ಜಾಲಿ ಮುಳ್ಳಿನಿಂದ ಹಿರೇಕೆರೆಗೆ ಮುಕ್ತಿ ಎಂದು?

KannadaprabhaNewsNetwork |  
Published : Jun 19, 2025, 12:34 AM IST
1)- 18ಎಚ್‌ ಆರ್‌ ಪಿ 1 -ಹರಪನಹಳ್ಳಿ ಪಟ್ಟಣದ ಹಿರೇಕೆರೆಯಲ್ಲಿ ಜಾಲಿಗಿಡ ಬೆಳೆದಿರುವುದು.2)-18ಎಚ್‌ ಆರ್‌ ಪಿ 2 - ಕುಭೇಂದ್ರನಾಯ್ಕ್- ಎಇಇ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹರಪನಹಳ್ಳಿ.3)-18ಎಚ್‌ ಆರ್‌ ಪಿ 3 -ಎಚ್.ಎಂ.ಸಂತೋಷ- ಪ್ರಗತಿಪರ ಹೋರಾಟಗಾರರು ಹರಪನಹಳ್ಳಿ. | Kannada Prabha

ಸಾರಾಂಶ

ಕೆರೆ, ಕಟ್ಟೆಗಳು ರೈತರ ಜೀವನಾಡಿಗಳು, ಅಂತಹ ಕೆರೆ ಪಾಳೆಗಾರರ ಕಾಲದ ಪಟ್ಟಣಕ್ಕೆ ಕಳಸಪ್ರಾಯವಾಗಿರುವ ಇತಿಹಾಸ ಪ್ರಸಿದ್ಧ ಹಿರೇಕೆರೆ ಇಂದು ಜಾಲಿ ಗಿಡಗಳಿಂದ ಮಂಕಾಗಿ ಕಳಾಹೀನವಾಗಿದೆ.

ಹರಪನಹಳ್ಳಿ ಪಟ್ಟಣದ ನಾಗರಿಕರ ಪ್ರಶ್ನೆ

ಐತಿಹಾಸಿಕ, ಧಾರ್ಮಿಕವಾಗಿಯೂ ಪ್ರಸಿದ್ಧಿ । ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆರೆ

ಬಿ.ರಾಮಪ್ರಸಾದ್‌ ಗಾಂಧಿ

ಕನ್ನಡಪ್ರಪಭ ವಾರ್ತೆ ಹರಪನಹಳ್ಳಿ

ಕೆರೆ, ಕಟ್ಟೆಗಳು ರೈತರ ಜೀವನಾಡಿಗಳು, ಅಂತಹ ಕೆರೆ ಪಾಳೆಗಾರರ ಕಾಲದ ಪಟ್ಟಣಕ್ಕೆ ಕಳಸಪ್ರಾಯವಾಗಿರುವ ಇತಿಹಾಸ ಪ್ರಸಿದ್ಧ ಹಿರೇಕೆರೆ ಇಂದು ಜಾಲಿ ಗಿಡಗಳಿಂದ ಮಂಕಾಗಿ ಕಳಾಹೀನವಾಗಿದೆ. ಈ ಕೆರೆಗೆ ಕಾಯಕಲ್ಪ ಯಾವಾಗ ಎಂಬುದು ಹರಪನಹಳ್ಳಿ ಪಟ್ಟಣದ ನಾಗರಿಕರ ಪ್ರಶ್ನೆಯಾಗಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಸುಮಾರು 100 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಪುರಾತನ ಕಾಲದ ಹಿರೇಕೆರೆ ನೀರು ತುಂಬಿದ್ದರೂ ಜಾಲಿ ಗಿಡಗಳ ತಾಣವಾಗಿ ಪರಿವರ್ತನೆಯಾಗಿದೆ. ನೂರಾರು ಎಕರೆ ಜಮೀನುಗಳಿಗೆ ನೀರು ಹರಿಸಿ ಜನ-ಜಾನುವಾರುಗಳಿಗೆ ಜೀವನಾಡಿಯಾಗಿದ್ದ ಕೆರೆ ಇಂದು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

ಕಳೆದ ಎಂಟತ್ತು ವರ್ಷಗಳಿಂದ ಕೆರೆಯಲ್ಲಿ ಈ ಪರಿ ಜಾಲಿ ಗಿಡಗಳು ಬೆಳೆದು ನಿಂತಿದ್ದರೂ ಸಹ ಗಿಡಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗಿಲ್ಲ. ಇದರಿಂದ ಕೆರೆಯಲ್ಲಿ ಗಿಡಗಳ ಜತೆಗೆ ಕಸಕಡ್ಡಿ, ತ್ಯಾಜ್ಯ ಹೂಳು ತುಂಬಿ ಮಲೀನವಾಗುತ್ತಿದೆ.

ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಕೆರೆ ಧಾರ್ಮಿಕ ಮತ್ತು ಐತಿಹಾಸಿವಾಗಿಯೂ ಪ್ರಸಿದ್ಧಿ ಪಡೆದಿದೆ. ಪಟ್ಟಣದಲ್ಲಿ ನಡೆಯುವ ಪ್ರಮುಖ ದೇವರುಗಳ ಹಬ್ಬ-ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆರೆಯ ಪ್ರದೇಶದ ಮೇಲೆ ಬಸವೇಶ್ವರ ಮತ್ತು ಈಶ್ವರ ಮೂರ್ತಿಗಳಿವೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ನೋಡುಗರಿಗೂ ಕೆರೆ ಆಕರ್ಷಣೀಯವಾಗಿದೆ.

ಕೆರೆಯ ಪಕ್ಕದಲ್ಲಿಯೇ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯವಿದ್ದು, ವಿದ್ಯಾರ್ಥಿಗಳು ಬಿಡುವಿನ ವೇಳೆ ಕೆರೆ ದಂಡೆಯ ಮೇಲೆ ಕುಳಿತು ಓದುವುದು, ವಿಶ್ರಾಂತಿ ಪಡೆಯುವುದು, ಊಟ ಸವಿಯುವುದು ಸಾಮಾನ್ಯವಾಗಿದೆ. ಸಾರ್ವಜನಿಕರು ಸಹ ನಿತ್ಯ ವಾಯುವಿಹಾರಕ್ಕೆ ಬರುತ್ತಾರೆ, ಕೆರೆಯಲ್ಲಿ ಜಾಲಿ ಗಿಡ ಬೆಳೆದು ಕೆರೆ ಅಂದ ಕಳೆದುಕೊಂಡಿದ್ದರಿಂದ ಕೆರೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿದ ಸ್ಥಳೀಯ ಆಡಳಿತ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬೇಸಿಗೆಯಲ್ಲಿ ಈ ಹಿರೇಕೆರೆಯಲ್ಲಿ ಯುವಕರು, ಮಕ್ಕಳು, ಮಧ್ಯಾಹ್ನದ ಸಮಯದಲ್ಲಿ ಸಾಕಷ್ಟು ಈಜಾಡಿ ಮೈ ಮನ ತಣಿಸಿಕೊಳ್ಳುತ್ತಿದ್ದರು, ಈಗ ಜಾಲಿ ಗಿಡಗಳು ತುಂಬಿದ್ದರಿಂದ ಈಜಾಡಲು ಸಾಧ್ಯವಾಗುತ್ತಿಲ್ಲ,

ಕೆರೆ ನೀರು ತುಂಬಿಸುವ ಯೋಜನೆಯಿಂದ ಹಿರೇಕೆರೆಗೆ ತುಂಗಭದ್ರಾ ನದಿಯಿಂದ ನೀರು ಬರುತ್ತಿದೆ. ಅಷ್ಟೇ ಅಲ್ಲದೇ ಮಳೆಗಾಲ ಆರಂಭವಾಗಿದ್ದು, ಮಳೆಯ ನೀರು ಸಹ ಸಂಗ್ರಹವಾಗುತ್ತಿದೆ. ಇಷ್ಟೆಲ್ಲ ನೀರಿನ ಮೂಲ ಇದ್ದರೂ ಇದನ್ನು ಉಳಿಸಿಕೊಂಡು ಹೋಗುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎನ್ನುವುದು ಜನರ ಆರೋಪವಾಗಿದೆ.

ಈಗಲಾದರೂ ಜನಪ್ರತಿನಿದಿಗಳು, ಸಂಬಂಧಿಸಿದ ಅಧಿಕಾರಿಗಳು ಕೆರೆ ಸುತ್ತಲಿನ ಜಾಲಿ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸಿ ಮೊದಲಿನ ಗತವೈಭವ ತಂದುಕೊಡುವರೇ ಎಂಬುದು ಕಾದು ನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ