ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

KannadaprabhaNewsNetwork | Published : Jan 17, 2024 1:47 AM

ಸಾರಾಂಶ

ಹೆಬ್ರಿ ತಾಲೂಕು ಮುದ್ರಾಡಿ ಸ. ಹಿ. ಪ್ರಾ. ಶಾಲೆಯ ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಅಷ್ಟವಧಾನಿ ಕಬ್ಬಿನಾಲೆ ಡಾ. ಬಾಲಕೃಷ್ಣ ಭಾರದ್ವಾಜ್ ಅವರ ಅಧ್ಯಕ್ಷತೆಯಲ್ಲಿ ಫೆ.2 ರಂದು ಸಮ್ಮೇಳನ ನಡೆಯಲಿದೆ.ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ್ ಜೋಯಿಸ್ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೆಬ್ರಿ ತಾಲೂಕು ಘಟಕದ ವತಿಯಿಂದ 2024ರ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ .15 ರಂದು ನಡೆಯಿತು.

ಮುದ್ರಾಡಿ ಸ. ಹಿ. ಪ್ರಾ. ಶಾಲೆಯ ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಅಷ್ಟವಧಾನಿ ಕಬ್ಬಿನಾಲೆ ಡಾ. ಬಾಲಕೃಷ್ಣ ಭಾರದ್ವಾಜ್ ಅವರ ಅಧ್ಯಕ್ಷತೆಯಲ್ಲಿ ಫೆ.2 ರಂದು ಸಮ್ಮೇಳನ ನಡೆಯಲಿದೆ.ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ್ ಜೋಯಿಸ್ ಬಿಡುಗಡೆಗೊಳಿಸಿ, ಸಮ್ಮೇಳನಕ್ಕೆ ಶುಭ ಹಾರೈಸಿ ಮಾರ್ಗದರ್ಶನ ನೀಡಿದರು. ಗೌರವ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್. ಎಸ್ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಂಚುವಿಕೆ, ನಿರ್ವಹಣೆ, ಸಮಿತಿಗಳ ಜವಾಬ್ದಾರಿಗಳು, ಭೋಜನ ವ್ಯವಸ್ಥೆ, ಅತಿಥಿ ಸತ್ಕಾರ, ಆತಿಥ್ಯ, ಉಪಚಾರ, ತುರ್ತು ಚಿಕಿತ್ಸೆ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅನುಗ್ರಹ, ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ, ಸಂಚಾಲಕರಾದ ಗಣಪತಿ. ಎಂ, ಉಪಾಧ್ಯಕ್ಷರಾದ ಚಂದ್ರಶೇಖರ ಬಾಯಾರಿ, ಕ.ಸಾ.ಪ ಘಟಕ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಮುದ್ರಾಡಿ ಗ್ರಾ.ಪಂ. ಉಪಾಧ್ಯಕ್ಷೆ ರಮ್ಯಕಾಂತಿ, ವಿದ್ವಾನ್ ಡಾ. ವಾಸುದೇವ ಭಟ್, ಹೆಬ್ರಿ ಯೋಗೀಶ್ ಭಟ್, ಉಡುಪಿ ಜಿಲ್ಲಾ ಕ. ಸಾ. ಪ. ಪದಾಧಿಕಾರಿ ನರಸಿಂಹ ಮೂರ್ತಿ ಮೊದಲಾದವರು ಮಾತನಾಡಿ ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸಿದರು.ಮೆರವಣಿಗೆಯನ್ನು ಮುದ್ರಾಡಿ ದಿವಾಕರ ಎನ್. ಶೆಟ್ಟಿ ಉದ್ಘಾಟಿಸಲಿದ್ದಾರೆ. ಸರ್ವಾಧ್ಯಕ್ಷರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಮುದ್ರಾಡಿ ಶ್ರೀ ಮಹಾ ಗಣಪತಿ ದೇವಸ್ಥಾನದಿಂದ ಹೊರಡುವ ಮೆರವಣಿಗೆಯಲ್ಲಿ ಕನ್ನಡಾಂಬೆ ದೇವಿಯ ಸ್ತಬ್ದ ಚಿತ್ರದೊಂದಿಗೆ, ವಿವಿಧ ಕಲಾ ತಂಡಗಳು, ವಿದ್ಯಾರ್ಥಿಗಳು, ಅತಿಥಿಗಳು, ಗಣ್ಯರು, ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರಧ್ವಜ ವನ್ನು ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ವಸಂತಿ ಪೂಜಾರಿ ಮತ್ತು ಪರಿಷತ್ತಿನ ದ್ವಜವನ್ನು ಹೆಬ್ರಿ ತಾಲೂಕು ಕ. ಸಾ. ಪ. ಅಧ್ಯಕ್ಷ ಶ್ರೀನಿವಾಸ ಭಂಡಾರಿಯವರು ಬೆಳಗ್ಗೆ ಆರೋಹಣ ಮಾಡಲಿದ್ದಾರೆ. ಸಮಾರಂಭದ ಉದ್ಘಾಟನೆ ಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರ ಶಾಸಕ ವಿ. ಸುನಿಲ್ ಕುಮಾರ್ ನೆರವೇರಿಸಲಿದ್ದಾರೆ. ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಪುಸ್ತಕ ಬಿಡುಗಡೆ ಮಾಡಲಿದ್ದು ಭಾಷಣ ಮಾಡಲಿರುವರು . ಉಡುಪಿ ಜಿಲ್ಲೆ ಕ. ಸಾ. ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ರವರು ಆಶಯ ನುಡಿಯನ್ನಾಡಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸ್ವಾಗತಿಸಿ, ಮನೋಜ್. ಸಿ. ಪೂಜಾರಿ ಸೂರತ್ ಪುಸ್ತಕ ಮಳಿಗೆ ಉದ್ಘಾಟನೆ ಮಾಡುವರು. ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಗಣೇಶ್ ಶೆಣೈ, ಹಾಗೂ ಹಲವು ಮಂದಿ ಗಣ್ಯರು, ವಿಶೇಷ ಆಹ್ವಾನಿತರು ಉಪಸ್ಥಿತರಿರುವರು. ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿ ತಂಡ ಗಳಿಂದ ನಾಡಗೀತೆ, ರೈತ ಗೀತೆ, ಗೀತಾ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಆರೋಗ್ಯ ಸಾಹಿತ್ಯ, ಗೋಷ್ಠಿಗಳು, ಅಭಿನಂದನಾ ಕಾರ್ಯಕ್ರಮ, ಹೆಬ್ರಿ ತಾಲೂಕಿನ ಮಾಧ್ಯಮ ಮಿತ್ರರನ್ನು ಗುರುತಿಸುವಿಕೆ, ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಆಯ್ಕೆಯಾದ ಒಂಬತ್ತು ಸಾಧಕರಿಗೆ ಸನ್ಮಾನ, ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ. ಸಾ. ಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಲಿದ್ದು ಅತಿಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಗೆ ಹೆಬ್ರಿ ಪಾಂಚಜನ್ಯ ಯಕ್ಷ ಕಲಾ ಪ್ರತಿಷ್ಠಾನದ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಗ್ರಾಮಸ್ತರು, ಸಾಹಿತಿಗಳು, ಲೇಖಕರು, ಸಂಘ ಸಂಸ್ಥೆಯವರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.ಕ. ಸಾ. ಪ. ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಸ್ವಾಗತಿಸಿ, ಸ್ವಾಗತ ಸಮಿತಿ ಕಾರ್ಯದರ್ಶಿ ಬಲ್ಲಾಡಿ ಚಂದ್ರ ಶೇಖರ ಭಟ್ ವಂದಿಸಿದರು. ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಹಾಜರಿದ್ದರು.

Share this article