ದಾವಣಗೆರೆ: ಕಾಡಜ್ಜಿ ಕೃಷಿ ಇಲಾಖೆ ಜಮೀನಿನ ಮಣ್ಣನ್ನು ಅಕ್ರಮವಾಗಿ ಎತ್ತುವಳಿ ಮಾಡಿದ್ದಾರೆಂಬ ವಿಪಕ್ಷ ಬಿಜೆಪಿಯವರು ಪ್ರತಿಭಟಿಸಿದ್ದು, ಕಾನೂನು ಪ್ರಕಾರ ಎಲ್ಲವೂ ತನಿಖೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದರು.
ನಾನು 3ನೇ ಬಾರಿಗೆ ಮಂತ್ರಿಯಾಗಿದ್ದೇನೆ. ನನ್ನ ಆಡಳಿತದಲ್ಲಿ ಒಂದೇ ಒಂದು ಕಪ್ಪುಚುಕ್ಕೆಯೂ ಬಂದಿಲ್ಲ. ಯಾರನ್ನಾದರೂ ಅರೆಸ್ಟ್ ಮಾಡಿ ಅಂತಾ ಈವರೆಗೂ ನನ್ನ ಬಾಯಿಯಲ್ಲಿ ಬಂದಿಲ್ಲ. ಅಲ್ಲಿ ಯಾರೋ ವೀಡಿಯೋ ಕ್ಯಾಮೆರಾ ಮಾಡಿ, ತೋರಿಸಿದ್ದಾರಂತೆ. ಅಲ್ಲಿ ಹೋಗಿ ಯಾರಿಗೋ ಬೈದಿದ್ದರಿಂದ ಕಂಪ್ಲೇಂಟ್ ಆಗಿದೆ. ಅದಕ್ಕೂ. ನನಗೂ ಏನು ಸಂಬಂಧ? ಇವರು ಅಧಿಕಾರಿಗಳಿಗೆ ಏಕವಚನದಲ್ಲಿ ಬೈಯ್ಯುವುದು, ದಾದಾಗಿರಿ ಎಲ್ಲಾ ನೋಡಿದ್ದೀನಿ. ನಾವೇನು ಬಗ್ಗಲ್ಲ, ಜಗ್ಗಲ್ಲ. ಶಾಂತವಾಗಿ, ಸಮಾಧಾನವಾಗಿ ಏನೇನು ಆಗಬೇಕು ಅಂತಾ ಹೇಳಿದರೆ ಖಂಡಿತಾ ಮಾಡೋಣ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಸೇರಿದಂತೆ ವಿಪಕ್ಷ ಮುಖಂಡರಿಗೆ ಪರೋಕ್ಷ ಸಲಹೆ ನೀಡಿದರು.
ಗರಿಗರಿ ಅಂಗಿ ಹಾಕೊಂಡು ಬಂದಿದ್ಯಾಕೆ?! ರಾಜಕೀಯ ಬದ್ಧವೈರಿಯಾದ ಬಿಜೆಪಿಯ ನಾಯಕ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ವಿರುದ್ಧವೂ ಎಸ್‌ಎಸ್‌ಎಂ ವಾಗ್ದಾಳಿ ನಡೆಸಿದರು. ಮಾಜಿ ಸಂಸದ ಈಗ ಯಾಕೆ ಗರಿಗರಿ ಅಂಗಿ ಹಾಕಿಕೊಂಡು ಬಂದಿದ್ದಾರೆ? ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಬಂದಿದೆ ಅಂತಾನಾ? ಆಗಲೇ ಊರಿಗೆ ಕಳಿಸಿದ್ದೀವಿ. ರಾಜಕೀಯದಲ್ಲಿ ವೈಯಕ್ತಿಕ ನಿಂದನೆ ಇರಬಾರದು. ಯಾವ ರೀತಿ ನಾವು ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಅರಿವಿರಬೇಕು. ಆರೋಗ್ಯಕರ ಚರ್ಚೆ ಇರಬೇಕು. ಉಪ ಚುನಾವಣೆಗೆ ಸಿಂಪಥಿ ಕ್ರಿಯೇಟ್ ಮಾಡಲು ಇದನ್ನೆಲ್ಲಾ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.ಸಿದ್ದರಾಮಯ್ಯನವರೇ ಸದ್ಯ ಈಗ ಮುಖ್ಯಮಂತ್ರಿ ಇದ್ದಾರೆ. ಒಂದೇ ವಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಎರಡು ಸಲ ದೆಹಲಿ ಪ್ರವಾಸ ಕೈಗೊಂಡ ಬಗ್ಗೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ನಮ್ಮ ಪಕ್ಷದಲ್ಲಿ ಏನೇ ಇದ್ದರೂ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. - ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಸಚಿವ.