ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಮಲೆನಾಡು ಪ್ರದೇಶಾಭಿವೃದ್ದಿ ಅನುದಾನದಲ್ಲಿ ಪಟ್ಟಣದ ಆಗುಂಬೆ ವೃತ್ತದಲ್ಲಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣದ ಉದ್ಘಾಟನೆಯನ್ನು ನೆರವೇರಿಸಿ, ತುಂಗಾನದಿಗೆ ತಡೆಗೋಡೆ ನಿರ್ಮಾಣದ ಸಲುವಾಗಿ ಸರ್ಕಾರದಿಂದ ಮಂಜೂರಾಗಿದ್ದ 4 ಕೋಟಿ ರು. ಅನುದಾನ ಅವಕಾಶವಾದಿ ಗುತ್ತಿಗೆದಾರರ ಬೇಜವಾಬ್ದಾರಿ ಪರಿಣಾಮ ಹಿಂದಕ್ಕೆ ಹೋಗಿದೆ. ತಾಲೂಕಿನ ಓರ್ವ ಗುತ್ತಿಗೆದಾರ ಟೆಂಡರ್ ಹಾಕಿದ್ದು, ನಂತರದಲ್ಲಿ ಕಾಮಗಾರಿ ಮಾಡದೇ ಒಳ ಗುತ್ತಿಗೆದಾರರು ಸಿಗದ ಕಾರಣ ಕಾಮಗಾರಿ ಕೈಚೆಲ್ಲಿದ ಪರಿಣಾಮ 4 ಕೋಟಿ ಹಣ ಹಿಂದೆ ಹೋಗಿದೆ. ಇಂತವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಿದೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥಗೌಡರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ಕಡೆಯಿಂದ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ಈ ಭಾಗದ ಶಾಸಕರುಗಳು ಸೇರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿ, ಕಳೆದ 50 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ನಾನು ಕಳೆದ ಅವಧಿಯಲ್ಲಿ ಈ ಕ್ಷೇತ್ರಕ್ಕೆ 3200 ಕೋಟಿಗೂ ಮಿಕ್ಕಿ ಅನುದಾನ ತಂದಿದ್ದೇನೆ ಎಂದರು.ಬೇರೆಯವರು ಮಾಡಿರುವ ಕೆಲಸ ತನ್ನದೆಂದು ಹೇಳಿಕೊಂಡು ಅಧಿಕಾರದಲ್ಲಿ ಇದ್ದಾಗ ಏನನ್ನೂ ಮಾಡದ ಕೆಲವರು ನನ್ನ ವಿರುದ್ದ ಟೀಕೆ ಮಾಡುತ್ತಿದ್ದಾರೆ. ಗಾಂಧಿ ಬುದ್ದ ಲೋಹಿಯಾ ಹೀಗೆ ದೊಡ್ಡವರ ಹೆಸರು ಹೇಳಿದರೆ ಸಾಲದು. ಹಿರಿಯರಾದ ನಾವು ತೀರಾ ಕೆಳ ಹಂತಕ್ಕೆ ಹೋಗಬಾರದು ಎಂದು ಪರೋಕ್ಷವಾಗಿ ಮಾಜಿ ಶಾಸಕ ಕಿಮ್ಮನೆ ಹೆಸರು ಹೇಳದೇ ಟಾಂಗ್ ನೀಡಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಕೆಸ್ತೂರು ಮಂಜುನಾಥ್, ಪಪಂ ಸದಸ್ಯರು ಇದ್ದರು.