ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನಲ್ಲಿ ಉತ್ತಮ ಮಳೆ ಶುಭಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳ ರಕ್ಷಣೆಗೆ ಮತ್ತು ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಜೊತೆಗೆ ನಾಲತವಾಡ ಪಟ್ಟದ ವ್ಯಾಪ್ತಿಯ ಗ್ರಾಮಗಳ ಮೂಲಕ ಹಾಯ್ದು ಹೋಗಿರುವ ಚಿಮ್ಮಲಗಿ ಏತ ನಿರಾವರಿ ಅರ್ಧಕ್ಕೆ ನಿಂತು ಹೋಗಿರುವ ನೀರಾವರಿ ಕಾಲುವೆ ಹಾಗೂ ಬ್ರಿಜ್ಡ್ ಕಾಮಗಾರಿ ಮುಂಬರುವ ದಿನಗಳಲ್ಲಿ ಕೈಗೆತ್ತಿಕೊಳ್ಳುವ ಮೂಲಕ ರೈತರ ಆಸೆ ಈಡೇರಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕಾಂಗ್ರೆಸ್ ಸರಕಾರ ಸದಾ ಸಿದ್ಧವಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಶುಕ್ರವಾರ ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ರೈತರು ಸಂಕಷ್ಟ ಅನುಭವಿಸುವಂತಾಯಿತು. ಆದರೆ, ಈ ಬಾರಿ ತಾಲೂಕಿನೆಲ್ಲೆಡೆ ಮುಂಗಾರು ರೋಹಿಣಿ ಮಳೆ ಸುರಿದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಒಳ್ಳೆಯ ಮುನ್ಸೂಚನೆ ನೀಡಿದ್ದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಕಾರಣ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಮತ್ತು ಅಲ್ಲಿನ ಜನರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ನಮ್ಮ ಭಾಗದ ರೈತರ ಅತ್ಯಂತ ಅಗತ್ಯ ಬೇಡಿಕೆಗಳೋಲ್ಲೊಂದಾದ ಆಲಮಟ್ಟಿ ಕೃಷ್ಣಾ ನದಿಯಿಂದ ಚಿಮ್ಮಲಗಿ ಏತನಿರಾವರಿ, ನಾಗರಬೆಟ್ಟ ಏತ ನೀರಾವರಿ, ಬೂದಿಹಾಳ ಪೀರಾಪೂರ ಏತನಿರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಈ ಭಾಗದ ರೈತರ ಬೇಡಿಕೆ ಈಡೇರಿಸಿದ ಕೀರ್ತಿ ನಮ್ಮ ಅವಧಿಯಲ್ಲಿನ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ತಾಲೂಕಿನ ನಾಲತವಾಡ ಪಟ್ಟಣದ ವ್ಯಾಪ್ತಿಯ ಚಿಮ್ಮಲಗಿ ಏತ ನಿರಾವರಿ ಯೋಜನೆಯ ಅಂಬ್ರಯ್ಯನಗುಡಿ ಹತ್ತಿರವಿರುವ ವಿತರಣಾ ಕಾಲುವೆಯ ೧೩ಎ ೧೯.೬ ಕಿಮೀನಲ್ಲಿ ಕಾಲುವೆ ಬ್ರಿಜ್ಡ್ ಕಾಮಗಾರಿ ನಿರ್ಮಾಣ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿತ್ತು. ಆದರೆ, ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಯಾವುದೇ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗಿಲ್ಲ. ಸದ್ಯ ಕರೆಯಲಾಗಿದ್ದ ಕಾಮಗಾರಿ ಟೆಂಡೆರ್‌ನಲ್ಲಿ ಒಬ್ಬರೇ ಮಾತ್ರ ಗುತ್ತಿಗೆದಾರರು ಭಾಗವಹಿಸಿರುವುದರಿಂದ ಈಗಾಗಲೇ ಕರೆಯಲಾಗಿದ್ದ ಟೆಂಡರ್ ಅನ್ನು ರದ್ದು ಗೊಳಿಸಿ ಮರು ಟೆಂಡೆರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಟೆಂಡರ್ ಆಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.--
ಕೋಟ್ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸುಳ್ಳುಗಳನ್ನು ಸೃಷ್ಟಿಸಿ ವಿರೋಧಿಗಳನ್ನು ನಿರ್ಮಾಣ ಮಾಡಿ ತಮ್ಮ ರಾಜಕೀಯ ಬೇಳೆ ಭೇಯಿಸಿಕೊಳ್ಳುವ ಉದ್ದೇಶವೇ ಹೊರತು ನಿಜವಾದ ಸಾಮಾಜಿಕ ಜವಾಬ್ದಾರಿ ಕೆಲಸವಂತು ಅಲ್ಲ. ಇದನ್ನು ಜನರು ಅರ್ಥೈಸಿಕೊಳ್ಳಬೇಕು.
-ಸಿ.ಎಸ್.ನಾಡಗೌಡ(ಅಪ್ಪಾಜಿ) ಶಾಸಕ.---
ಬಾಕ್ಸ್ನೀರಾವರಿಗಾಗಿ ಇಂದಿನಿಂದ ಧರಣಿ
ಮುದ್ದೇಬಿಹಾಳ:ತಾಲೂಕಿನ ನಾಲತವಾಡ ಪಟ್ಟಣದ ವ್ಯಾಪ್ತಿಯ ಅಮರೇಶ್ವರ ದೇವಸ್ಥಾನದ ಹತ್ತಿರ ಚಿಮ್ಮಲಗಿ ಏತನೀರಾವರಿ ಹಾಗೂ ನಾಗರಬೆಟ್ಟ ಏತನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಅವಾರ್ಡ್ ಕಾಫಿ ನೀಡಿ ಅಪೂರ್ಣಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೂನ್ 8ರಂದು 9 ಗಂಟೆಗೆ ಸಾಮಾಜಿಕ ಹೋರಾಟಗಾರ ಶಿವಾನಂದವಾಲಿ ಅವರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.