ಕನ್ನಡಪ್ರಭ ವಾರ್ತೆ ಕಾರವಾರ
ಇತರ ರಾಷ್ಟ್ರಗಳ ಮೇಲೆ ಸದಾ ಬೇಹುಗಾರಿಕೆ ನಡೆಸುವ ಚೀನಾ, ಇದಕ್ಕಾಗಿ ಹಲವು ತಂತ್ರಗಳನ್ನು ಬಳಸುತ್ತದೆ. ಹೀಗಾಗಿ, ವಲಸೆ ಬಂದಿರುವ ಈ ಸೀಗಲ್ ಹಕ್ಕಿ ಕೂಡ ಬೇಹುಗಾರಿಕೆಗೆ ಬಂದಿತ್ತಾ ಎಂಬ ಸಂಶಯ ಮೂಡಿದ್ದು, ನೌಕಾಪಡೆಯ ಅಧಿಕಾರಿಗಳು ಹಾಗೂ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ನಗರದ ಕಡಲತೀರದ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಗಾಯಗೊಂಡು, ನಿತ್ರಾಣ ಸ್ಥಿತಿಯಲ್ಲಿ ಈ ಸೀಗಲ್ ಹಕ್ಕಿ ಕುಳಿತಿತ್ತು. ಉಳಿದ ಹಕ್ಕಿಗಳಿಗಿಂತ ಭಿನ್ನವಾಗಿ ಕಂಡು ಬಂದಿದ್ದು, ಸ್ಥಳೀಯರ ಕುತೂಹಲಕ್ಕೆ ಕಾರಣವಾಯಿತು. ಹಕ್ಕಿಯ ಬೆನ್ನಿನ ಭಾಗದಲ್ಲಿ ಎಲೆಕ್ಟ್ರಾನಿಕ್ ಉಪಕರಣದಂತಿರುವ ವಸ್ತುವನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಕ್ಕಿಯನ್ನು ಸೆರೆ ಹಿಡಿದು ಪರಿಶೀಲನೆ ನಡೆಸಿದರು. ಈ ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್ ಉಪಕರಣದಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ಎಂಬ ವಿಳಾಸ ಪತ್ತೆಯಾಗಿದೆ. ಹೀಗಾಗಿ, ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.ವೈಜ್ಞಾನಿಕ ಅಧ್ಯಯನಕ್ಕೆ ಟ್ರ್ಯಾಕರ್ ಬಳಕೆ:ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸಾಮಾನ್ಯವಾಗಿ ಪಕ್ಷಿಗಳ ಚಲನವಲನ, ಅವುಗಳ ಆಹಾರ ಪದ್ಧತಿ ಹಾಗೂ ವಲಸೆ ಹೋಗುವ ಮಾರ್ಗಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಸಂಶೋಧನಾ ಸಂಸ್ಥೆಗಳು ಇಂತಹ ಜಿಪಿಎಸ್ ಟ್ರ್ಯಾಕರ್ ಬಳಸುತ್ತವೆ.
ಸದ್ಯ ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಟ್ರ್ಯಾಕರ್‌ನಲ್ಲಿರುವ ಮಾಹಿತಿಯ ಆಧಾರದ ಮೇಲೆ ಚೀನಾದ ಸಂಬಂಧಪಟ್ಟ ಅಕಾಡೆಮಿಯನ್ನು ಸಂಪರ್ಕಿಸಲು ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.ಈ ಮಧ್ಯೆ, ನೌಕಾನೆಲೆ ಪ್ರದೇಶವ್ಯಾಪ್ತಿಯಲ್ಲಿ ಈ ಹಕ್ಕಿ ಸಿಕ್ಕ ಹಿನ್ನೆಲೆಯಲ್ಲಿ ನೌಕಾದಳದ ಅಧಿಕಾರಿಗಳು ಹಾಗೂ ಪೊಲೀಸರು ಕೂಡ ತನಿಖೆ ಕೈಗೊಂಡಿದ್ದು, ಬೇಹುಗಾರಿಕೆಗೆ ಈ ಪಕ್ಷಿ ಬಂದಿತ್ತಾ ಎಂಬ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.