ಇದು ಶುದ್ಧ ನೀರಿನ ಘಟಕವೋ, ದನದ ಕೊಟ್ಟಿಗೆಯೋ?

KannadaprabhaNewsNetwork | Published : Jun 12, 2024 12:31 AM

ಸಾರಾಂಶ

ತಾಲೂಕಿನ ಹಿರೇಖೇಡ ಗ್ರಾಪಂ ವ್ಯಾಪ್ತಿಯ ಗೋಡಿನಾಳ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವು ದನದ ಕೊಟ್ಟಿಗೆಯಂತಾಗಿದ್ದು, ಸರ್ಕಾರದ ಆಸ್ತಿ ದುರ್ಬಳಕೆ ಮಾಡಿಕೊಂಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಿರೇಖೇಡ ಗ್ರಾಪಂ ವ್ಯಾಪ್ತಿಯ ಗೋಡಿನಾಳ ಗ್ರಾಮದಲ್ಲಿ ಸಮಸ್ಯೆ

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕಿನ ಹಿರೇಖೇಡ ಗ್ರಾಪಂ ವ್ಯಾಪ್ತಿಯ ಗೋಡಿನಾಳ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವು ದನದ ಕೊಟ್ಟಿಗೆಯಂತಾಗಿದ್ದು, ಸರ್ಕಾರದ ಆಸ್ತಿ ದುರ್ಬಳಕೆ ಮಾಡಿಕೊಂಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದ ವಾಲ್ಮೀಕಿ ವೃತ್ತಕ್ಕೆ ಹೊಂದಿಕೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳಿಂದ ದುರಸ್ತಿಗೊಂಡಿದೆ.

ಹೀಗೆ ದುರಸ್ತಿಯಾಗಿರುವ ಘಟಕ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಕಿಟಕಿ, ಬಾಗಿಲುಗಳ ಗಾಜುಗಳನ್ನು ಕಿತ್ತು ಬೀಸಾಡಲಾಗಿದೆ. ಪ್ಲಾಂಟಿನ ಒಳಗೆ ಇರಬೇಕಿದ್ದ ವಾಟರ್ ಟ್ಯಾಂಕ್‌ನ್ನು ಹೊರಗೆ ಎಸೆಯಲಾಗಿದೆ. ಶುದ್ಧ ಮಾಡುವ ನೀರಿನ ಯಂತ್ರಗಳು ಮಾಯವಾಗಿದ್ದು, ಅಳಿದುಳಿದ ಸಾಮಗ್ರಿಗಳು ಮಾತ್ರ ಉಳಿದಿವೆ.

ನಾಲ್ಕೈದು ವರ್ಷಗಳ ಹಿಂದೆ ಜಿಪಂ ಅನುದಾನದಿಂದ ನಿರ್ಮಾಣವಾಗಿದ್ದ ಈ ವಾಟರ್ ಪ್ಲಾಂಟ್‌ನಿಂದ ಇದುವರೆಗೂ ಹನಿ ನೀರು ಸರಬರಾಜು ಆಗಿಲ್ಲ. ಇದರಲ್ಲಿದ್ದ ಮಶೀನ್, ಬೆಲೆ ಬಾಳುವ ಸಾಮಗ್ರಿಗಳು ಕಳ್ಳರ ಪಾಲಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹಾಗೂ ಗ್ರಾಪಂ ಅಧ್ಯಕ್ಷರ ಗ್ರಾಮದಲ್ಲಿಯೇ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ ಸ್ಥಿತಿ ಈ ರೀತಿಯಾಗಿರುವುದಕ್ಕೆ ಸಾರ್ವಜನಿಕರಲ್ಲಿ ಬೇಸರವನ್ನುಂಟು ಮಾಡಿದೆ.

ಯಾರು ಜವಾಬ್ದಾರಿ?:ಸರ್ಕಾರ ಹಾಗೂ ಜಿಲ್ಲಾಡಳಿತ ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಿಸಿರುವ ಈ ಶುದ್ಧ ನೀರಿನ ಘಟಕ ಈಗ ದನ, ಕುರಿ ದೊಡ್ಡಿಯಾಗಿದೆ. ಸದ್ಬಳಕೆಯಾಗಬೇಕಿದ್ದ ಸರ್ಕಾರದ ಲಕ್ಷಾಂತರ ರೂ. ಅನುದಾನ ವ್ಯರ್ಥವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗೋಡಿನಾಳ ಗ್ರಾಮಕ್ಕೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕದ ಮಾಹಿತಿ ಪಡೆದುಕೊಂಡ ಬಳಿಕ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಇಒ ಎಲ್. ವೀರೇಂದ್ರಕುಮಾರ ತಿಳಿಸಿದ್ದಾರೆ.

Share this article