ಹೋದಲ್ಲೆಲ್ಲಾ ಅಭ್ಯರ್ಥಿ ಘೋಷಿಸುವ ಬಿಎಸ್‌ವೈ ಹೊಸ ಪಕ್ಷ ಕಟ್ತಾರಾ?

KannadaprabhaNewsNetwork |  
Published : Mar 04, 2026, 01:30 AM IST
3ಕೆಡಿವಿಜಿ4-ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಮುಖಂಡರಾದ ಶಾಂತರಾಜ ಪಾಟೀಲ, ಎಚ್.ಎಸ್.ಶಿವಕುಮಾರ, ಎಚ್.ಪಿ.ರಾಜೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೋದ ಕಡೆಗೆಲ್ಲಾ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತಿದ್ದಾರೆ ಇದನ್ನು ನೋಡಿದರೆ, ಎಲ್ಲೋ ಪ್ರಾದೇಶಿಕ ಪಕ್ಷ ಕಟ್ಟಿ, ಈಗ ಘೋಷಿಸುತ್ತಿರುವವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಪಕ್ಷದ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ, ಹೊನ್ನಾಳಿಯ ಶಾಂತರಾಜ ಪಾಟೀಲ್ ಹೇಳಿದ್ದಾರೆ.

- ಮನೆಯೊಂದು ಮೂರು ಬಾಗಿಲಾದ ಬಿಜೆಪಿಯನ್ನು ರಾಜ್ಯಾಧ್ಯಕ್ಷರು ಸರಿ ಮಾಡಲಿ: ಮುಖಂಡರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೋದ ಕಡೆಗೆಲ್ಲಾ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತಿದ್ದಾರೆ ಇದನ್ನು ನೋಡಿದರೆ, ಎಲ್ಲೋ ಪ್ರಾದೇಶಿಕ ಪಕ್ಷ ಕಟ್ಟಿ, ಈಗ ಘೋಷಿಸುತ್ತಿರುವವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಪಕ್ಷದ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ, ಹೊನ್ನಾಳಿಯ ಶಾಂತರಾಜ ಪಾಟೀಲ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯಾ ರಾಜ್ಯಗಳ ಚುನಾವಣೆಗಳು ಸಮೀಪಿಸಿದಾಗ ಪಕ್ಷದ ಕೇಂದ್ರೀಯ ಚುನಾವಣಾ ಮಂಡಳಿ ಸಭೆ ಮಾಡಿ, ಅಭ್ಯರ್ಥಿಗಳು ಯಾರು ಆಗಬೇಕು ಎಂಬುದನ್ನು ತೀರ್ಮಾನಿಸಿ, ಹೆಸರನ್ನು ಪ್ರಕಟಿಸುವುದು ಬಿಜೆಪಿಯಲ್ಲಿ ನಡೆದುಬಂದಿದೆ. ಆದರೆ, ಯಡಿಯೂರಪ್ಪ- ವಿಜಯೇಂದ್ರ ತಾವು ಹೋದ ಕಡೆಯೆಲ್ಲಾ ಅಭ್ಯರ್ಥಿ ಘೋಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಮೂಗಿಗೆ ತುಪ್ಪ ಸವರಬೇಡಿ:

ದಾವಣಗೆರೆಯಲ್ಲಿ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಮೊದಲು ಮೂರೂ ಬಾಗಿಲನ್ನು ಒಂದು ಮಾಡುವ ಕೆಲಸ ರಾಜ್ಯಾಧ್ಯಕ್ಷರು ಸೇರಿದಂತೆ ಯಾರೂ ಮಾಡುತ್ತಿಲ್ಲ. ಸ್ವತಃ ರಾಜ್ಯಾಧ್ಯಕ್ಷರೇ ಒಂದು ಗುಂಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗುಂಪುಗಾರಿಕೆಗೆ ಅನುವು ಮಾಡಿಕೊಡುತ್ತಿದ್ದಾರೆ. ಹೊನ್ನಾಳಿ ತಾ. ತರಗನಹಳ್ಳಿ ಗ್ರಾಮದ ವಿಬಿ ಜಿ ರಾಮ್ ಜಿ ಕಾರ್ಯಕ್ರಮದಲ್ಲಿ ಅನೇಕರು ಪಾಲ್ಗೊಂಡಿರಲಿಲ್ಲ. ಸ್ವತಃ ನಮ್ಮ ನಾಯಕರೇ ಮುಂದಿನ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ ಎಂಬುದಾಗಿ ದೊಡ್ಡ ಜವಾಬ್ಧಾರಿ ನೀಡಿದ್ದು, ಎಲ್ಲರನ್ನೂ ಒಟ್ಟಿಗೆ ಒಯ್ಯುವ ಕೆಲಸ ರಾಜ್ಯಾಧ್ಯಕ್ಷರು ಮಾಡಲಿ. ಅದನ್ನು ಬಿಟ್ಟು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರೆ ಕಿಂದರ ಜೋಗಿಯಂತೆ ಆಗುತ್ತಾರೆ ಎಂದರು.

ಮಂತ್ರಿಗಿರಿ ಮನವಿ ಅಪ್ರಸ್ತುತ:

ಮೊನ್ನೆ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಜನ್ಮ ದಿನಾಚರಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವುದು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಘೋಷಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಜೊತೆಗೆ ರೇಣುಕಾಚಾರ್ಯ ಮುಂದಿನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಲು ಸಹಕರಿಸುವಂತೆ ಮನವಿ ಮಾಡಿದ್ದು ಅಪ್ರಸ್ತುತ ಎಂದು ಆಕ್ಷೇಪಿಸಿದರು.

ಮುಖಂಡರು-ಕಾರ್ಯಕರ್ತರು ಒಪ್ಪಲ್ಲ:

ಹೊನ್ನಾಳಿಯಿಂದ ರೇಣುಕಾಚಾರ್ಯ, ಚನ್ನಗಿರಿ ಮಾಡಾಳ್ ವಿರೂಪಾಕ್ಷಪ್ಪ, ಮಾಯಕೊಂಡ ಎಂ.ಬಸವರಾಜ ನಾಯ್ಕ, ಜಗಳೂರು ಎಸ್.ವಿ.ರಾಮಚಂದ್ರ, ಹರಿಹರ ಚಂದ್ರಶೇಖರ ಪೂಜಾರ, ಹರಪನಹಳ್ಳಿ ಕರುಣಾಕರ ರೆಡ್ಡಿ ಹೆಸರನ್ನು ಯಡಿಯೂರಪ್ಪ ಪ್ರಸ್ತಾಪಿಸಿದ್ದಾರೆ. ಬಿಜೆಪಿ ತನ್ನದೇ ಆದ ಸಂಸದೀಯ ಮಂಡಳಿ ನಿಯಮ ಹೊಂದಿದೆ. ಕೇಂದ್ರ ಸಮಿತಿಯು ಹೆಸರನ್ನು ಅಂತಿಮಗೊಳಿಸುತ್ತದೆ. ಹೀಗಿರುವಾಗ ಚುನಾವಣೆಗೆ 2 ವರ್ಷ ಮುಂಚೆಯೇ ಅಭ್ಯರ್ಥಿಗಳ ಹೆಸರು ಘೋಷಣೆ ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ. ಮುಖಂಡರು, ಕಾರ್ಯಕರ್ತರೂ ಒಪ್ಪುವುದಿಲ್ಲ ಎಂದು ಹೇಳಿದರು.

ಅಭ್ಯರ್ಥಿಗಳ ಘೋಷಣೆ ಹಿಂಪಡೆಯಿರಿ:

ವಿಧಾನಸಭೆಗೆ ನಾವೂ ಆಕಾಂಕ್ಷಿಗಳು. ಹೊನ್ನಾಳಿಗೆ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ, ಎಂ.ಆರ್.ಮಹೇಶ, ಜಗಳೂರು ಎಚ್.ಪಿ.ರಾಜೇಶ, ಚನ್ನಗಿರಿಗೆ ಎಚ್.ಎಸ್.ಶಿವಕುಮಾರ ತುಮ್ಕೋಸ್, ಮಾಯಕೊಂಡಕ್ಕೆ ಜಿ.ಎಸ್. ಶ್ಯಾಮ್‌ ಸೇರಿದಂತೆ ಅನೇಕ ನಿಷ್ಠಾವಂತರು ಆಕಾಂಕ್ಷಿಗಳಿದ್ದೇವೆ. ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷವೇ ಹೊರತು, ನಾಯಕರನ್ನು ಆಧರಿಸಿದ ಪಕ್ಷವಲ್ಲ. ಯಡಿಯೂರಪ್ಪ ಅಭ್ಯರ್ಥಿಗಳ ಘೋಷಣೆ ಮಾಡುತ್ತಿರುವುದನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೃಪಾಪೋಷಿತ ನಾಟಕ ಮಂಡಳಿ:

ಲೋಕಸಭೆ ಚುನಾವಣೆ ಪೂರ್ವದಲ್ಲಿ ಡಾ. ಟಿ.ಜಿ. ರವಿಕುಮಾರ ಅವರಿಗೆ ಬಿಜೆಪಿ ಟಿಕೆಟ್‌ಗಾಗಿ ರೇಣುಕಾಚಾರ್ಯ ಮತ್ತು ಟೀಂ ದೆಹಲಿ ಮಟ್ಟದಲ್ಲಿ ಲಾಬಿ ಮಾಡಿ, ಕಡೆಗೆ ಡಾ.ರವಿಕುಮಾರ್‌ಗೆ ಕಾಂಗ್ರೆಸ್‌ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ದಕ್ಷಿಣದಲ್ಲಿ ಎಸ್.ಎಲ್. ಆನಂದಪ್ಪ ಹೆಸರನ್ನು ಮುನ್ನೆಲೆಗೆ ತಂದು, ಆನಂದಪ್ಪ ಸಹ ಕಾಂಗ್ರೆಸ್ ಸೇರುವಂತೆ ಮಾಡಿದ್ದರು. ರೇಣುಕಾಚಾರ್ಯ ಮತ್ತು ಟೀಂ ಶಾಮನೂರು ಕೃಪಾಪೋಷಿತ ನಾಟಕ ಮಂಡಳಿಯಲ್ಲಿ ಇದ್ದುಕೊಂಡು, ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ಶಾಂತರಾಜ ಪಾಟೀಲ್ ಆರೋಪಿಸಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ, ಚನ್ನಗಿರಿ ಎಚ್.ಎಸ್‌. ಶಿವಕುಮಾರ ತುಮ್ಕೋಸ್, ಎಂ.ಆರ್.ಮಹೇಶ, ಮಾಯಕೊಂಡದ ಮಂಜಾನಾಯ್ಕ, ಜಿ.ಎಸ್.ಶ್ಯಾಮ್‌, ಅಣಬೇರು ಜೀವನಮೂರ್ತಿ, ಹೊನ್ನಾಳಿ ಎಂ.ಆರ್. ಮಹೇಶ, ಚನ್ನಗಿರಿ ಗಿರೀಶ, ದೇವೇಂದ್ರಪ್ಪ, ಬಸಾಪುರ ಗಣೇಶ, ಗುಡ್ಡೇಶ, ರಮೇಶ, ದುಗ್ಗೇಶ ಇತರರು ಇದ್ದರು.

- - -

(ಕೋಟ್ಸ್‌) ಬಿಜೆಪಿ ಕಷ್ಟದಲ್ಲಿ ಇದ್ದಾಗಲೆಲ್ಲಾ ನಾನು ಪಕ್ಷದ ಕೆಲಸ ಮಾಡಿದ್ದೇನೆ. ಚುನಾವಣೆ ಕೆಲವೇ ದಿನಗಳು ಇರುವಾಗ ಟಿಕೆಟ್ ನೀಡಿ ನನ್ನನ್ನು ಬಲಿಪಶು ಮಾಡಲಾಗಿದೆ. ಚುನಾವಣೆಗೆ 2 ವರ್ಷಗಳಿದ್ದು, ನನಗೆ ಪಕ್ಷದ ಜವಾಬ್ಧಾರಿ ಕೊಟ್ಟು, 2 ವರ್ಷದ ನಂತರ ಬಂದು ನೋಡಲಿ. ಆಗ ಯಾರಿಗೆ ಬೇಕೋ ಅವರಿಗೆ ಟಿಕೆಟ್ ಕೊಡಲಿ. ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷದ ಜವಾಬ್ದಾರಿ ನನಗೇ ಕೊಡಲಿ.

- ಎಚ್.ಎಸ್. ಶಿವಕುಮಾರ, ತುಮ್ಕೋಸ್, ಟಿಕೆಟ್ ಆಕಾಂಕ್ಷಿ, ಚನ್ನಗಿರಿ ಕ್ಷೇತ್ರ.

- - - ಜಗಳೂರು ಕ್ಷೇತ್ರದ ನಾನು ಎಲ್ಲಿಯೋ ಹೋಗುತ್ತೇನೆಂದು ಕ್ಷೇತ್ರದಲ್ಲಿ ಅನೇಕರು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಎಲ್ಲಿಯೂ ಹೋಗಲ್ಲ, ಯಾವುದೇ ಪಕ್ಷ ಸೇರುವುದಿಲ್ಲ. ಜಗಳೂರಿನಲ್ಲೇ ಇರುತ್ತೇನೆ. ನಾನೂ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಹೊನ್ನಾಳಿಯಲ್ಲಿ ಯಡಿಯೂರಪ್ಪನವರ ಹೇಳಿಕೆಯಿಂದ ನೋವಾಗಿದೆ. ನಾನು ಟಿಕೆಟ್‌ಗೆ ಬೇಡಿಕೆ ಇಡುತ್ತಿದ್ದೇನೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ.

- ಎಚ್.ಪಿ.ರಾಜೇಶ, ಮಾಜಿ ಶಾಸಕ, ಜಗಳೂರು ಕ್ಷೇತ್ರ.

- - - ಬಿಎಸ್‌ವೈ ತಾವು ಘೋಷಿಸಿದ ಹೆಸರು ತಕ್ಷಣವೇ ವಾಪಸ್‌ ಪಡೆಯಲಿ. ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಮಾ.5ರ ಬೆಳಗ್ಗೆ 11 ಗಂಟೆಗೆ ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಪಕ್ಷದ ಹಿರಿಯ ಮುಖಂಡರ ಸಭೆ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಡಾ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ನಮಗೆ ನ್ಯಾಯ ಸಿಗದಿದ್ದರೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನೂ ಭೇಟಿ ಮಾಡಿ, ಹೋರಾಟ ಮಾಡುತ್ತೇವೆ.

- ಶಾಂತರಾಜ ಪಾಟೀಲ, ಟಿಕೆಟ್‌ ಆಕಾಂಕ್ಷಿ, ಹೊನ್ನಾಳಿ ಕ್ಷೇತ್ರ.

- - -

-3ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಮುಖಂಡರಾದ ಶಾಂತರಾಜ ಪಾಟೀಲ, ಎಚ್.ಎಸ್. ಶಿವಕುಮಾರ, ಎಚ್.ಪಿ.ರಾಜೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಗ್ರಹಣ ನೆರಳು ಬೆಳಕಿನ ಆಟ ಆತಂಕ ಬೇಡ
ಗ್ರಹಣಕ್ಕೂ ಮುನ್ನ ತೂಬಗೆರೆಯಲ್ಲಿ ರಥೋತ್ಸವ ಸಂಭ್ರಮ