ಸಮೀಕ್ಷೆ ಏನೇ ಇದ್ರೂ, ಕಾಂಗ್ರೆಸ್‌ಗೆ ಎರಡಂಕಿ ಸ್ಥಾನ ಗೆಲ್ಲುವ ವಿಶ್ವಾಸ

KannadaprabhaNewsNetwork |  
Published : Jun 02, 2024, 01:46 AM ISTUpdated : Jun 02, 2024, 05:03 AM IST
Congress flag

ಸಾರಾಂಶ

ಚುನಾವಣಾ ಸಮೀಕ್ಷೆ ಏನೇ ಬಂದರೂ ಕಾಂಗ್ರೆಸ್‌ ಎರಡಂಕಿ ಸ್ಥಾನ ಗೆಲ್ಲುವ ವಿಶ್ವಾಸವಿದೆ.

 ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಕಾಂಗ್ರೆಸ್‌ ಆಶಾವಾದಿಯಾಗಿದ್ದು, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ 14 ರಿಂದ 16 ಸ್ಥಾನ ದೊರೆಯಲಿದೆ ಎಂದು ತಿಳಿಸಿದೆ. ಇನ್ನು ಗ್ಯಾರಂಟಿ ಯೋಜನೆ ನಿಜಕ್ಕೂ ಕೆಲಸ ಮಾಡಿದರೆ ಈ ಸಂಖ್ಯೆ 20 ಮುಟ್ಟಿದರೂ ಅಚ್ಚರಿಯಿಲ್ಲ ಎಂಬ ನಂಬಿಕೆ ಕಾಂಗ್ರೆಸ್ಸಿಗರದ್ದು.

ಏನೇ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾದರೂ ಕಾಂಗ್ರೆಸ್‌ ಮಾತ್ರ ಈ ಬಾರಿ ರಾಜ್ಯದಲ್ಲಿ ಎರಡಂಕಿ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂಬ ವಿಶ್ವಾಸದಲ್ಲಿದೆ. ಗ್ಯಾರಂಟಿ ಯೋಜನೆಗಳು, ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯಿಂದಾಗಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಿಗಲಿದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಿದರೂ, ಈ ಬಾರಿ ರಾಜ್ಯದಲ್ಲಿ ಎರಡಂಕಿ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂಬ ವಿಶ್ವಾಸದಲ್ಲಿದ್ದಾರೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರ ಕಾಂಗ್ರೆಸ್‌ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಈ ಬಾರಿ 14ರಿಂದ 16 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವರದಿ ದೊರೆತಿತ್ತು. ಆಂತರಿಕ ಸಮೀಕ್ಷೆಯಲ್ಲಿ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಗೆಲುವು ಖಚಿತವಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ 50-50 ಅವಕಾಶವಿದೆ ಎಂದು ತಿಳಿದು ಬಂದಿತ್ತು. ಆದಾಗ್ಯೂ, ಗ್ಯಾರಂಟಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್‌ ಕೈ ಹಿಡಿದರೆ ರಾಜ್ಯದಲ್ಲಿ 16 ಸ್ಥಾನಗಳವರೆಗೆ ಗೆಲ್ಲುವುದು ಖಚಿತ ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು.

ಅದರಲ್ಲೂ ಮೊದಲ ಹಂತಕ್ಕಿಂತ ಎರಡನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷೆಗೂ ಮೀರಿ ಸ್ಥಾನಗಳು ಲಭ್ಯವಾಗುವ ಸಾಧ್ಯತೆಯಿದೆ ಎಂಬುದು ಕಾಂಗ್ರೆಸ್‌ ನಾಯಕರ ಅಭಿಪ್ರಾಯವಾಗಿದೆ.

ಅದರ ಜತೆಗೆ, ರಾಜ್ಯ ಗುಪ್ತಚರ ಇಲಾಖೆ ನೀಡಿದ ವರದಿಯಲ್ಲಿಯೂ ಕಾಂಗ್ರೆಸ್‌ 12ರಿಂದ 14 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು. ಹೀಗೆ ಪಕ್ಷದ ಆಂತರಿಕ ಸಮೀಕ್ಷೆ ಮತ್ತು ಗುಪ್ತಚರ ಇಲಾಖೆಯ ವರದಿಯನ್ನಾಧರಿಸಿ ರಾಜ್ಯದಲ್ಲಿ ಈ ಬಾರಿ ಎರಡಂಕಿ ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂಬ ವಿಶ್ವಾಸವನ್ನು ಪಕ್ಷದ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ಅದಕ್ಕೆ ಪೂರಕವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಚುನಾವಣೆ ಮುನ್ನವೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದೆ. ಅಲ್ಲದೆ ಕಾಂಗ್ರೆಸ್‌ ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನೂ ಹೇಳಿದ್ದೆ. ಅದೇ ರೀತಿ ಇದೀಗ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಎರಡಂಕಿ ಸ್ಥಾನಗಳು ಬರುವುದು ಖಚಿತ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು