ಕನ್ನಡಪ್ರಭ ವಾರ್ತೆ ಮೂಡುಬಿದಿರೆತಾಲೂಕಿನ ಇರುವೈಲು ಗ್ರಾ.ಪಂ.ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಇಲ್ಲಿ 41.7 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ 3 ವಿವೇಕ ಶಾಲಾ ಕೊಠಡಿಗಳನ್ನು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಉದ್ಘಾಟಿಸಿದರು.
ಶಾಲಾ ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ಇರುವೈಲು ಐ.ತಾರಾನಾಥ ಪೂಜಾರಿ ಮಾತನಾಡಿ, ಪ್ರತಿಭೆಗಳು ಹುಟ್ಟುವುದು ಅರಮನೆಯಲ್ಲಿ ಅಲ್ಲ, ಗುಡಿಸಲಲ್ಲಿ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗಿದೆ. ಈ ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ದೊರಕುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗಾಗಿ ಒಮ್ಮತದಿಂದ ಶ್ರಮಪಡೋಣ ಎಂದು ಹೇಳಿದರು. ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಟಿ. ಹಾಗೂ ಗುತ್ತಿಗೆದಾರ ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್., ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ ಮುಗೇರ, ಉಪಾಧ್ಯಕ್ಷ ವಲೇರಿಯನ್ ಕುಟಿನ್ಹಾ, ಪಂಚಾಯಿತಿ ಸದಸ್ಯ ನವೀನ್ ಪೂಜಾರಿ ಕಿಟ್ಟುಬೆಟ್ಟು ಸಹಿತ ಇತರ ಸದಸ್ಯರು, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ, ರುಕ್ಕಯ್ಯ ಪೂಜಾರಿ ಆಳಿಯೂರು, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಫರ್ನಾಂಡಿಸ್ ಸ್ವಾಗತಿಸಿ, ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ವಂದಿಸಿದರು.