ಹೈಕೋರ್ಟ್‌ನಲ್ಲಿ ಮುಡಾ ಕೇಸ್‌ ಸಿಎಂ ತಪ್ಪು ಮಾಡಿಲ್ಲ ಎಂದರೆ ಚಿಂತೆ ಏಕೆ?: ರಾಜ್ಯಪಾಲರ ವಾದ

KannadaprabhaNewsNetwork |  
Published : Sep 01, 2024, 01:53 AM ISTUpdated : Sep 01, 2024, 05:08 AM IST
thavar chand gehlot

ಸಾರಾಂಶ

ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಪ್ರಕರಣದಲ್ಲಿ ಸಂಪುಟದ ಸಲಹೆ ಅಗತ್ಯವಿಲ್ಲ ಎಂದು ರಾಜ್ಯಪಾಲರ ಪರ ವಕೀಲರು ವಾದಿಸಿದ್ದಾರೆ. ಸಂಪುಟದ ಸಲಹೆಯನ್ನು ಪರಿಗಣಿಸದೆ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.

 ಬೆಂಗಳೂರು :  ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಪ್ರಕರಣದಲ್ಲಿ ಸಂಪುಟದ ಸಲಹೆ ಒಪ್ಪಬೇಕಿಲ್ಲ. ಸಂಪುಟದ ಮಂತ್ರಿಗಳನ್ನು ಮುಖ್ಯಮಂತ್ರಿಗಳೇ ಆಯ್ಕೆ ಮಾಡಿರುವಾಗ ಅಂತಹ ಸಂಪುಟದ ನಿರ್ಣಯ, ಸಲಹೆಯನ್ನು ರಾಜ್ಯಪಾಲರು ಒಪ್ಪಬೇಕಾಗಿಲ್ಲ ಎಂದು ರಾಜ್ಯಪಾಲರ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಬಲವಾಗಿ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಅಲ್ಲದೆ, ‘ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲರು ಸಂಬಂಧಪಟ್ಟ ಪ್ರತಿ ದಾಖಲೆ ಪರಿಶೀಲಿಸಿ, ಟಿಪ್ಪಣಿ ಮಾಡಿಕೊಂಡು ತಮ್ಮ ವಿವೇಚನೆ ಬಳಸಿ ನಿರ್ಧಾರ ಮಾಡಿದ್ದಾರೆ. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಯಾವುದೇ ನಿರ್ಣಯ ಮಾಡಿಲ್ಲ, ಶಿಫಾರಸು ಮಾಡಿಲ್ಲ ಎಂದಾದರೆ ಅವರಿಗೇಕೆ ಚಿಂತೆ’ ಎಂದು ಪ್ರಶ್ನಿಸಿದ್ದಾರೆ.

ಮುಡಾ ಪ್ರಕರಣ ಸಂಬಂಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಮೆಹ್ತಾ ವಾದ ಮಂಡಿಸಿದ ನಂತರ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್, ಮತ್ತೊಬ್ಬ ದೂರುದಾರ ಪ್ರದೀಪ್‌ ಪರ ಪ್ರಭುಲಿಂಗ ನಾವದಗಿ ಹಾಗೂ ಟಿ.ಜೆ.ಅಬ್ರಹಾಂ ಪರ ರಂಗನಾಥ ರೆಡ್ಡಿ ಅವರೂ ತಮ್ಮ ವಾದ ಮಂಡಿಸಿದರು. ಎಲ್ಲರ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಬೇಕು ಮತ್ತು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂಬ ಈ ಹಿಂದಿನ ಆದೇಶವನ್ನು ಸೆ.2ರವರೆಗೆ ವಿಸ್ತರಿಸಿತು.

ತುಷಾರ್‌ ಮೆಹ್ತಾ ವಾದ:

ತುಷಾರ್ ಮೆಹ್ತಾ ವಾದಿಸಿ, ಸಚಿವ ಸಂಪುಟದ ಸಚಿವರನ್ನು ಮುಖ್ಯಮಂತ್ರಿಗಳೇ ಆಯ್ಕೆ ಮಾಡುತ್ತಾರೆ. ಹೀಗಾಗಿ ಇಂತಹ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕಿಲ್ಲ. ಮುಖ್ಯಮಂತ್ರಿಗಳು ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸದೇ ಇರಬಹುದು. ಆದರೆ ಅವರು ನೇಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟ ಸಭೆ ನೇತೃತ್ವ ವಹಿಸಿದ್ದಾರೆ. ಹೀಗಾಗಿ ಅಂತಹ ಸಭೆಯ ನಿರ್ಣಯಕ್ಕೆ ಯಾವುದೇ ಮಹತ್ವವಿಲ್ಲ ಎಂದರು.

ಸಂಪುಟ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ. ಹೀಗಾಗಿ ಸಂಪುಟ ಸೂಚನೆ ಪಾಲಿಸದೇ ಸ್ವಂತ ವಿವೇಚನೆ ಬಳಸುತ್ತಿದ್ದೇನೆ ಎಂದು ರಾಜ್ಯಪಾಲರು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ರಾಜ್ಯಪಾಲರ ಕಡತವನ್ನು ಸಲ್ಲಿಸುತ್ತಿದ್ದೇವೆ. ರಾಜ್ಯಪಾಲರು ತರಾತುರಿಯ ತೀರ್ಮಾನ ಕೈಗೊಂಡಿದ್ದಾರೆಂಬುದು ಸುಳ್ಳು. ಆಗಸ್ಟ್ 14ರಂದೇ ಎಲ್ಲ ಕಡತ ಓದಿ ಟಿಪ್ಪಣಿ ಮಾಡಿದ್ದಾರೆ. ಸಂಪುಟ ಸಲಹೆಯನ್ನೂ ಪರಿಗಣಿಸಿ ವಿವರವಾದ ಪಟ್ಟಿ ತಯಾರಿಸಿದ್ದಾರೆ ಎಂದು ವಿವರಿಸಿದರು.

ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 17ಎ ಎಲ್ಲಾ ಕಡೆ ಅನ್ವಯವಾಗುತ್ತದೆ. ಇದು ಎಲ್ಲಾ ಸರ್ಕಾರಿ ಸೇವಕರಿಗೆ ಅನ್ವಯಿಸುತ್ತದೆ. ಟಿ.ಜೆ.ಅಬ್ರಹಾಂ ದೂರನ್ನು ಓದಿ, ದಾಖಲೆ ಗಮನಿಸಿದ್ದೇನೆ ಎಂದು ರಾಜ್ಯಪಾಲರು ಹೇಳಿದ್ದರು. ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡುಬಂದಿರುವ ಕಾರಣ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದರು’ ಎಂದು ಸಮರ್ಥಿಸಿಕೊಂಡರು.

ಸಚಿವ ಸಂಪುಟ ನಿರ್ಣಯ ಕೈಗೊಳ್ಳುವಾಗ ತನ್ನ ವಿವೇಚನೆಯನ್ನೇ ಬಳಸಿಲ್ಲ. ಮುಖ್ಯ ಕಾರ್ಯದರ್ಶಿ ನೋಟ್ ಸಿದ್ಧಪಡಿಸುತ್ತಾರೆ. ಅಡ್ವೋಕೇಟ್ ಜನರಲ್ ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ನಂತರ ನಡೆದಿದ್ದ ಕ್ಯಾಬಿನೆಟ್ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ನಿರ್ಣಯವಾಗಿ ರೂಪಿಸಿದೆ. ಎ.ಜಿ. ಅಭಿಪ್ರಾಯದಲ್ಲಿದ್ದ ಅಲ್ಪವಿರಾಮ, ಪೂರ್ಣವಿರಾಮವನ್ನೂ ಬಿಟ್ಟಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು..

ಮುಖ್ಯಮಂತ್ರಿಗಳು ತಮ್ಮ ಪ್ರತಿಕ್ರಿಯೆ ನೀಡುವಾಗಲೂ ಸ್ವಂತ ವಿವೇಚನೆಯನ್ನೇ ಬಳಸಿಲ್ಲ. ಎಜಿ ಅಭಿಪ್ರಾಯ, ಕ್ಯಾಬಿನೆಟ್ ನಿರ್ಣಯದ ಭಾಗಗಳನ್ನೇ ತಮ್ಮ ಪ್ರತಿಕ್ರಿಯೆ ಎಂದು ನೀಡಿದ್ದಾರೆ. ಬೆಂಗಳೂರು ಐಟಿ ಹಬ್‌, ಆದರೆ ಇವರು ಕಾಪಿಯನ್ನೂ ಸರಿಯಾಗಿ ಮಾಡಿಲ್ಲ. ಕಾಪಿ ಹೊಡೆಯಲು ಎಐ ಅನ್ನಾದರೂ ಬಳಸಬಹುದಿತ್ತು. ಇದು ಸಾಮೂಹಿಕ ಮೂರ್ಖತನ ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ ಎಂದು ಮೆಹ್ತಾ ವ್ಯಂಗ್ಯವಾಡಿದರು.

ವಾದದ ಒಂದು ಹಂತದಲ್ಲಿ ‘ಮುಖ್ಯಮಂತ್ರಿಯ ಪ್ರಾಸಿಕ್ಯೂಷನ್ ವೇಳೆ ಸಚಿವ ಸಂಪುಟದ ನಿರ್ಣಯ ಬೇಕಿಲ್ಲ ಎಂದು ಹಲವು ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಹೇಳಿದೆ’ ಎಂದು ನ್ಯಾ.ಎಂ.ನಾಗಪ್ರಸನ್ನ ಹೇಳಿದಾಗ, ಮೆಹ್ತಾ ಅವರು, ಸಾಂವಿಧಾನಿಕ ಕರ್ತವ್ಯದಲ್ಲಿ ಇರುವಾಗ ಕೆಲವೊಮ್ಮೆ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು. ವಿಳಂಬ ಆದಷ್ಟೂ ಸಮಸ್ಯೆ ಹೆಚ್ಚುತ್ತದೆ ಎಂದರು.

ಸ್ನೇಹಮಹಿ ಕೃಷ್ಣ ಪರ ವಾದ:

ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದಿಸಿ, ಸ್ವತಂತ್ರ ತನಿಖಾ ಸಂಸ್ಥೆಯಿಂದ ಈ ಪ್ರಕರಣವನ್ನು ತನಿಖೆ ಮಾಡಿಸಬೇಕು. ಲೆಕ್ಕಪರಿಶೋಧಕರೂ ತನಿಖೆಯ ಭಾಗವಾಗಿರಬೇಕು. ರಾಜ್ಯ ಸರ್ಕಾರದ ಅಡಿಯ ತನಿಖಾಧಿಕಾರಿಯಿಂದ ಈ ಕೇಸ್ ತನಿಖೆ ನಡೆಸುವುದು ಸಾಧ್ಯವೇ? ಭೂಸ್ವಾಧೀನ ಆದಾಗ ಅದರ ಮೌಲ್ಯ ₹3 ಲಕ್ಷ 24 ಸಾವಿರ, ಮಾರಾಟವಾದಾಗ ಕ್ರಯಪತ್ರದಲ್ಲಿ ₹5 ಲಕ್ಷ 98 ಸಾವಿರ ಮೌಲ್ಯ ಎಂದು ಉಲ್ಲೇಖಿಸಲಾಗಿದೆ. ಈಗ 14 ನಿವೇಶನದ ಮೌಲ್ಯ ₹55 ಕೋಟಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಪ್ರಕರಣ ಸ್ವತಂತ್ರ ತನಿಖೆ ನಡೆಯಬೇಕಾದಷ್ಟು ಅಂಶಗಳನ್ನು ಒಳಗೊಂಡಿದೆ ಎಂದರು.

ಸ್ವಾಧೀನವಾದ ಜಮೀನಿನಲ್ಲಿ 2001, 2004 ನಡುವೆ ಮುಡಾ ನಿವೇಶನ ಹಂಚಿಕೆ ಮಾಡಲಾಗಿದೆ. ಭೂಮಿ ಸ್ವಾಧೀನವಾಗಿ ಪರಿಹಾರದ ಹಣವನ್ನು ನೀಡಿದರೂ ಮಾಲೀಕರು ಪಡೆದಿಲ್ಲ. 2004ರಲ್ಲಿ ಕೃಷಿ ಜಮೀನೆಂದು ನಮೂದಿಸಿ ಮುಖ್ಯಮಂತ್ರಿಗಳ ಭಾಮೈದ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ’ ಎಂದರು.

‘ಭೂಮಿ ಅಭಿವೃದ್ಧಿಯಾದ ಮೇಲೆ ಹೇಗೆ ಕೃಷಿ ಜಮೀನಾಯಿತು? ಎಂದು ನ್ಯಾ.ನಾಗಪ್ರಸನ್ನ ಪ್ರಶ್ನಿಸಿದರು.

‘ಅದೇ ಈ ಕೇಸಿನಲ್ಲಿ ಮ್ಯಾಜಿಕ್, ಹೀಗಾಗಿ ತನಿಖೆ ನಡೆಯಬೇಕು. ತನಿಖಾಧಿಕಾರಿ ಸಮರ್ಥವಾಗಿದ್ದರೆ ಕಂಡುಹಿಡಿಯಬಹುದು. ತನಿಖೆ ನಡೆಯದಿದ್ದರೆ ಇದು ಟ್ರಾಜಿಕ್ ಆಗಲಿದೆ’ ಎಂದು ಮಣಿಂದರ್‌ ಸಿಂಗ್‌ ಹೇಳಿದರು.

ಒಂದೆಡೆ ಸಮರ್ಥನೆ, ಇನ್ನೊಂದೆಡೆ ವಾದ:

ಸರ್ಕಾರ ತನಿಖೆಗೆಂದು ಆಯೋಗ ರಚಿಸಿದೆ. ಸರ್ಕಾರಕ್ಕೇ ಮೇಲ್ನೋಟಕ್ಕೆ ಅಕ್ರಮ ಕಂಡುಬಂದಿದೆ. ಒಂದೆಡೆ ಅಕ್ರಮವಾಗಿಲ್ಲ ಎಂದು ಹೇಳುತ್ತಿದ್ದಾರೆ ಇನ್ನೊಂದೆದೆಡೆ ತನಿಖೆಗೆ ನಿವೃತ್ತ ನ್ಯಾಯಮೂರ್ತಿ, ಐಎಎಸ್ ಅಧಿಕಾರಿ ನೇತೃತ್ವದ ಸಮಿತಿ ಆಯೋಗ ರಚಿಸಿದೆ. ರಾಜ್ಯಪಾಲರು ಅನುಮತಿ ನೀಡುವಾಗ ಇದನ್ನೇ ಉಲ್ಲೇಖಿಸಿದ್ದಾರೆ ಎಂದರು.

ಡಿನೋಟಿಫೀಕೇಶನ್‌ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್‌ ರದ್ದು ಮಾಡಿತ್ತು. ಆದರೆ ಹೈಕೋರ್ಟ್‌ನ ಆ ತೀರ್ಪು ಯಾವುದೇ ಕಾನೂನು ಆಗಿರುವುದಿಲ್ಲ. ಹೀಗಾಗಿ ಆ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಗ ಸಚಿವ ಸಂಪುಟ ನೀಡಿದ್ದ ಸೂಚನೆಯನ್ನು ರಾಜ್ಯಪಾಲರು ಉಲ್ಲೇಖಿಸಿರಲಿಲ್ಲ. ಹೀಗಾಗಿ ವಿಭಾಗೀಯ ಪೀಠ ಅದನ್ನು ರಾಜ್ಯಪಾಲರ ಮರುಪರಿಶೀಲನೆಗೆ ಸೂಚಿಸಿತ್ತು. ಎಫ್ಐಆರ್ ದಾಖಲಾದ ಬಳಿಕವೂ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಲು ಅವಕಾಶ ದೊರೆಯಲಿದೆ. ಹೀಗಾಗಿ ರಾಜ್ಯಪಾಲರ ಆದೇಶ ರದ್ದುಪಡಿಸದಂತೆ ಮನವಿ ಮಾಡಿದರು.

ಟಿ.ಜೆ. ಅಬ್ರಾಹಂ ಪರ ವಕೀಲರ ವಾದ:

ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದಿಸಿ, ‘ಈ ಕೇಸ್ ನಲ್ಲಿ ಮೊದಲಿಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸದ್ದಕ್ಕೆ ರಾಜ್ಯಪಾಲರ ಅನುಮತಿ ಕೇಳಲಾಯಿತು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 17ಎ ಅಡಿ ಖಾಸಗಿ ದೂರುದಾರರು ಅನುಮತಿ ಪಡೆಯಬಹುದು. ಹೀಗಾಗಿ ರಾಜ್ಯಪಾಲರ ಅನುಮತಿ ಪಡೆದು ದೂರು ದಾಖಲಿಸಲಾಗಿದೆ ಎಂದರು.

ಭೂಮಿಯ ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಭೂಮಿ ಪರಿವರ್ತನೆ ಆದಾಗಲೂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಈ ಬೆಳವಣಿಗೆ ನಡೆದಾಗಲೆಲ್ಲಾ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರು. 2021ರಲ್ಲಿ ಪರಿಹಾರದ ನಿವೇಶನಗಳನ್ನು ನೀಡುವ ಕುರಿತ ನಿರ್ಣಯಗಳನ್ನು ಕೈಗೊಳ್ಳುವ ಸಭೆಗಳಲ್ಲಿ ಮುಖ್ಯಮಂತ್ರಿಯವರ ಪುತ್ರ (ಡಾ.ಯತೀಂದ್ರ) ಸಹ ಭಾಗಿಯಾಗಿದ್ದರು ಎಂದರು.

ಎಜಿ ಸಲಹೆ ಸಂಪುಟ ಕಾಪಿ ಹೊಡೆದಿದೆ!

ಸಚಿವ ಸಂಪುಟ ನಿರ್ಣಯ ಕೈಗೊಳ್ಳುವಾಗ ತನ್ನ ವಿವೇಚನೆಯನ್ನೇ ಬಳಸಿಲ್ಲ. ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನೇ ನಿರ್ಣಯವಾಗಿ ರೂಪಿಸಿದೆ. ಅಲ್ಪವಿರಾಮ, ಪೂರ್ಣವಿರಾಮವನ್ನೂ ಬಿಟ್ಟಿಲ್ಲ. ಬೆಂಗಳೂರು ಐಟಿ ಹಬ್‌. ಆದರೆ ಇವರು ಕಾಪಿಯನ್ನೂ ಸರಿಯಾಗಿ ಮಾಡಿಲ್ಲ.

- ತುಷಾರ್‌ ಮೆಹ್ತಾ, ಗೌರ್‍ನರ್‌ ಪರ ವಕೀಲ

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ