ನ.5ರಂದು ನೀರಾವರಿ ಸಲಹಾ ಸಮಿತಿ ಸಭೆ

KannadaprabhaNewsNetwork |  
Published : Oct 31, 2025, 03:30 AM IST
ಆಲಮಟ್ಟಿ | Kannada Prabha

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವ ನೀರಾವರಿ ಸಲಹಾ ಸಮಿತಿ ಸಭೆ ನ.5ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನ.5ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವ ನೀರಾವರಿ ಸಲಹಾ ಸಮಿತಿ ಸಭೆ ನ.5ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಐಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನ.5ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ಜುಲೈ 8 ರಿಂದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ಅ.25 ರವರೆಗೆ ನೀರು ಹರಿಸಲಾಗಿತ್ತು. ನ.4ರವರೆಗೂ ಮುಂಗಾರು ಹಂಗಾಮಿನ ಅವಧಿಯಿದೆ. ಸದ್ಯ ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ನೀರು ಹರಿಯುತ್ತದೆ? ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ. ಕಳೆದ ವರ್ಷ ಏಪ್ರಿಲ್ 6ರವರೆಗೂ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದರೂ ಆಲಮಟ್ಟಿ ಹಾಗೂ ನಾರಾಯಣಪುರ ಎರಡೂ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಸದ್ಯ ಎರಡೂ ಜಲಾಶಯಗಳಿಂದ ಬಳಕೆ ಯೋಗ್ಯ 125 ಟಿಎಂಸಿ ಅಡಿ ನೀರು ಲಭ್ಯವಿದೆ. ಭಾಷ್ಪೀಕರಣ, ಕೈಗಾರಿಕೆ ಮತ್ತಿತರ ಬಳಕೆಗೆ ಉಳಿಸಿಕೊಂಡು ನೀರಾವರಿಗೆ ಸುಮಾರು 80 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಹೀಗಾಗಿ ವಾರಾಬಂಧಿ ಪದ್ಧತಿ ಅಳವಡಿಸಿದರೆ 2026ರ ಮಾರ್ಚ್ ವರೆಗೂ ನೀರು ಹರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ವರ್ಷ ಮೇ 19 ರಿಂದ ಆರಂಭಗೊಂಡಿದ್ದ ಆಲಮಟ್ಟಿ ಜಲಾಶಯದ ಒಳಹರಿವು ಬಹುತೇಕ ಕಡಿಮೆಯಾಗುತ್ತಿದೆ. ಇಲ್ಲಿಯವರೆಗೆ ಸುಮಾರು 800 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಇದೇ ಅವಧಿಯಲ್ಲಿ 690 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ನದಿ ಪಾತ್ರಕ್ಕೆ ಹರಿದು ಹೋಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಆಲಮಟ್ಟಿಯಲ್ಲೇ ಐಸಿಸಿ ಸಭೆ ನಡೆಸಿ:

ಪ್ರತಿ ವರ್ಷ ಆಲಮಟ್ಟಿಯಲ್ಲಿಯೇ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಐಸಿಸಿ ಸಭೆ ನಡೆಯುತ್ತಿತ್ತು. ಆದರೆ ಈ ಬಾರಿ ಮುಂಗಾರು ಹಂಗಾಮಿಗೆ ನೀರು ಹರಿಸುವ ಸಭೆಯೂ ಬೆಂಗಳೂರಿನಲ್ಲಿ ನಡೆದಿದೆ. ಈಗ ಹಿಂಗಾರು ಹಂಗಾಮಿನ ಸಭೆಯೂ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ರೈತರಿಂದ ದೂರವಾಗಿ ಈ ಸಭೆ ನಡೆಯುತ್ತಿದೆ. ಇದು ಖಂಡನೀಯ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದರು.

ಆಲಮಟ್ಟಿಯಲ್ಲಿಯೇ ಸಭೆ ನಡೆಸಿದರೆ, ಈ ಭಾಗದ ರೈತರ ನೈಜ ಸಮಸ್ಯೆಗಳ ಅರಿವು ಆಗುತ್ತಿತ್ತು ಜೊತೆಗೆ ಕಾಲುವೆಯ ಕೊನೆ ಅಂಚಿನವರೆಗೂ ನೀರು ಹರಿಸಬೇಕು, ಕಾಲುವೆಗಳ ದುರಸ್ತಿ ಮತ್ತೀತರ ಸಮಸ್ಯೆಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯುತ್ತಿತ್ತು. ಈಗ ಬೆಂಗಳೂರಿನಲ್ಲಿ ಸಭೆ ನಡೆಸುವುದರಿಂದ ಯಾವುದೇ ಪ್ರತಿಕ್ರಿಯೆಗಳು ಇರುವುದಿಲ್ಲ, ಅಧಿಕಾರಿಗಳು ಹೇಳಿದ್ದೇ ಅಂತಿಮವಾಗಲಿದೆ. ರೈತರ ನೈಜ ಸಮಸ್ಯೆ ಗೊತ್ತಾಗುವುದಿಲ್ಲ ಎಂದು ಅವರು ಆರೋಪಿಸಿದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ