ಫೆಬ್ರುವರಿಗೆ ಶಿರಸಿಗೆ ನೀರಿನ ಬರ

KannadaprabhaNewsNetwork | Published : Dec 8, 2023 1:45 AM

ಸಾರಾಂಶ

ನಗರಸಭೆ ಅಧಿಕಾರಿಗಳು ಈಗಾಗಲೇ ನಗರ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿ ಗುರುತಿಸಿ ಅಲ್ಲಿಂದ ನೀರು ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಶಿರಸಿ:

ಈ ವರ್ಷದ ಮಳೆಯ ಅಭಾವದಿಂದಾಗಿ ಶಿರಸಿ ನಗರಕ್ಕೆ ನೀರು ಸರಬರಾಜು ಮಾಡುವ ಮೂಲಗಳಲ್ಲಿ ನೀರಿನ ಹರಿವು ಗಣನೀಯವಾಗಿ ಇಳಿಕೆಯಾಗಿದೆ. ಈ ವೇಳೆ ವಾರ್ಷಿಕ ಹರಿವಿನ ಪ್ರಮಾಣದ ಅರ್ಧದಷ್ಟು ನೀರು ಮಾತ್ರ ಹರಿಯುತ್ತಿದ್ದು, ಬೇಸಿಗೆಯ ಜಲ ಕೊರತೆಯ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ.ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ನೀರಿನ ಮೂಲಗಳಾದ ಮಾರಿಗದ್ದೆ ಹಾಗೂ ಕೆಂಗ್ರೆ ಜಲಮೂಲಗಳಲ್ಲಿ ಈ ವರ್ಷ ಮಳೆಯ ಕೊರತೆಯಿಂದ ನವೆಂಬರ್ ತಿಂಗಳಲ್ಲೇ ಒಮ್ಮೆಲೇ ನೀರಿನ ಹರಿವು ಕಡಿಮೆ ಆಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇದ್ದಷ್ಟು ನೀರಿನ ಸಂಗ್ರಹ ಈ ವರ್ಷ ನವೆಂಬರ್ ತಿಂಗಳಲ್ಲಿ ಇದೆ. 80 ಸಾವಿರದಷ್ಟಿರುವ ಶಿರಸಿ ನಗರದ ಜನತೆಗೆ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ಕುಡಿಯುವ ನೀರಿಗೂ ಪರದಾಟ ಸ್ಥಿತಿ ಬರುವ ಸಾಧ್ಯತೆಗಳು ಹೆಚ್ಚಿದೆ. ನಗರಸಭೆ ಅಧಿಕಾರಿಗಳು ಈಗಾಗಲೇ ನಗರ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿ ಗುರುತಿಸಿ ಅಲ್ಲಿಂದ ನೀರು ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ ಇಷ್ಟು ದೊಡ್ಡ ನಗರಕ್ಕೆ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡುವುದು ಸುಲಭದ ಮಾತಲ್ಲ. ಈ ವರ್ಷ ಬೇಸಿಗೆಯಲ್ಲಿ ನಗರವಾಸಿಗಳಿಗೆ ನೀರು ಸರಬರಾಜು ಮಾಡುವುದು ನಗರಸಭೆ ಅಧಿಕಾರಿಗಳಿಗೆ ಬಹುದೊಡ್ಡ ಸವಾಲಾಗಿದೆ.ಈ ವರ್ಷ ರಾಜ್ಯದ ಅತಿದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯು ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಜಾತ್ರೆಗೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಲಕ್ಷಾಂತರ ಜನರು ಆಗಮಿಸುತ್ತಾರೆ. ಆ ಸಮಯದಲ್ಲಿ ನೀರಿನ ವ್ಯವಸ್ಥೆ ಮಾಡುವುದು ಬಹುದೊಡ್ಡ ಸವಾಲಾಗಿದೆ. ಒಂದು ತಿಂಗಳಿಗೆ ಖಾಲಿಯಾಗುವಷ್ಟು ನೀರು ಜಾತ್ರೆಯ 9 ದಿನಗಳಲ್ಲಿ ಖಾಲಿಯಾಗುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಅಧಿಕಾರಿಗಳು ಈಗಿಂದಲೇ ನೀರು ಸರಬರಾಜು ಮಾಡುವ ಬಗ್ಗೆ ಇನ್ನಷ್ಟು ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.ಬರಗಾಲ ನಿರ್ವಹಣೆ ಬಗ್ಗೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಭೀಮಣ್ಣ ನಾಯ್ಕ ನಗರಕ್ಕೆ ನೀರು ಲಭ್ಯತೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜನರಿಗೆ ನಿತ್ಯವೂ ನೀರು ಸರಬರಾಜು ಮಾಡುವ ಬಗ್ಗೆ ಗಮನ ಹರಿಸಬೇಕು ‌.ಅಲ್ಲದೇ ಹೊಸದಾಗಿ ಬೋರ್‌ವೆಲ್ ತೋಡಲು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶಿರಸಿ ನಗರಕ್ಕೆ ಪ್ರತಿದಿನ ಅಂದಾಜು 72 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಸದ್ಯ ನಗರದಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ ಸಹ ಫೆಬ್ರವರಿ ತಿಂಗಳಿನಿಂದ ನೀರಿನ ಸಮಸ್ಯೆ ಆಗುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ಸಾರ್ವಜನಿಕರೂ ಸಹ ನೀರನ್ನು ಪೋಲು ಮಾಡದೆ ಹಿತಮಿತವಾಗಿ ಬಳಸುವ ಅನಿವಾರ್ಯತೆ ಈ ವರ್ಷ ಬಂದೊದಗಿದೆ.

ಮಳೆಯ ಕೊರತೆಯಿಂದ ಈ ವರ್ಷ ನಗರಕ್ಕೆ ನೀರು ಸರಬರಾಜು ಮಾಡುವ ನೀರಿನ ಮೂಲಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಕೊಳವೆ ಬಾವಿ ಗುರುತಿಸಿ ಅಲ್ಲಿಂದ ನೀರು ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಕಾಂತರಾಜ್ ಹೇಳಿದ್ದಾರೆ.

Share this article