ಮಂಗಳೂರು/ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತ ದೂರಿನ ಪ್ರಕರಣ, ದೂರುದಾರನಿಗೇ ಉಲ್ಟಾ ಹೊಡೆದಿದೆ. ಮಹತ್ವದ ಬೆಳವಣಿಗೆಯಲ್ಲಿ ಎಸ್‌ಐಟಿ ಅಧಿಕಾರಿಗಳು ದೂರುದಾರ ಚಿನ್ನಯ್ಯನನ್ನು ‘ಎ1’ ಆರೋಪಿಯನ್ನಾಗಿಸಿ, ಬಿಎನ್‌ಎಸ್ ನ ಹಲವು ಸೆಕ್ಷನ್‌ಗಳಡಿ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.ನಾಲ್ಕು ದಿನಗಳ ಹಿಂದೆ ದೂರುದಾರ ಚಿನ್ನಯ್ಯನನ್ನು ಬಂಧಿಸಿದ ಬಳಿಕ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟಿಗೆ ಆತನನ್ನು ಹಾಜರುಪಡಿಸಿ, 10 ದಿನಗಳ ಕಸ್ಟಡಿಗೆ ಪಡೆದಿದ್ದರು. ಈ ವೇಳೆ, ಚಿನ್ನಯ್ಯನನ್ನೇ ಆರೋಪಿಯನ್ನಾಗಿಸಿ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ, ಆತ ಷಡ್ಯಂತ್ರದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ಎಸಗುವ ಉದ್ದೇಶದಿಂದಲೇ ಇದೆಲ್ಲವನ್ನೂ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ, ಎಸ್‌ಐಟಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಚಿನ್ನಯ್ಯನನ್ನು ಆಶ್ರಯ ನೀಡಿದ್ದಾರೆ ಎನ್ನಲಾದ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆ ತಂದು ಮಹಜರು ನಡೆಸಿದ್ದರು. ಶೋಧದ ವೇಳೆ, ತಿಮರೋಡಿ ಮನೆಯಲ್ಲಿ ಚಿನ್ನಯ್ಯನಿಗೆ ಸೇರಿದ ಎರಡು ಮೊಬೈಲ್‌ಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಅಲ್ಲದೆ, ಮನೆಯಲ್ಲಿದ್ದ ಮಹೇಶ್ ಶೆಟ್ಟಿ ಪತ್ನಿ, ಇಬ್ಬರು ಮಕ್ಕಳ ಮೊಬೈಲ್ ಫೋನ್, ಮನೆಯ ಸಿಸಿಟಿವಿ ಡಿವಿಆರ್ ನ್ನೂ ವಶಕ್ಕೆ ಪಡೆದ ಮಾಹಿತಿ ಇದೆ. ಅಲ್ಲದೆ, ಏರ್ ಗನ್ ಸೇರಿ ಕೆಲ ಆಯುಧಗಳನ್ನೂ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ತಿಮರೋಡಿ ಮನೇಲಿ ವಶಕ್ಕೆ ಪಡೆದ ದಾಖಲೆಗಳನ್ನು ಮುಂದಿಟ್ಟುಕೊಂಡೇ ಗುರುವಾರವೂ ಚಿನ್ನಯ್ಯನ ವಿಚಾರಣೆ ನಡೆಸಲಾಯಿತು. ಎರಡ್ಮೂರು ತಿಂಗಳಲ್ಲಿ ತಿಮರೋಡಿ ಮನೆಗೆ ಯಾರೆಲ್ಲ ಬಂದಿದ್ದಾರೆ, ಇವರ ಮನೆಯಲ್ಲೇ ಷಡ್ಯಂತ್ರ ಮಾಡಲಾಗಿತ್ತೇ ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದಾಗುತ್ತಿದ್ದಂತೆ ಎಸ್‌ಐಟಿ, ಷಡ್ಯಂತ್ರ್ಯ ಹೆಣೆದ ಆರೋಪದಲ್ಲಿ ಮತ್ತಷ್ಟು ಸೆಕ್ಷನ್‌ಗಳನ್ನು ದಾಖಲಿಸಿದೆ.
ಎಫ್‌ಐಆರ್‌ನಲ್ಲಿ ಹೆಚ್ಚುವರಿ ಸೆಕ್ಷನ್ ಸೇರ್ಪಡೆ:
ಮೂಲಗಳ ಪ್ರಕಾರ ಎಸ್‌ಐಟಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಚ್ಚುವರಿಯಾಗಿ ಬಿಎನ್‌ಎಸ್ 336 (ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರನ್ನು ಭೀತಿಗೊಳಿಸುವುದು), 230 (ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವುದು), 231 (ನ್ಯಾಯಾಲಯದ ಕಾರ್ಯಕ್ಕೆ ಅಡ್ಡಿಪಡಿಸುವುದು) 229 (ಸುಳ್ಳು ಸಾಕ್ಷ್ಯ ನೀಡುವುದು), 227 (ಸಾರ್ವಜನಿಕ ಶಾಂತಿ ಕದಡುವುದು), 228 (ನ್ಯಾಯಾಲಯಕ್ಕೆ ಅವಮಾನ ಮಾಡುವುದು), 240 (ತಪ್ಪು ಮಾಹಿತಿ ನೀಡಿ ತನಿಖೆಯ ದಿಕ್ಕು ತಪ್ಪಿಸುವುದು), 236 (ಪಿತೂರಿ), 233 (ತಪ್ಪಾಗಿ ಜನರನ್ನು ಪ್ರೇರೇಪಿಸುವುದು) ಮತ್ತು 248 (ಸುಳ್ಳು ದೂರು ನೀಡಿ ಸಮಯ ಹಾಳು ಮಾಡುವುದು) ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡಿದೆ.
ತಿಮರೋಡಿ, ಮಟ್ಟಣ್ಣವರ್‌ಗೆ ನೋಟಿಸ್?
ಹೊಸ ಎಫ್‌ಐಆರ್‌ನಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು, ಷಡ್ಯಂತ್ರ ಇತ್ಯಾದಿ ಆರೋಪಗಳಿದ್ದು, ಚಿನ್ನಯ್ಯನ ಜೊತೆ ಇತರರು ಎಂದು ಆರೋಪಿಗಳನ್ನು ಹೆಸರಿಸಿರುವ ಸಾಧ್ಯತೆಯಿದೆ. ಹೀಗಾಗಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಅವರ ಹೆಸರುಗಳನ್ನೂ ಹೊಸ ಎಫ್‌ಐಆರ್‌ನಲ್ಲಿ ಸೇರಿಸಿದ್ದರೆ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಎಸ್‌ಐಟಿ ಖಚಿತ ಮಾಹಿತಿ ನೀಡಿಲ್ಲ.