ಪ್ಯೂರಿಫೈಯರ್ ಖರೀದಿ ಭ್ರಷ್ಟಾಚಾರ ವಿರುದ್ಧ ತನಿಖೆ ನಡೆಸಿ

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ಒಂದು ವಾಟರ್ ಪ್ಯೂರಿಫೈಯರ್‌ಗೆ 5,650 ರು. ದಾಖಲಿಸಲಾಗಿದ್ದು, ಆದರೆ ವಾಸ್ತವವಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ಪ್ಯೂರಿಫೈಯರ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ 1, 200 ರು. ಮೌಲ್ಯ ಹೊಂದಿರುವಂತೆ ಕಂಡುಬರುತ್ತಿದೆ. ಬಳಸಲು ಯೋಗ್ಯವಿಲ್ಲದ ಕಾರಣ ಬಹಳಷ್ಟು ವಾಟರ್ ಪ್ಯೂರಿಫೈಯರ್‌ಗಳು ಅಂಗನವಾಡಿ ಕೇಂದ್ರಗಳಲ್ಲಿ ಮೂಲೆ ಸೇರಿವೆ ಎಂದು ಆರೋಪಿಸಿದ್ದಾರೆ.

₹4,76,000 ಹಗರಣ । ₹1, 200 ಮೌಲ್ಯ ಫಿಲ್ಟರ್‌ಗೆ ₹5,650 ನಮೂದು । ತನಿಖೆಗೆ ಹೋರಾಟಗಾರ ಶಿವಕುಮಾರ್ ಆಗ್ರಹ

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕು ಪಂಚಾಯಿತಿಯಲ್ಲಿ ಕಳಪೆ ಗುಣಮಟ್ಟದ ವಾಟರ್ ಪ್ಯೂರಿಫೈಯರ್ ಖರೀದಿಸಿ ಅವ್ಯವಹಾರ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ ಖರ್ಗೆಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯಲು ಗಡಸು ನೀರು ಬಳಸುತ್ತಿರುವ ಪ್ರದೇಶಗಳ ಸುಮಾರು 80 ಅಂಗನವಾಡಿ ಕೇಂದ್ರಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ 20203-24ನೇ ಸಾಲಿನ ಸಂಯುಕ್ತ ಅನುದಾನದ ಸುಮಾರು 4,76,000 ರು. ವೆಚ್ಚದಲ್ಲಿ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಿ ತಲಾ ಒಂದರಂತೆ ನೀಡಲಾಗಿದೆ. ಒಂದು ವಾಟರ್ ಪ್ಯೂರಿಫೈಯರ್‌ಗೆ 5,650 ರು. ದಾಖಲಿಸಲಾಗಿದ್ದು, ಆದರೆ ವಾಸ್ತವವಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ಪ್ಯೂರಿಫೈಯರ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ 1, 200 ರು. ಮೌಲ್ಯ ಹೊಂದಿರುವಂತೆ ಕಂಡುಬರುತ್ತಿದೆ. ಬಳಸಲು ಯೋಗ್ಯವಿಲ್ಲದ ಕಾರಣ ಬಹಳಷ್ಟು ವಾಟರ್ ಪ್ಯೂರಿಫೈಯರ್‌ಗಳು ಅಂಗನವಾಡಿ ಕೇಂದ್ರಗಳಲ್ಲಿ ಮೂಲೆ ಸೇರಿವೆ ಎಂದು ಆರೋಪಿಸಿದ್ದಾರೆ. ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಸೂಕ್ತ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

- - -

ಕೋಟ್:

ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಲಾಗಿದ್ದು, ಇಲ್ಲೂ ಸಹ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೆ ಭ್ರಷ್ಟಾಚಾರ ನಡೆಸಿರುವವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾಗೊಳಿಸಬೇಕು.

-ಶಿವಕುಮಾರ್, ಸಾಮಾಜಿಕ ಹೋರಾಟಗಾರ

- - -

ಡಿ೭-ಬಿಡಿವಿಟಿ೧

ಭದ್ರಾವತಿ ತಾಲೂಕು ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ವಾಟರ್ ಪ್ಯೂರಿಫೈಯರ್.

--

ಡಿ೭-ಬಿಡಿವಿಟಿ೧(ಎ)

ಶಿವಕುಮಾರ್, ಸಾಮಾಜಿಕ ಹೋರಾಟಗಾರ.

Share this article