ಕನ್ನಡಪ್ರಭ ವಾರ್ತೆ ಅರಕಲಗೂಡು

ರೈತರ ಬದುಕು ಸಮೃದ್ಧಗೊಳಿಸುವುದು, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವುದು, ಯುವಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವುದು ಮತ್ತು ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಅಭಿವೃದ್ಧಿಯ ಪ್ರಮುಖ ಗುರಿಯಾಗಬೇಕು ಎಂದು ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ, ಧರ್ಮ, ಭಾಷೆ ಹಾಗೂ ಪಕ್ಷಭೇದಗಳನ್ನು ಮೀರಿ ತಾಲೂಕು, ಕರ್ನಾಟಕ ಹಾಗೂ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಸಮಾನತೆ, ನ್ಯಾಯ, ಶಿಕ್ಷಣ, ಉದ್ಯೋಗ, ರೈತರ ಕಲ್ಯಾಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ದೇಶದ ಪ್ರಗತಿಯಲ್ಲಿ ಯುವಜನತೆ ಹಾಗೂ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ತ್ಯಾಗದ ಫಲವೇ ಸ್ವಾತಂತ್ರ್ಯ: ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಸಿ. ಸೌಮ್ಯ ಧ್ವಜಾರೋಹಣ ನೆರವೇರಿಸಿ, ಧ್ವಜ ಸಂದೇಶ ನೀಡಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಅಸಂಖ್ಯಾತ ಮಹನೀಯರನ್ನು ಸ್ಮರಿಸಿದಾಗ ನಮ್ಮ ಮನಗಳು ಭಾವುಕರಾಗುತ್ತವೆ. ಸ್ವಾತಂತ್ರ್ಯ ಎಂದರೆ ಕೇವಲ ಒಂದು ದಿನದ ಸಂಭ್ರಮವಲ್ಲ; ಅದು ಸಾವಿರಾರು ತ್ಯಾಗಗಳ ಫಲ, ಕೋಟ್ಯಂತರ ಭಾರತೀಯರ ಕನಸು ಹಾಗೂ ನಮ್ಮ ಪೂರ್ವಜರ ಹೋರಾಟದ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ತ್ಯಾಗ ಮತ್ತು ಹೋರಾಟದ ಫಲವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಗೌರವದಿಂದ ಬದುಕುತ್ತಿದ್ದೇವೆ. ಅಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಸ್ವಾತಂತ್ರ್ಯದ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವುದರ ಜೊತೆಗೆ, ದೇಶದ ಏಕತೆ, ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಸಾಧಕರಿಗೆ ಸನ್ಮಾನ ನೀಡುವ ಮೂಲಕ ಅವರ ಸೇವೆ ಹಾಗೂ ಸಾಧನೆಯನ್ನು ಅಭಿನಂದಿಸಲಾಯಿತು.


ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ವಿದ್ಯಾರ್ಥಿಗಳ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದ ಸಂದೇಶ ಸಾರಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾತಂತ್ರ್ಯ ದಿನಾಚರಣೆಗೆ ಮತ್ತಷ್ಟು ಮೆರುಗು ತಂದವು.

ತಾಲೂಕು ಆಡಳಿತದ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ, ಜನಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೈತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.