ಕನ್ನಡಪ್ರಭ ವಾರ್ತೆ ಅಥಣಿ
ಶುಕ್ರವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪ್ರಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಇಲಾಖೆ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಬಾರದೇ ಇದ್ದಾಗ ಶಾಸಕರು ಬಡವರ ಹಸಿವು ನೀಗಿಸಲು ಸರ್ಕಾರ ರೂಪಿಸಿರುವ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಕ್ಕೆ ಉಚಿತವಾಗಿ ನೀಡುವ ಪಡಿತರ ಅಕ್ಕಿ ಕಾಳಸoತೆಯಲ್ಲಿ ಮಾರಾಟವಾಗುವುದಲ್ಲದೆ, ಹೊರ ರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಆಗುತ್ತಿರುವ ದೂರುಗಳು ಬಂದಿವೆ. ಇನ್ನು ಮೇಲೆ ಇಂತಹ ದೂರುಗಳು ಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಇಂಥ ಹಗರಣಗಳ ಮತ್ತೆ ಕಂಡು ಬಂದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕೆರೆ ತುಂಬುವ ಯೋಜನೆಯಡಿ ನಡೆದಿರುವ ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗಿದೆ. ಅಧಿಕಾರಿಗಳು ಅದನ್ನು ಬರುವ 15 ದಿನಗಳೊಳಗಾಗಿ ಪೂರ್ಣಗೊಳಿಸಿ ಬಾಡಗಿ ಮತ್ತು ಕೋಹಳ್ಳಿ ಕೆರೆಗಳಿಗೆ ಬೇಗ ನೀರು ತುಂಬಿಸುವ ಕಾರ್ಯ ಮಾಡಬೇಕು. ಈ ಕಾರ್ಯ ನಿಮ್ಮಿಂದ ಆಗದಿದ್ದರೆ ನೌಕರಿಗೆ ರಜೆ ಹಾಕಿ ಮನೆಗೆ ಹೋಗಿ, ನಾವು ಬೇರೆಯವರ ಕಡೆಯಿಂದ ಮಾಡಿಸಿಕೊಳ್ಳುತ್ತೇವೆ ಎಂದು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಾಮಾಜಿಕ ಅರಣ್ಯ ಇಲಾಖೆಯಿಂದ ತಯಾರಿಸುವ ಸಸಿಗಳನ್ನು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡಿರುವ ದೂರುಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಮಾಡಬಾರದು. ನಮ್ಮ ರಾಜ್ಯದ ರೈತರಿಗೆ ಮಾತ್ರ ಸಸಿಗಳನ್ನು ವಿತರಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಶಾಸಕ ಸವದಿ:
ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವಲ್ಲಿ ವಿಳಂಬವಾಗಿದ್ದು, ಹಂತ ಹಂತವಾಗಿ ಪುಸ್ತಕ ವಿತರಿಸಿದ್ದೇವೆ. ವಿತರಣೆಯಲ್ಲಿ ಸ್ವಲ್ಪ ತಾರತಮ್ಯ ಆಗಿದ್ದು ಸತ್ಯ. ಮುಂಬರುವ ದಿನಗಳಲ್ಲಿ ಹೀಗಾಗದಂತೆ ನಿಗಾ ವಹಿಸುತ್ತೇವೆ ಎಂದು ಹೇಳುವ ಮೂಲಕ ಜಾರಿಕೊಳ್ಳುವ ಪ್ರಯತ್ನಿಸಿದರು. ಆಗ ಶಾಸಕ ಸವದಿ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯ ಮಕ್ಕಳ ಪುಸ್ತಕ ವಿತರಣೆಯಲ್ಲಿ ತಾರತಮ್ಯ ಸಹಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಕಲಿಗೆಗೆ ತೊಂದರೆ ಆದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.