ಧರ್ಮಸ್ಥಳ ಷಡ್ಯಂತ್ರದ ರಹಸ್ಯ ಬಾಯ್ಬಿಟ್ಟ ಸುಜಾತ?

KannadaprabhaNewsNetwork |  
Published : Aug 29, 2025, 01:00 AM ISTUpdated : Aug 29, 2025, 04:48 AM IST
Sujatha bhat

ಸಾರಾಂಶ

ತನ್ನ ಪುತ್ರಿ ಅನನ್ಯ ಭಟ್‌ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ದೂರುದಾರೆ ಸುಜಾತಾ ಭಟ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಸತತ ಮೂರನೇ ದಿನ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದರು.

 ಮಂಗಳೂರು/ಬೆಳ್ತಂಗಡಿ :  ತನ್ನ ಪುತ್ರಿ ಅನನ್ಯ ಭಟ್‌ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ದೂರುದಾರೆ ಸುಜಾತಾ ಭಟ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಸತತ ಮೂರನೇ ದಿನ ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದರು.

ಎಸ್‌ಐಟಿ ತನಿಖೆಗೆ ಕಂಗೆಟ್ಟು ಹೋದ ಸುಜಾತಾ ಭಟ್‌, ದೂರು ವಾಪಸ್‌ ಪಡೆಯುವುದಾಗಿ ಅಧಿಕಾರಿಗಳಿಗೆ ಮನವಿ ಮಾಡಿದರಾದರೂ, ದೂರು ವಾಪಸ್‌ಗೆ ಅಧಿಕಾರಿಗಳು ಸಮ್ಮತಿಸಿಲ್ಲ.

ಮೊದಲು, ಅನನ್ಯಾ ಭಟ್‌ ತನ್ನ ಪುತ್ರಿ, ಧರ್ಮಸ್ಥಳಕ್ಕೆ ಹೋದವಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ ಎಂದು ಎಸ್‌ಐಟಿಗೆ ದೂರು ನೀಡಿದ್ದ ಸುಜಾತಾ ಭಟ್‌, ಬಳಿಕ, ತಾನು ಮಾಡಿದ ಆರೋಪ ಸುಳ್ಳು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು. ಇದೀಗ ವಿಚಾರಣೆ ಎದುರಿಸುತ್ತಿರುವ ಸುಜಾತಾ, ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ದಯವಿಟ್ಟು, ನನ್ನನ್ನು ಬಿಟ್ಟು ಬಿಡಿ, ನಾನು ಮಾಡಿದ ಆರೋಪ ಎಲ್ಲ ಸುಳ್ಳು. ಇಲ್ಲಿಗೇ ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ, ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ಹೆಸರನ್ನೂ ಬಹಿರಂಗಪಡಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಮುಂದೆ ಧರ್ಮಸ್ಥಳ ವಿರುದ್ಧ ಸುಳ್ಳಿನ ರಹಸ್ಯ ಹೆಣೆದು ಆರೋಪ ಹೊರಿಸಲು ಹೇಳಿದವರ ಹೆಸರನ್ನು ತಿಳಿಸಿದ್ದಾರೆ. ಎಸ್ಐಟಿ ತನಿಖಾಧಿಕಾರಿ ಗುಣಪಾಲ್ ನಡೆಸುತ್ತಿರುವ ವಿಚಾರಣೆಯಲ್ಲಿ ಸುಜಾತಾ ಭಟ್ ಸುಳ್ಳಿನ ಕಂತೆಗಳು ಹೊರ ಬಂದಿವೆ ಎಂದು ತಿಳಿದು ಬಂದಿದೆ. 

ಸತತ 3ನೇ ದಿನ ವಿಚಾರಣೆ:

ಆ.26ರ ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದ ಸುಜಾತಾ ಭಟ್‌ರನ್ನು ರಾತ್ರಿ 8.45ರವರೆಗೆ ವಿಚಾರಣೆ ನಡೆಸಲಾಗಿತ್ತು. ಆ.27ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30ರವರೆಗೆ ಅವರ ವಿಚಾರಣೆ ನಡೆದಿತ್ತು. ಗುರುವಾರ ಬೆಳಗ್ಗೆ 11ರಿಂದ ಸುಮಾರು 6 ತಾಸು ವಿಚಾರಣೆ ನಡೆಯಿತು.ಇದೇ ವೇಳೆ, ವಿಚಾರಣೆ ಸಮಯದಲ್ಲಿ ಸುಜಾತಾ ಅವರು ಒತ್ತಡಕ್ಕೆ ಮಣಿದು ಸುಳ್ಳು ಹೇಳಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಎಸ್‌ಐಟಿ ಎದುರು ಗೋಗರೆದಿದ್ದಾರೆ. ಆದರೆ, ಸುಳ್ಳು ಹೇಳಿದ್ದಕ್ಕಾಗಿ ಸುಜಾತಾ ಭಟ್‌ ಅವರನ್ನು ಎಸ್‌ಐಟಿ ಬಂಧಿಸುವ ಸಾಧ್ಯತೆಯಿದೆ.

ಭೂಮಿಗಾಗಿ ಧರ್ಮಸ್ಥಳ

ಟಾರ್ಗೆಟ್ ಮಾಡಿದ್ರಾ ಭಟ್‌?

ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳು, ಸುಳ್ಳು ಪ್ರಕರಣ ದಾಖಲಿಸಿರುವ ಉದ್ದೇಶ, ಇದಕ್ಕೆ ಪ್ರೇರಣೆ, ಸಹಕರಿಸಿದವರ ಮಾಹಿತಿ ಪಡೆಯುತ್ತಿದ್ದಾರೆ. ಸುಜಾತಾ ಭಟ್‌ ಅವರ ಆದಾಯ, ಆಶ್ರಯ, ಪೂರ್ವಾಪರ ಕುರಿತು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಪರ್ಕಳ ಮೂಲದವರಾದ ಸುಜಾತಾ ಭಟ್‌ ಕುಟುಂಬಕ್ಕೆ ಸೇರಿದ ಭೂಮಿಯನ್ನು ಧರ್ಮಸ್ಥಳಕ್ಕೆ ಬಿಟ್ಟು ಕೊಡಲಾಗಿತ್ತು. ಇದೇ ಸಿಟ್ಟಿನಿಂದ ಧರ್ಮಸ್ಥಳವನ್ನು ಟಾರ್ಗೆಟ್‌ ಮಾಡಿ ಈ ರೀತಿ ಹಗೆ ತೀರಿಸಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.

ಪದೇ ಪದೇ ಕಣ್ಣೀರೇ ಎಸ್ಐಟಿ ಅಧಿಕಾರಿಗಳಿಗೆ ಸುಜಾತಾ ಭಟ್ ವಿಚಾರಣೆ ಸವಾಲಾಗಿದೆ. ಪದೇ ಪದೇ ಕಣ್ಣೀರು ಹಾಕುತ್ತಿರುವ ಸುಜಾತಾ ಭಟ್ ಅವರು ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸುಜಾತಾ ಭಟ್ ಅವರನ್ನು ಸಮಾಧಾನಪಡಿಸಿ ಮತ್ತೆ ವಿಚಾರಣೆ ನಡೆಸುವುದು ಎಸ್ಐಟಿ ಅಧಿಕಾರಿಗಳಿಗೆ ತಲೆನೋವಿನ ಕೆಲಸವಾಗುತ್ತಿದೆ.

ಆತ್ಮಹತ್ಯೆ ಮಾಡಿಕೊಳ್ತೀನಿ, ಹುಷಾರ್‌:

ಮಾಧ್ಯಮದವರಿಗೆ ಸುಜಾತ ಎಚ್ಚರಿಕೆ

ಎಸ್ಐಟಿ ವಿಚಾರಣೆ ಎದುರಿಸಿ ಲಾಡ್ಜ್‌ಗೆ ತೆರಳುವ ವೇಳೆ ಸುದ್ದಿಗಾರರ ಪ್ರಶ್ನೆಗೆ ಹರಿಹಾಯ್ದ ಸುಜಾತಾ ಭಟ್, ನನ್ನನ್ನು ಯಾಕೆ ಫಾಲೋ ಮಾಡ್ತಾ ಇದ್ದೀರಾ?. ನಾನು ನೇಣು ಹಾಕಿಕೊಂಡು ಸಾಯಬೇಕಾ?. ನೀವು ಮಾಡಿರುವುದೇ ಸಾಕು, ನಿಮ್ಮ ಸಹವಾಸ ಬೇಡ. ಇಷ್ಟರ ತನಕ ಮಾಡಿರುವುದೇ ಸಾಕು, ನಾನು ನಿಮಗೆ ಉತ್ತರ ಕೊಡುವುದಿಲ್ಲ, ಎಲ್ಲಿ ಕೊಡಬೇಕು ಅಲ್ಲಿ ಕೊಟ್ಟಿದ್ದೇನೆ. ಹೀಗೆಯೇ ಹಿಂಸಿಸಿದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!