ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರುಪಾಯಿ ಅಕ್ರಮ ನಡೆದಿದ್ದು, ಕೂಡಲೇ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡ ವೇಳೆ ಇದೇ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ರಾಜ್ಯಾದ್ಯಂತ ಪ್ರತಿಭಟಿಸಿ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಈಗ ಅವರ ಸಂಪುಟದ ಸಚಿವರ ವಿರುದ್ಧವೇ ಅಕ್ರಮ ಅವ್ಯವಹಾರ ಆರೋಪದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರು ನಾಯಕರು ಏಕೆ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಕೂಡಲೇ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಿ, ತಪ್ಪಿಸ್ಥರ ವಿರುದ್ಧ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.ಬಿಜೆಪಿ ಮುಖಂಡರಾದ ಗುತ್ತಿಗೆನೂರು ವಿರುಪಾಕ್ಷ ಗೌಡ, ರಾಮಲಿಂಗಪ್ಪ, ಸಾಧನ ಹಿರೇಮಠ, ಎಚ್.ಹನುಮಂತಪ್ಪ, ಡಾ.ಎಸ್.ಜೆ.ವಿ. ಮಹಿಪಾಲ್, ಉಡೇದ ಸುರೇಶ, ಸುಗುಣಾ, ನಾಗವೇಣಿ, ವಿಜಯಲಕ್ಷ್ಮಿ ಇದ್ದರು.
"ನೂರಾರು ಕೋಟಿ ದರೋಡೆ ಮಾಡಿದ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು, ಕ್ರೈಂ ಕರ್ನಾಟಕವನ್ನು ಆವರಿಸಿದೆ, ಕಾಂಗ್ರೆಸ್ ಪಕ್ಷವನ್ನು ಕೊನೆಗಾಣಿಸೋಣ, ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಇರಲಿ, ನಿಲ್ಲಿಸಿ ನಿಲ್ಲಿಸಿ ಅಧಿಕಾರಿ ಮೇಲೆ ದಬ್ಬಾಳಿಕೆ ನಿಲ್ಲಿಸಿ " ಎಂಬ ಪೋಸ್ಟರ್‌ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಲಾಯಿತು.