ಕನ್ನಡಪ್ರಭ ವಾರ್ತೆ ಮಂಡ್ಯ
ಚಲುವರಾಯಸ್ವಾಮಿ ಅವರಿಗೆ ಜಲಸಂಪನ್ಮೂಲ ಖಾತೆ ಸಿಗುವ ನಿರೀಕ್ಷೆ ಇತ್ತು. ಅದರಂತೆಯೇ ನೀರಾವರಿ ಖಾತೆ ಅವರಿಗೆ ದೊರಕಿದೆ. ಜೆ.ಎಚ್.ಪಟೇಲ್ ಸಂಪುಟದಲ್ಲಿ ಜಿಲ್ಲೆಯವರೇ ಆದ ಕೆ.ಎನ್.ನಾಗೇಗೌಡರು ನೀರಾವರಿ ಖಾತೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಅವರ ಬಳಿಕ ಜಿಲ್ಲೆಯ ಚಲುವರಾಯಸ್ವಾಮಿ ಅವರಿಗೆ ಒಲಿದುಬಂದಿದೆ.
ಜೆಡಿಎಸ್- ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ, ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ, ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಖಾತೆ ನಿರ್ವಹಿಸಿದ್ದ ಎನ್.ಚಲುವರಾಯಸ್ವಾಮಿ ಅವರು ಇದೀಗ ಜಲಸಂಪನ್ಮೂಲ ಖಾತೆಯ ಹೊಣೆಯನ್ನು ಹೊತ್ತಿದ್ದಾರೆ.ನೀರಾವರಿ ಖಾತೆ ವಹಿಸಿಕೊಂಡ ಸಮಯದಲ್ಲೇ ಕಾವೇರಿ ವಿವಾದವೂ ಎದುರಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಆದೇಶ ಹೊರಬಿದ್ದಿದೆ. ರೈತರು, ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇಲ್ಲಿನ ರೈತರ ಬೆಳೆಗಳಿಗೂ ನೀರು ಕೊಡಬೇಕಾದ ದೊಡ್ಡ ಸವಾಲು ಅವರಿಗೆ ಈಗ ಎದುರಾಗಿದೆ. ಅದನ್ನು ಹೇಗೆ ನಿಭಾಯಿಸುವರು ಎನ್ನುವುದನ್ನು ನೋಡಬೇಕಿದೆ.
ಕೃಷಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ನರೇಂದ್ರಸ್ವಾಮಿ ಅವರು, ಮಳವಳ್ಳಿ ಕ್ಷೇತ್ರದಲ್ಲಿ ಹನಿ ಮತ್ತು ತುಂತುರು ನೀರಾವರಿಯನ್ನು ಪರಿಚಯಿಸಿ ರೈತರೆಲ್ಲರೂ ಒಗ್ಗೂಡಿ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ಧತಿಯನ್ನು ಪರಿಚಯಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರಿಂದ ಜಿಲ್ಲೆಗೆ ಯಾವ ಕೊಡುಗೆ ಸಿಗಬಹುದೆಂಬುದು ಕುತೂಹಲ ಮೂಡಿಸಿದೆ.