ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ

KannadaprabhaNewsNetwork | Published : Jun 8, 2024 12:33 AM

ಸಾರಾಂಶ

ಕಳೆದ ಏ.೫ ರಂದು ಕೊಲೆಯಾದ ಸ್ಥಿತಿಯಲ್ಲಿ ಸಿಕ್ಕಿದ್ದ ಬಸವರಾಜ (೪೭) ಅವರ ಮೃತ ದೇಹ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಎಲ್ಲೆಯಲ್ಲಿರುವ ಬಿಂದಾಸ್ ಬಾರ್ ಮುಂಭಾಗ ದೊರಕಿದ್ದು, ಆತನ ಎದೆಯ ಭಾಗ ಮತ್ತು ಬಲ ಪೆಕ್ಕೆ ಹಾಗೂ ಎರಡು ಮಂಡಿಗಳ ಬಳಿ ಗಾಯಗಳಾಗಿದ್ದವು. ಇದನ್ನು ನೋಡಿದರೆ ಬಸವರಾಜನನ್ನು ಕೊಲೆ ಮಾಡಿ ಇಲ್ಲಿಗೆ ತಂದು ಬಿಸಾಡಿ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಸವರಾಜು ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೈಸೂರು ತಾಲೂಕಿನ ಕಾಳಿಸಿದ್ದನಹುಂಡಿ ಗ್ರಾಮಸ್ಥರು ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕಳೆದ ಏ.೫ ರಂದು ಕೊಲೆಯಾದ ಸ್ಥಿತಿಯಲ್ಲಿ ಸಿಕ್ಕಿದ್ದ ಬಸವರಾಜ (೪೭) ಅವರ ಮೃತ ದೇಹ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಎಲ್ಲೆಯಲ್ಲಿರುವ ಬಿಂದಾಸ್ ಬಾರ್ ಮುಂಭಾಗ ದೊರಕಿದ್ದು, ಆತನ ಎದೆಯ ಭಾಗ ಮತ್ತು ಬಲ ಪೆಕ್ಕೆ ಹಾಗೂ ಎರಡು ಮಂಡಿಗಳ ಬಳಿ ಗಾಯಗಳಾಗಿದ್ದವು. ಇದನ್ನು ನೋಡಿದರೆ ಬಸವರಾಜನನ್ನು ಕೊಲೆ ಮಾಡಿ ಇಲ್ಲಿಗೆ ತಂದು ಬಿಸಾಡಿ ಹೋಗಿದ್ದಾರೆ ಎಂದು ಮೃತನ ಸಹೋದರ ಮಂಜು ಅವರು ಆರೋಪಿಸಿದರು.

ಏ.೫ರಂದು ನನ್ನ ಅಣ್ಣ ಬಸವರಾಜು, ಗ್ರಾಮದ ಬುಂಡೇಗೌಡ ಎಂಬವರ ಮನೆಯ ಹೆಂಚು ಕೈಯಾಡಲು ಸಿದ್ದೇಶ, ರೇವಣ್ಣ, ಮಹದೇವು ಹಾಗೂ ಜಯರಾಮು ಅವರು ಹೋಗಿದ್ದರು. ಸಂಜೆ ೫ ಗಂಟೆಗೆ ಮನೆಗೆ ವಾಪಸ್ ಬಂದು, ಪುನಃ ಸಂಜೆ ೭ ಗಂಟೆಗೆ ಹೊರಗಡೆ ಹೋಗುವುದಾಗಿ ಅತ್ತಿಗೆ ಚಿನ್ನತಾಯಮ್ಮ ಅವರಿಗೆ ತಿಳಿಸಿ ಹೋದವನು ಬೆಳಿಗ್ಗೆಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಮಾರನೇ ದಿನ ನನ್ನ ಚಿಕ್ಕಪ್ಪನ ಮಗ ಮಂಜು ನಮ್ಮ ಮನೆಗೆ ಬಂದು ಹಂಪಾಪುರ ಗ್ರಾಮದ ಎಲ್ಲೆಯಲ್ಲಿರುವ ಬಿಂದಾಸ್ ಬಾರ್ ಮುಂದೆ ಸತ್ತು ಬಿದ್ದಿದ್ದಾನೆ ಎಂದು ತಿಳಿಸಿದ್ದಾಗಿ ಹೇಳಿದರು.

ನಂತರ ಬಾರ್‌ನಲ್ಲಿದ್ದ ಸಿಸಿ ಕ್ಯಾಮೆರಾ ನೋಡಲಾಗಿ ಏ.೫ರ ಮಧ್ಯರಾತ್ರಿ ೧.೨೭ರ ಸಮಯದಲ್ಲಿ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯ ಮಂಜುನಾಥ ಮತ್ತು ವಿಜಯ ಪ್ರಸಾದ್ ಎಂಬ ಪೊಲೀಸರು ನನ್ನ ಅಣ್ಣನನ್ನು ಬಾರ್ ಮುಂಭಾಗಕ್ಕೆ ತಂದು ಮಲಗಿಸಿ ಹೋಗಿರುವುದು ಕಂಡುಬಂದಿದೆ. ಅಂದು ರಾತ್ರಿ ನನ್ನ ಅಣ್ಣನ ಜೊತೆ ನಮ್ಮ ಗ್ರಾಮದ ಬೀರೇಶ, ಕೃಷ್ಣ, ಸುರೇಶ, ರೇವಣ್ಣ ಹಾಗೂ ಕರಿಯ ಅವರು ಇದ್ದ ಬಗ್ಗೆ ತಿಳಿದುಬಂದಿದ್ದು, ಅವರನ್ನು ವಿಚಾರಣೆಗೊಳಪಡಿಸಿ, ನನ್ನ ಅಣ್ಣನ ಕೊಲೆಗೆ ಕಾರಣರಾದವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂಬಂಧವಾಗಿ ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಇದು ಕೊಲೆಯಲ್ಲ, ಬೈಕ್ ಅಪಘಾತ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಅವರಿಗೆ ಮನವಿ ಸಲ್ಲಿಸಿದರು.

Share this article