ್ಲ. ಈ ರೀತಿಯ ಸರಳ ವ್ಯಕ್ತಿಗಳು ಇಂದು ನೋಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಚಳವಳಿಗಳು ಜೀವಂತವಾಗಿರಬೇಕು. ಚಳವಳಿ ಜೀವ ಕಳೆದುಕೊಂಡರೆ ಸಮಾಜವೇ ಜೀವ ಕಳೆದುಕೊಳ್ಳುತ್ತದೆ. ದೆಹಲಿಯಲ್ಲಿ ನಡೆದ ಚಳವಳಿಯಲ್ಲಿ 600 ರೈತರು ಹುತಾತ್ಮರಾದರು. ಹೋರಾಟದಿಂದ ಕೇಂದ್ರದ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಸಾಧ್ಯವಾಯಿತು ಎಂದರು.

ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ ಕುರಿತು ಒಂದು ಅವಲೋಕನ ಮಾಡಿದ ಹಿರಿಯ ಚಿಂತಕ ಡಾ. ರಾಜೇಂದ್ರ ಚೆನ್ನಿ, ಕರ್ಪೂರಿ ಅವರು ಶೇ. 60ರಷ್ಟು ಮೀಸಲಾತಿಯನ್ನು ಪ್ರತಿಪಾದಿಸಿದರು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಆಗ ಮಾತ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯ ಎಂದು ಹೇಳುತ್ತಿದ್ದರು. ಭಾರತೀಯ ರಾಜಕೀಯದಲ್ಲಿ ಹಿಂದುಳಿದ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲು ಆಸ್ಪದವಾಗಿದ್ದರೆ ಅದಕ್ಕೆ ಕರ್ಪೂರಿ ಠಾಕೂರ್ ಅವರೇ ಕಾರಣ. ಭಾಷೆ, ಭೂಮಿ ಹಾಗೂ ಸಾಮಾಜಿಕ ನ್ಯಾಯ ಈ ಮೂರಕ್ಕೆ ಪ್ರಮುಖ ಆದ್ಯತೆಯನ್ನು ನೀಡಿ ಹೋರಾಟ ನಡೆಸಿದರು.

ಹಿರಿಯ ಕವಿಗಳಾದ ಸವಿತಾ ನಾಗಭೂಷಣ ಹಾಗೂ ಡಾ. ದಸ್ತಗಿರಿಸಾಬ್ ದಿನ್ನಿ ಅವರು ಕೃತಿಗಳ ಪರಿಚಯಿಸಿದರು. ಲೇಖಕರಾದ ಡಾ. ಎನ್. ಜಗದೀಶ್‌ ಕೊಪ್ಪ ಹಾಗೂ ಮಂಗ್ಳೂರ ವಿಜಯ ಮಾತನಾಡಿದರು. ಹಿರಿಯ ಕವಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ ಪ್ರಾಸ್ತಾವಿಕ ಮಾತನಾಡಿದರು.

ಯಲ್ಲನಗೌಡ ಶಂಕರಬಂಡೆ ಹಾಗೂ ಜಡೇಶ್ ಎಮ್ಮಿಗನೂರು ಅವರು ಜನನಾಯಕ ಕರ್ಪೂರಿ ಠಾಕೂರ್ ಅವರ ಬರೆದ ಗೀತೆಗಳನ್ನು ರಾಗಸಂಯೋಜಿಸಿ ಪ್ರಸ್ತುತಪಡಿಸಿದರು. ಹಿರಿಯ ಕವಿ ಅಲ್ಲಮ ಪ್ರಭು ಬೆಟ್ಟದೂರು ಕಾರ್ಯಕ್ರಮ ನಿರೂಪಿಸಿದರು.

ನರೇಂದ್ರ ಪಾಠಕ್ ಅವರ ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ (ಅನು: ಹನಸ್ ನಯೀಂ ಸುರಕೋಡ), ಮಾನವತಾವಾದಿ ಮಧು ದಂಡವತೆ (ಲೇ. ಡಾ. ಎನ್. ಜಗದೀಶ್ ಕೊಪ್ಪ), ಅಪ್ಪಟ ಸಮಾಜವಾದಿ ಮಧು ಲಿಮಯೆ (ಲೇ: ಮಂಗ್ಳೂರ ವಿಜಯ), ಹಾಗೂ ಸವಿತಾ ನಾಗಭೂಷಣ ಅವರ ದಿನದ ಪ್ರಾರ್ಥನೆ ಕೃತಿಗಳು ಲೋಕಾರ್ಪಣೆಗೊಂಡವು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ