ಸಿದ್ದಾಪುರ: ತಾಲೂಕಿನ ಕರ್ಕಿಮಕ್ಕಿಯ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರೊಬ್ಬರು ಮುಖ್ಯ ಕಾರ್ಯನಿರ್ವಾಹಕರ ಜತೆಗೂಡಿ ಅಕ್ರಮ ನಡೆಸಿದ್ದಾರೆ ಎಂದು ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.ದೊಡ್ಮನೆ ಸೊಸೈಟಿಯಲ್ಲಿ ಅಕ್ರಮವಾಗಿದೆ ಎಂದು ದೊಡ್ಮನೆ ಸಮೀಪದ ಕುಡೆಗೋಡ ವಾಸಿಯಾಗಿರುವ ಪ್ರಕಾಶ ರಾಮಚಂದ್ರ ಹೆಗಡೆ ಅವರು ಸೊಸೈಟಿ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ, ಮುಖ್ಯ ಕಾರ್ಯ ನಿರ್ವಾಹಕರ ವಿರುದ್ಧ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಹಾಗೂ ಮುಖ್ಯ ಕಾರ್ಯನಿರ್ವಾಹಕರ ವಿರುದ್ಧ ೨ ಪ್ರತ್ಯೇಕ ಪ್ರಕರಣವನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಪ್ರಕರಣದ ವಿವರ: ೨೦೨೧- ೨೨ನೇ ಸಾಲಿನಲ್ಲಿ ಸಂಘದ ಅಧ್ಯಕ್ಷರಾದ ಸುಬ್ರಾಯ ಭಟ್ಟರ ಅಸಾಮಿ ಖಾತೆ ಸಾಲದ ಬಡ್ಡಿಯನ್ನು ಮತ್ತು ಅಸಲನ್ನು ನೈಜವಾಗಿ ಪಡೆದುಕೊಳ್ಳದೇ ಸಾಲದ ಮಿತಿಯನ್ನು ಹೆಚ್ಚಿಸಿ ಬಡ್ಡಿ ತುಂಬಿದಂತೆ ಕೃತಕವಾಗಿ ತೋರಿಸಿದ್ದಾರೆ. ಅರ್ಹತೆ ಇಲ್ಲದಿದ್ದರೂ ತಮಗೆ ತಾವೇ ಸಾಲದ ಮಿತಿಯನ್ನು ಹೆಚ್ಚಿಸಿ ಮಂಜೂರಿ ಮಾಡಿಕೊಂಡಿದ್ದಾರೆ. ಈ ಮೂಲಕ ಸಂಘಕ್ಕೆ ಪೋಟ್ ನಿಯಮ ಮೀರಿ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡಿದ್ದಾರೆ. ಅದೇ ರೀತಿ ವಿವೇಕ ಸುಬ್ರಾಯ ಭಟ್ಟ ಅವರ ಹೆಸರಿಗೆ ಕೃತಕವಾಗಿ ತೋರಿಸಿ ಅರ್ಹತೆ ಇಲ್ಲದಿದ್ದರೂ ತಮಗೆ ತಾವೇ ಸಾಲದ ಮಿತಿಯನ್ನು ಹೆಚ್ಚಿಸಿ ಮಂಜೂರಿ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ಅರ್ಹತೆ ಇಲ್ಲದಿದ್ದರೂ ಸೂಕ್ತ ಭದ್ರತೆ ಪಡೆಯದೇ ಅಪಾರ ಪ್ರಮಾಣದ ಸಾಲ ನೀಡಿ ಸಂಘಕ್ಕೆ ಲುಕ್ಸಾನು ಪಡಿಸಿದ್ದಾರೆ. ಸಂಘದ ಸಂಪನ್ಮೂಲಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು ಸಂಘಕ್ಕೆ ಮತ್ತು ಸದಸ್ಯರಿಗೆ ಲುಕ್ಸಾನು ಪಡಿಸಿದ್ದು ಈ ಕುರಿತು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ.ಅಧ್ಯಕ್ಷರ ಮತ್ತು ಕೆಡಿಸಿಸಿ ಮೇಲ್ವಿಚಾರಕರ ಪರಿಶೀಲನಾ ವರದಿಯಲ್ಲಿ ಪತ್ನಿ ಹೆಸರಿನಲ್ಲಿ ಪಡೆದ ಅಸಾಮಿ ಸಾಲವು ಕಟ್‌ಬಾಕಿ ಆಗಿದ್ದು, ನಿಯಮ ಬಾಹಿರವಾಗಿ ಅವರಿಗೆ ರಿಯಾಯಿತಿ ನೀಡಿ ಠರಾವು ಮಾಡಿದ್ದಾರೆ. ಈ ಮೂಲಕ ಸಂಘಕ್ಕೆ ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿದ್ದಾರೆ. ಈ ಕಾರಣದಿಂದ ಇವರ ಮೇಲೆ ಸೂಕ್ತ ಕ್ರಮಕ್ಕಾಗಿ ಪ್ರಕರಣಗಳನ್ನು ದಾಖಲಿಸಿದ್ದೇನೆ ಎಂದು ಪ್ರಕಾಶ ಹೆಗಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಮುದ್ರ ಸುಳಿಗೆ ಸಿಲುಕಿದ ಪ್ರವಾಸಿಗನ ರಕ್ಷಣೆ
ಗೋಕರ್ಣ: ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಕುಡ್ಲೆ ಕಡಲತೀರದಲ್ಲಿ ಮಂಗಳವಾರ ಸಂಜೆ ನಡೆದಿದೆ.ಉತ್ತರ ಪ್ರದೇಶ ಮೂಲದ ರಾಹುಲ್‌ಕುಮಾರ(೨೮) ಪ್ರಾಣಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದಾರೆ.ಮುರಾರಿ ಬಾಪುರವರ ರಾಮಕಥಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಸುಳಿಗೆ ಸಿಲುಕಿದ್ದು, ರಕ್ಷಣೆಗಾಗಿ ಕೂಗಿದ್ದಾರೆ.ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿಗಳಾದ ಮಂಜುನಾಥ ಹರಿಕಂತ್ರ, ಪ್ರದೀಪ ಅಂಬಿಗ ಮತ್ತು ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ಜೆಟ್‌ಸ್ಕಿ ಮೂಲಕ ತೆರಳಿ ಸಮುದ್ರದ ಅಲೆಯ ರಭಸದಲ್ಲಿಯೋ ಹರಸಾಹಸ ಮಾಡಿ ಜೀವ ರಕ್ಷಣೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.