ತುಂತುರು ನೀರಾವರಿ ಪೈಪ್ ವಿತರಣೆಗೆ ಚಾಲನೆ
ಸುಮಾರು 70 ಕೋಟಿ ರು. ವೆಚ್ಚದ ತೋಟಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ 20 ದಿನಗಳಲ್ಲಿ ಮೊದಲು ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ಭಾನುವಾರ ತುಂತುರು ನೀರಾವರಿ ಪೈಪ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಅಕ್ಕನಹಳ್ಳಿ, ಜಿನ್ನೇನಹಳ್ಳಿ, ಬೆಳಗಿಹಳ್ಳಿ, ಮಟ್ಟನವಿಲೆ, ಜಂಬೂರು, ಗೌಡಗೆರೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ತೋಟಿಕೆರೆ, ಮಾದಲಗೆರೆ, ಬೆಳಗಿಹಳ್ಳಿ, ಮೇಟಿಕೆರೆ, ಕಟಗಿಹಳ್ಳಿ, ಅಕ್ಕನಹಳ್ಳಿ, ಸೋಸಲಗೆರೆ, ಬದ್ದಿಕೆರೆ, ಹೆಬ್ಬಳಲು, ಬಾಣನಕೆರೆ, ಸಮುದ್ರಹಳ್ಳಿ, ಮುದ್ದನಹಳ್ಳಿ, ಹುಲಿಕೆರೆ, ಅತ್ತಿಹಳ್ಳಿ, ಕಗ್ಗೆರೆ, ಕಾವಲು ಹೊಸೂರು, ನರಸಿಂಹರಾಜಪುರ, ಬಳ್ಳಾರಿ ಕಾವಲು, ಚಿಕ್ಕೋನಹಳ್ಳಿ, ರಾಜಪುರ, ಮಾವಿನಹಳ್ಳಿ, ಮಟ್ಟನವಿಲೆ, ದೊಡ್ಡೇರಿ, ಎಂ. ಹೊನ್ನೇನಹಳ್ಳಿ, ಗೂಳಿ ಹೊನ್ನೇನಹಳ್ಳಿ, ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವುದರಿಂದ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಿ ತೆಂಗು ಬೆಳೆ ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಸಂತೆ ಶಿವರ ನೀರಾವರಿ ಯೋಜನೆಗೆ 5 ಪೈಪ್‌ಗಳ ಜಾಗದ ಸಮಸ್ಯೆ ಇದೆ. ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳನ್ನು ಹಂತ ಹಂತವಾಗಿ ತುಂಬಿಸಲಾಗುವುದು. ತೋಟವನ್ನು ಐದು ನೇಗಿಲು ಟ್ರ್ಯಾಕ್ಟರ್ ಉಳುಮೆ ಮಾಡಬೇಡಿ. ಇದರಿಂದ ಬೇರುಗಳು ಹರಿಯುತ್ತವೆ. 9 ಹಲ್ಲಿನ ಕಲ್ಟಿವೇಟರ್ ಉಪಯೋಗಿಸಿ ಎಂದು ತಿಳಿಸಿದರು.
ಸಹಾಯಕ ಕೃಷಿ ಅಧಿಕಾರಿ ಮೋಹನ್ ಮಾತನಾಡಿ, ಎಣ್ಣೆ ಗಾಣ, ರಾಗಿ ಹಿಟ್ಟು, ಮೌಲ್ಯವರ್ಧನೆ ಮಾರಾಟ ಹಾಗೂ ಬೇಕರಿ ಉತ್ಪನ್ನ ತಯಾರು ಮಾಡುವವರಿಗೆ ಸರ್ಕಾರದಿಂದ 50% ಸಹಾಯಧನವಿದೆ. ಆಸಕ್ತಿ ಇರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.