ಕಾರಟಗಿ: ಏತ ನೀರಾವರಿ ಯೋಜನೆಗಳಿಂದ ಕೊನೆ ಮತ್ತು ಕೆಳ ಭಾಗದ ರೈತರ ಬದುಕು ಹಸನಾಗುತ್ತದೆ ಎಂದು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಲ ಸಂಪನ್ಮೂಲ ಇಲಾಖೆ, ನೀರಾವರಿ ನಿಗಮದ ಅಡಿಯಲ್ಲಿ 31ನೇ ವಿತರಣಾ ಹಾಗೂ ಉಪವಿತರಣಾ ಕಾಲುವೆಗಳ ಕೊನೆ ಭಾಗದ 38 ಹಳ್ಳಿಗಳ 15,605 ಎಕರೆ ಭೂಮಿಗೆ ನೀರುಣಿಸುವ ಉಳೆನೂರು ಏತ ನೀರಾವರಿ ಯೋಜನೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕನಕಗಿರಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ರೈತರ ಹೊಲಗಳಿಗೆ ನೀರು ಒದಗಿಸಬೇಕು ಎಂಬುದು ನನ್ನ ಸಂಕಲ್ಪವಾಗಿದೆ. ರೈತರು ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ನಾನು ವಿವಿಧ ರೀತಿಯ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದೇನೆ ಎಂದು ಹೇಳಿದರು.ಶಾಸಕರಾಗಿ ತಮ್ಮ ಮೊದಲ ಅವಧಿಯಲ್ಲಿ ರೈಸ್ ಪಾರ್ಕ್ ನಿರ್ಮಾಣ ಮಾಡಿದ್ದು, ಎರಡನೇ ಅವಧಿಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸುವುದು ಮತ್ತು ತೋಟಗಾರಿಕೆ ಪಾರ್ಕ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗ ಈ ಭಾಗದ ರೈತರ ಹೊಲಗಳಿಗೆ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಸುಮಾರು 25 ಸಾವಿರ ಎಕರೆ ಪ್ರದೇಶಗಳಿಂದ ನೀರುಣಿಸುವ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಏತ ನೀರಾವರಿ ಅದ್ಭುತವಾದ ಯೋಜನೆಯಾಗಿದ್ದು, ಐದು ವರ್ಷ ನಿರ್ವಹಣೆ ಇರುತ್ತದೆ. ಇದು ಮುಂದಿನ ಪೀಳಿಗೆಗೆ ದೊರೆಯುವಂತೆ ಸದ್ಬಳಕೆ ಮಾಡಿಕೊಳ್ಳಬೇಕು. ಕಾರಟಗಿಗೆ ನೂರು ಹಾಸಿಗೆಯ ಆಸ್ಪತ್ರೆ, 220 ಕೆವಿ ವಿದ್ಯುತ್ ಸ್ಟೇಷನ್ ಮಾಡಿ ಈ ಭಾಗದ ವಿದ್ಯುತ್ ಸಮಸ್ಯೆ ಇತ್ಯರ್ಥಪಡಿಸಿದ್ದೇನೆ ಎಂದರು.ರೈತರ ಯೋಜನೆಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುತ್ತದೆ. ಈ ಬಾರಿ ನನ್ನ ಅವಧಿಯಲ್ಲಿ ₹130 ಕೋಟಿ ರಸ್ತೆ ದುರಸ್ತಿಗೆ ಅನುದಾನ ತಂದಿದ್ದೇನೆ. ಗ್ಯಾರಂಟಿಯಿಂದ ಅನುದಾನ ಇಲ್ಲ ಎನ್ನುವುದು ಸುಳ್ಳು. ಇನ್ನೆರಡು ವರ್ಷದ ಅವಧಿಯಲ್ಲಿ ಕ್ಷೇತ್ರದ ಸಂಪೂರ್ಣ ಚಿತ್ರಣ ಬದಲಾಗಲಿದೆ ಎಂದರು.
ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೂದುಗುಂಪಾ ವಿರಕ್ತಮಠದ ಸಿದ್ದೇಶ್ವರ ಸ್ವಾಮಿಗಳ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಾಳಮ್ಮ ಯರಡೋಣಾ, ಉಪಾಧ್ಯಕ್ಷ ದ್ಯಾವಣ್ಣ ಅಚ್ವಳ್ಳಿ, ಗ್ರಾಪಂ ಅಧ್ಯಕ್ಷ ಶಿವರಾಜ ಪಾಟೀಲ್ ಈಳಿಗನೂರು, ಮುಖಂಡರಾದ ಬಿ. ಬಸವರಾಜಪ್ಪ ಸಿದ್ದಾಪುರ, ಶಶಿಧರಗೌಡ ಪಾಟೀಲ್, ಶಿವರೆಡ್ಡಿ ನಾಯಕ, ಕೆ. ಸಿದ್ದನಗೌಡ, ಚೆನ್ನಬಸವ ಸುಂಕದ್, ಆರ್‌ಡಿಸಿಸಿ ನಿರ್ದೇಶಕ ಶರಣೇಗೌಡ, ಸಂಗಮೇಶಗೌಡ, ಪ್ರಕಾಶಗೌಡ ಪಾಟೀಲ್, ಶರಣಪ್ಪ ಭೋವಿ, ವೀರೇಶ ದಳಪತಿ, ಶರಣಪ್ಪ ಸುಗ್ಗೆನಹಳ್ಳಿ ಮತ್ತಿತರು ಇದ್ದರು. ಶಿವಕುಮಾರ ಗೋನಾಳ, ಕೊಪ್ಪಳದ ಮೆಹಬೂಬ್ ಕಾರ್ಯಕ್ರಮ ನಿರ್ವಹಿಸಿದರು.