ಎಂ. ಪ್ರಹ್ಲಾದ ಕನಕಗಿರಿ
ಮುಜರಾಯಿ ಇಲಾಖಾ ವ್ಯಾಪ್ತಿಯ ಇಲ್ಲಿನ ಶ್ರೀಕನಕಾಚಲಪತಿ ದೇಗುಲದ ೨೦೨೫-೨೬ನೇ ಸಾಲಿನ ತೆಂಗಿನಕಾಯಿ ಸಗಟು ವ್ಯಾಪಾರದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಲಕ್ಷಾಂತರ ಅವ್ಯವಹಾರದ ವಾಸನೆ ಬೀರಿದೆ. ದೇವಸ್ಥಾನ ಜಾಗೆಯ ಹದ್ದುಬಸ್ತು ಪೂರ್ಣಗೊಳ್ಳುವವರೆಗೂ ಯಾವುದೇ ಟೆಂಡರ್ ಪ್ರಕಿಯೆ ನಡೆಯಬಾರದು ಎಂದು ಸಾರ್ವಜನಿಕರು ಮಾ.೩೦ರಂದು ನಡೆದ ಬಹಿರಂಗ ಹರಾಜಿನ ಸಭೆ ರದ್ದಾದ ಬಳಿಕ ಮನವಿ ಸಲ್ಲಿಸಿದ್ದು, ಇದೀಗ ತೆಂಗಿನಕಾಯಿ ಹಾಗೂ ವಾರದ ಸಂತೆ ಭೂ ಬಾಡಿಗೆ ಟೆಂಡರ್ ಸುದ್ದಿ ಬಹು ಚರ್ಚಿತಗೊಂಡಿದೆ.
ಕಳೆದ ಸಾಲಿನಲ್ಲಿ ₹೨೯ ಲಕ್ಷ ಟೆಂಡರ್ ಆಗಿತ್ತು. ಆದರೆ, ಬೇರೆ ಇಲಾಖೆಯ ಜಾಗೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡಲು ಬರುವುದಿಲ್ಲ. ಇದರಿಂದ ಟೆಂಡರ್ ಮೊತ್ತ ಕಡಿಮೆಗೊಳಿಸಲು ಗುತ್ತಿಗೆದಾರರು ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೀಗೆ ಹಲವು ತಿಂಗಳುಗಳ ಕಾಲ ಪತ್ರ ವ್ಯವಹಾರ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿದ್ದು, ಟೆಂಡರ್ ಮೊತ್ತ ಕಡಿಮೆ ಮಾಡಲು ಬರುವುದಿಲ್ಲ. ಹರಾಜು ಆಗಿರುವ ಪೂರ್ಣ ಮೊತ್ತ ದೇವಸ್ಥಾನಕ್ಕೆ ಭರಿಸುವಂತೆ ಆದೇಶಿಸಿದ್ದಾರೆ.ಆದರೆ, ಗುತ್ತಿಗೆದಾರರು ಅಧಿಕಾರಿಗಳ ಆದೇಶ ಗಾಳಿಗೆ ತೂರಿ ವರ್ಷದೊಳಗಾಗಿ ಟೆಂಡರ್ ಮೊತ್ತ ಭರಿಸಬೇಕೆನ್ನುವುದು ಮುಜರಾಯಿ ಕಾಯಿದೆ ನಿಯಮವಿದ್ದರೂ ಹಣ ಕಟ್ಟಿರುವುದಿಲ್ಲ. ಇಲ್ಲಿಯರೆಗೂ ₹೨೧.೫೦ ಲಕ್ಷ ಮಾತ್ರ ತುಂಬಿದ್ದು, ಇನ್ನುಳಿದ ಬಾಕಿ ಮೊತ್ತ ತುಂಬಿರುವುದಿಲ್ಲ. ಟೆಂಡರ್ ಅವಧಿ ಮುಗಿದರೂ ಬಾಕಿ ಮೊತ್ತ ಏಕೆ ತುಂಬಿಸಿಕೊಂಡಿಲ್ಲ? ಹಣ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಗೆ ಮುಂದಾಗಲಾಗುವುದು ಎಂದು ಸ್ಥಳೀಯ ಹಲವು ಸಂಘಟನೆಗಳು ಎಚ್ಚರಿಸಿವೆ.
ಡಿಸಿ ಮಧ್ಯಸ್ಥಿಕೆಗೆ ಒತ್ತಾಯ: ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಯ ನಿಯಮಾನುಸಾರ ಟೆಂಡರ್ ನಡೆದಿದೆ. ಆದರೆ ಅಲ್ಪ ಪ್ರಮಾಣದಲ್ಲಿ ಜಾಗೆ ವಿಸ್ತರಣೆ ಮಾಡಿ ಟೆಂಡರ್ ಮಾಡಲಾಗಿದೆ. ಆದರೆ ಸ್ಥಳೀಯವಾಗಿ ಇದಕ್ಕೆ ವಿರೋಧವಾಗಿಲ್ಲ. ಗುತ್ತಿಗೆದಾರರು ಟೆಂಡರ್ ಹಣ ಪೂರ್ಣ ಪ್ರಮಾಣದಲ್ಲಿ ಭರಿಸಬೇಕು. ಹಣ ಪಾವತಿಸಿಕೊಳ್ಳುವುದಕ್ಕಾಗಿ ಮತ್ತು ವಾರದ ಸಂತೆ ಭೂ ಬಾಡಿಗೆ ಹಾಗೂ ತೆಂಗಿನಕಾಯಿ ಸಗಟು ವ್ಯಾಪಾರದ ಟೆಂಡರ್ ಪ್ರಕ್ರಿಯೆ ನಡೆಸಲು ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ದೇವಸ್ಥಾನ ಅಭಿವೃದ್ಧಿಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕನಕಾಚಲಪತಿ ದೇವಸ್ಥಾನದ ತೆಂಗಿನಕಾಯಿ ಟೆಂಡರ್ ಬಾಕಿ ಮೊತ್ತ ಭರಿಸಲು ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ೧೯೯೭ ಹಾಗೂ ೨೦೦೨ರ ಕಲಂ ೧೭ರ ಅನ್ವಯ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.