ಕನ್ನಡಪ್ರಭ ವಾರ್ತೆ ಸಾಗರ
ಪದವಿಯ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ಕಂಡುಕೊಳ್ಳಲು ವಿಫುಲ ಅವಕಾಶಗಳಿವೆ. ಅದಕ್ಕೆ ತಕ್ಕಂತೆ ತಮ್ಮ ಕೌಶಲ್ಯ ವನ್ನು ವೃದ್ಧಿಸಿಕೊಳ್ಳಲು ಪರಿಶ್ರಮದಿಂದ ಅಭ್ಯಾಸ ಮಾಡಬೇಕು ಎಂದು ಫೌಂಡೇಷನ್ ಸಂಸ್ಥಾಪಕ ಸಿಎ ದಿನೇಶ್ ಜೋಶಿ ಅಬ್ಸೆ ಹೇಳಿದರು.ತಾಲೂಕಿನ ಹೆಗ್ಗೋಡು ವಿದ್ಯಾಭಿವೃದ್ಧಿ ಸಂಘದ ಕಾಕಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಎ ಫೌಂಡೇಷನ್ ಹಾಗೂ ಕೌಶಲ್ಯ ಅಭಿವೃದ್ಧಿ ಕೋರ್ಸ್ ಉದ್ಘಾಟಿಸಿ ಮಾತನಾಡಿದ ಅವರು, ವಾಣಿಜ್ಯ ವಿಭಾಗದ ಗುಣಮಟ್ಟದ ಕಲಿಕೆಯಿಂದ ಇತರ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಕಾಲೇಜು ಅವಧಿಯಲ್ಲಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್ಥಿಕ ಸ್ಥಿತಿ ಸರಿಯಾಗಿ ಇರಬೇಕಾದರೆ ಲೆಕ್ಕಪರಿಶೋಧಕರು ಹೆಚ್ಚು ಜವಾಬ್ದಾರಿ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಕೂಡಿಟ್ಟ ಹಣ ಅಪವ್ಯಯ ಆಗದಂತೆ ಎಚ್ಚರ ವಹಿಸಬೇಕು ವೃತ್ತಿಯಲ್ಲಿ ಹಣದ ಹಿಂದೆ ಬೀಳಬಾರದು ಎಂದ ಅವರು, ದೇಶದಲ್ಲಿ ಆಗುತ್ತಿರುವ ಆರ್ಥಿಕ ಅಪರಾಧಗಳಲ್ಲಿ ಲೆಕ್ಕ ಪರಿಶೋಧಕರ ಕೈವಾಡ ಹೆಚ್ಚಾಗಿ ಇದ್ದೇ ಇರುತ್ತದೆ. ಆದ್ದರಿಂದ ಕೆಲಸದಲ್ಲಿ ಪ್ರಾಮಾಣಿಕತೆ ಮುಖ್ಯ ಎಂದು ಅಭಿಪ್ರಾಯಟ್ಟರು.ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರ ಅಧ್ಯಕ್ಷ ಡಾ.ಹೆಚ್.ಎಂ.ಶಿವಕುಮಾರ್, ಪ್ರಸ್ತುತ ತಾಲೂಕಿನಲ್ಲಿ ಡೆಂಘಿ ಜ್ವರ ಹರಡುತ್ತಿರುವುದರಿಂದ ರಕ್ತಕ್ಕೂ ಹೆಚ್ಚು ಬೇಡಿಕೆ ಬಂದಿದೆ. ಆದ್ದರಿಂದ ಯುವ ಸಮುದಾಯ ರಕ್ತದಾನಕ್ಕೆ ಮುಂದಾಗಬೇಕು. ಒಂದು ಯುನಿಟ್ ರಕ್ತ ನಾಲ್ಕು ಜನರಿಗೆ ಉಪಯೋಗವಾಗುತ್ತದೆ. ಜೊತೆಗೆ ಆರೋಗ್ಯವೂ ವೃದ್ಧಿಸುತ್ತದೆ ಎಂದರು.
ವಿಸಂ ಸಂಸ್ಥೆ ಅಧ್ಯಕ್ಷ ಕೇಶವ ಸಂಪೆಕೈ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಮುಖರಾದ ಭಾಗಿ ಸತ್ಯನಾರಾಯಣ, ನಾಗರಾಜ್ ಸಭಾಹಿತ್, ವ.ಶಂ.ರಾಮಚಂದ್ರ ಭಟ್, ಪ್ರಭಾಕರ, ವೆಂಕಟೇಶ್ ಕೆರೆಕೈ, ಪ್ರಾಚಾರ್ಯ ಎ.ಎಸ್.ಗಣಪತಿ, ರಕ್ತನಿಧಿ ಕೇಂದ್ರದ ಡಾ. ಉಲ್ಲಾಸ್ ಇತರರಿದ್ದರು.