ಕನ್ನಡಪ್ರಭ ವಾರ್ತೆ ಹಾಸನ
ನಗರದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗಾಗಿ ರಚಿಸಿರುವ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳು ತಮ್ಮ ಉದ್ದೇಶವನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವುಗಳನ್ನು ಕೂಡಲೇ ರದ್ದುಪಡಿಸಿ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಗೃಹಲಕ್ಷ್ಮೀ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಎಷ್ಟರ ಮಟ್ಟಿಗೆ ಅಕ್ರಮ ಮತ್ತು ದುರುಪಯೋಗ ನಡೆದಿದೆ ಎಂಬುದನ್ನು ತಾವು ಅಂಕಿ-ಅಂಶಗಳ ಮೂಲಕ ಹೇಳಬೇಕಾದ ಅಗತ್ಯವಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಪ್ರಕಟವಾಗಿವೆ. ಅಲ್ಲದೆ, ಸ್ವಾಯತ್ತ ಸಂಸ್ಥೆಯಾದ ಸಿಎಜಿ ವರದಿಯಲ್ಲಿಯೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬಂದಿರುವ ಲೋಪಗಳು, ದುರುಪಯೋಗ ಹಾಗೂ ಆಡಳಿತದ ವೈಫಲ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದರು.ತೆರಿಗೆ ಹಣದ ದುರುಪಯೋಗ:
ಮೂರು ವರ್ಷಗಳಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಿ ಅವುಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ನೇಮಕ ಮಾಡಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗಿದೆ. ಆದರೆ ಈ ಸಮಿತಿಗಳು ನೈಜ ಫಲಾನುಭವಿಗಳ ಗುರುತಿಸುವಿಕೆ, ಯೋಜನೆಗಳ ಮೇಲ್ವಿಚಾರಣೆ ಹಾಗೂ ಅಕ್ರಮಗಳನ್ನು ತಡೆಯುವಲ್ಲಿ ಯಾವುದೇ ಪರಿಣಾಮಕಾರಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಫಲಾನುಭವಿಗಳ ಪಟ್ಟಿಯಲ್ಲಿ ಮೃತಪಟ್ಟವರ ಹೆಸರಿನಲ್ಲಿಯೂ ಹಣ ಬಿಡುಗಡೆಯಾಗಿರುವ ಕುರಿತು ವರದಿಗಳು ಬಂದಿವೆ. ಇಂತಹ ಪ್ರಕರಣಗಳನ್ನು ಸಂಬಂಧಪಟ್ಟ ಇಲಾಖೆ ಹಾಗೂ ಗ್ಯಾರಂಟಿ ಸಮಿತಿಗಳು ಏಕೆ ಗಮನಿಸಲಿಲ್ಲ? ಪ್ರತಿ ತಿಂಗಳು ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸುವ ಕೆಲಸ ಏಕೆ ನಡೆಯಲಿಲ್ಲ? ಎಂದು ಪ್ರಶ್ನಿಸಿದ ಅವರು, ಸಮಿತಿಗಳು ಜನಸೇವೆಗೆ ಬದಲಾಗಿ ರಾಜಕೀಯ ಉದ್ದೇಶಗಳಿಗೆ ಬಳಸಲ್ಪಡುತ್ತಿವೆ ಎಂದು ಟೀಕಿಸಿದರು. ಸರ್ಕಾರ ಈಗ ಮತ್ತೆ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹೊಸ ಸಮಿತಿಗಳನ್ನು ರಚಿಸುವುದಾಗಿ ಹೇಳುತ್ತಿರುವುದು ಅಚ್ಚರಿಯ ಸಂಗತಿ. ಈಗಾಗಲೇ ಅಸ್ತಿತ್ವದಲ್ಲಿರುವ ಸಮಿತಿಗಳ ಕಾರ್ಯಕ್ಷಮತೆಯ ಬಗ್ಗೆ ಪರಿಶೀಲನೆ ನಡೆಸದೆ ಹೊಸ ಸಮಿತಿಗಳನ್ನು ರಚಿಸುವ ಅಗತ್ಯವೇನು ಎಂದು ಪ್ರಶ್ನಿಸಿದ ಅವರು, ಇದು ಜನರ ತೆರಿಗೆ ಹಣದ ದುರುಪಯೋಗ ಎಂದು ಆರೋಪಿಸಿದರು.ಲಿಂಗೇಶ್ ಬಂಧನ: ರಾಜಕೀಯ ಪ್ರೇರಿತ ಎನ್ನುವ ಶಂಕೆ
------
ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಸರ್ಕಾರ ಪ್ರತಿತಿಂಗಳು ನೂರಾರು ಕೋಟಿ ರುಪಾಯಿ ಜಾಹೀರಾತುಗಳಿಗೆ ವೆಚ್ಚ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು ೫೨ ಸಾವಿರ ಕೋಟಿ ವೆಚ್ಚವಾಗುತ್ತಿದೆ. ಗ್ಯಾರಂಟಿ ಸಮಿತಿಗಳು ರಾಜಕೀಯ ಸಮಿತಿಗಳಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಹುದ್ದೆ ನೀಡುವ ಉದ್ದೇಶದಿಂದಲೇ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಹೀಗಾಗಿ ಇಂತಹ ಸಮಿತಿಗಳನ್ನು ಮುಂದುವರಿಸುವ ಬದಲು ಅವುಗಳನ್ನು ರದ್ದುಪಡಿಸಿ, ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.