ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡಿಜೆ ಸಹಿತ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಅದ್ಧೂರಿಯಾಗಿ ಮಾಡಿದ್ದಾರೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಇಂದಿರಾ ಗಾಂಧಿ ಮನಸ್ಥಿತಿಯಂತೆ ಡಿ.ಜೆ. ಸೌಂಡ್ ಸಿಸ್ಟಂ ಬಳಕೆಗೆ ನಿರ್ಬಂಧ ಹೇರಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ ಸಿಂಹ ಕಿಡಿಕಾರಿದರು.ಚನ್ನಗಿರಿಯಲ್ಲಿ ಬುಧವಾರ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಸ್ಥ ಶಾಮನೂರು ಕುಟುಂಬ ಹೇಳಿದಂತೆ ಕೇಳುವುದಕ್ಕೆ ದಾವಣಗೆರೆಯೇನು ಶಾಮನೂರು ಕುಟಂಬದ ಆಸ್ತಿಯಾ ಎಂದರು.
ಮೈಸೂರು, ಚಿತ್ರದುರ್ಗ, ತುಮಕೂರು, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಡಿ.ಜೆ.ಯೊಂದಿಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆದಿದೆ. ಆದರೆ, ದಾವಣಗೆರೆಯಲ್ಲಿ ಮಾತ್ರ ಡಿಜೆ, ಭಾಜಾಭಜಂತ್ರಿ,ಮೈಕ್ ಸೆಟ್‌ಗೆಲ್ಲಾ ನಿರ್ಬಂಧ ಹಾಕಲಾಗಿದೆ. ಏನಿದು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರೇ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರೇ? ದಾವಣಗೆರೆಯನ್ನೇನು ಶಾಮನೂರು ಕುಟುಂಬಕ್ಕೆ ಬರೆದುಕೊಟ್ಟಿದ್ದಾರಾ? ಇದೇನು ನಿಮ್ಮ ಲೇಔಟಾ ಎಂದು ಪ್ರತಾಪ ಸಿಂಹ ಪ್ರಶ್ನಿಸಿದರು.ಗಣೇಶ ಹಬ್ಬಕ್ಕೆ ಒಂದು ಮೈಕ್ ಕಟ್ಟುವುದಕ್ಕೂ ಅವಕಾಶವಿಲ್ಲವೆಂದರೆ ಏನರ್ಥ? ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಏನು ಮಾಡಲು ಹೊರಟಿದ್ದಾರೆ? ಪ್ರಾಣಿಗಳನ್ನು ಹೊಡೆದು ಹಾಕಿ ತಿಂದಂತೆ ಅಲ್ಲ. ಇದು ಸಾರ್ವಜನಿಕರಿಗೆ ಸೇರಿದ ಸ್ಥಳ. ಮನಸ್ಸಿಗೆ ಬಂದಂತೆ ಅಧಿಕಾರ ನಡೆಸುವುದಕ್ಕೆ ನಿಮ್ಮ ಫ್ಯಾಕ್ಟರಿ ಅಲ್ಲ. ಗಣೇಶ ಹಬ್ಬ ಭಾಜಾಭಜಂತ್ರಿ, ಸಂಗೀತದೊಂದಿಗೆ ನಡೆಯಬೇಕೆಂಬ ಅರಿವು ನಿಮಗಿಲ್ಲವೇ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ಮಹಾತ್ಮ ಗಾಂಧಿಗಿಂತಲೂ ಮುಂಚೆಯೇ ಬಾಲಗಂಗಾಧರ ತಿಲಕ್ ಅವರು ಶ್ರೀ ಗಣೇಶೋತ್ಸವ ಆರಂಭಿಸಿದ್ದರು. ಆ ಕಾಲದಲ್ಲೇ ಸಂಗೀತ, ಹಾಸ್ಯ, ಪ್ರಹಸನ ಎಲ್ಲವೂ ನಡೆಯುತ್ತಿಲ್ಲ. ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಮೇಲ್ಪಂಕ್ತಿ ಇದು. ಅಂತಹ ಗಣೇಶೋತ್ಸವ ಕಾರ್ಯಕ್ರಮವನ್ನು ನೀವು ಹೇಳಿದಂತೆ ಕೇಳಬೇಕೆನ್ನಲು ಇದೇನು ನಿಮ್ಮ ಶಿಕ್ಷಣ ಸಂಸ್ಥೆಯಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಿಜೆಪಿ ಚನ್ನಗಿರಿ ತಾಲೂಕು ಮುಖಂಡ ತುಮ್ಕೋಸ್ ಶಿವಕುಮಾರ, ದಾವಣಗೆರೆ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಇತರರು ಇದ್ದರು.
- - -(ಕೋಟ್)
ಈ ಹಿಂದೆ ಜಿ.ಎಂ. ಸಿದ್ದೇಶ್ವರ ಸಂಸದರಿದ್ದಾಗ ಚಿತ್ರದುರ್ಗದ ಮಾದರಿಯಲ್ಲಿ ದಾವಣಗೆರೆಯಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ಈಗ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ದಾವಣಗೆರೆ ನಗರ, ಜಿಲ್ಲೆಯ ಜನತೆಯೂ ಯೋಚಿಸಬೇಕಾಗಿದೆ. ಕಾಂಗ್ರೆಸ್‌ನವರನ್ನು ಆಯ್ಕೆ ಮಾಡಿ, ಜನತೆ ತಪ್ಪು ಮಾಡಿದ್ದಾರೆ. ಮುಂದೆ ಇಂತಹ ತಪ್ಪುಗಳಾಗದಂತೆ 2028ರ ಚುನಾವಣೆಯಲ್ಲಿ ಇಂತಹ ಕುಟುಂಬವನ್ನು ಸೋಲಿಸಿ. ಸೋತವರು ಶಾಲೆ ಕಾಂಪೌಂಡ್‌ನಲ್ಲಿ ಇರುವಂತೆ ಫಲಿತಾಂಶ ಜನತೆ ನೀಡಬೇಕು.- ಪ್ರತಾಪ ಸಿಂಹ, ಮಾಜಿ ಸಂಸದ. ಮೈಸೂರು ಕ್ಷೇತ್ರ.
- - -