ಶಿವಮೊಗ್ಗ: ಮನರೇಗಾ ವಿಚಾರದಲ್ಲಿ ನಡೆದ ವಿಶೇಷ ಅಧಿವೇಶನವನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆ. ಮನರೇಗಾ ಯೋಜನೆಯಲ್ಲಿದ್ದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕಿ ಈಗ ಅವರ ಪ್ರತಿಮೆ ಎದುರು ಕೂತು ಹೋರಾಟ ಮಾಡಿದ್ದಾರೆ. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ನರೇಗಾದಡಿ ತೋಟದ ಕೆಲಸ, ಕೊಟ್ಟಿಗೆ, ಇಂಗು ಗುಂಡಿಯಂತ ಕೆಲಸ ಆಗ್ತಿತ್ತು. ನೂರಾರು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಅನ್ನು ನನ್ನ ಕ್ಷೇತ್ರದಲ್ಲಿ ಕಟ್ಟಿದ್ದೇವೆ. ದೆಹಲಿಯಲ್ಲಿ ಕುಳಿತು, ಸ್ಯಾಟಲೈಟ್ ಮೂಲಕ ತೀರ್ಮಾನ ಮಾಡ್ತಾರಂತೆ. ಗ್ರಾಮ ಪಂಚಾಯಿತಿಗಳು ಉತ್ತಮ ಕೆಲಸ ಮಾಡೋದನ್ನು ಮುಚ್ಚಲು ಹೊರಟಿದ್ದಾರೆ ಎಂದು ಆರೋಪಿಸಿದರು.
ನರೇಗಾ ಬಗ್ಗೆ ಮಾಹಿತಿಯನ್ನು ನಮ್ಮದೇ ಶೈಲಿಯಲ್ಲಿ ಕೊಡುತ್ತಿದ್ದೇವೆ. ಜಾಹೀರಾತು ಮೂಲಕ ಮೊದಲು ಹೇಗೆ ಇತ್ತು..? ಏನು ಬದಲಾಗಿದೆ ಎಂದು ತಿಳಿಸುತ್ತಿದ್ದೇವೆ. ಇದರಲ್ಲಿ ಕೊಡದ್ರಲ್ಲಿ ತಪ್ಪೇನಿದೆ. ಹೊಟ್ಟೆ ಹಸಿದಾಗ ಕೆಲಸ ಕೊಡಲಿಲ್ಲ ಅಂದ್ರೇ ಹೇಗೆ..? ಈಗ 100 ದಿನದ ಬದಲಾಗಿ 125 ದಿನ ಕೊಡ್ತೇವೆ ಅನ್ನುತ್ತಿದ್ದಾರೆ ಅದು ಸಾಧ್ಯವಿಲ್ಲ ಎಂದು ಟೀಕಿಸಿದರು.ಬೆಳಗಾವಿ 400 ಕೋಟಿ ರು. ಹಣ ನಾಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನನಗಂತೂ ಗೊತ್ತಿಲ್ಲ. ಯಾರ ಹಣ, ಎನು ಹಣ ಅಂತಾ ಬಿಜೆಪಿಯವರಿಗೆ ಗೊತ್ತು. ಸಿಬಿಐ ಇದೆಯಲ್ಲಾ ತನಿಖೆ ಮಾಡಲಿ ಎಂದರು.ಅಸೆಂಬ್ಲಿ, ಕನಕೋತ್ಸವದ ನಡುವೆಯೂ
ಬಹಳ ದಿನದ ನಂತರ ಶಿವಮೊಗ್ಗಕ್ಕೆ ಬಂದಿದ್ದೇನೆ. 37 ವರ್ಷದ ಬಳಿಕ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿದೆ. ಅದಕ್ಕಾಗಿಯೇ ಅಸೆಂಬ್ಲಿ ಹಾಗೂ ಕನಕೋತ್ಸವದ ನಡುವೆಯೂ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕನಕಪುರದ ಕನಕೋತ್ಸವ ರಾಜ್ಯಕ್ಕೆ ಮಾದರಿಯಾಗುವಂತೆ ನಡೆಯುತ್ತಿದೆ. 5 ಗ್ಯಾರಂಟಿ ಮನೆಗೊಂದು ರಂಗೋಲಿ ಸ್ಪರ್ಧೆ ಸಹ ನಡೆಸಿದ್ದೇವೆ. 73 ಸಾವಿರ ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 10 ರಿಂದ 11 ಸಾವಿರ ಮುಸ್ಲಿಮರು ಮೆಹೆಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರ ಮಧ್ಯೆ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.ಅಪೆಕ್ಸ್ ಬ್ಯಾಂಕ್ ಚುನಾವಣೆ
ವಿಚಾರ ಪಕ್ಷದಿಂದ ತೀರ್ಮಾನ
ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಕೆ ವಿಚಾರ ಪಕ್ಷ ಒಂದು ತೀರ್ಮಾನ ಮಾಡುತ್ತದೆ ಅದರಂತೆಯೇ ಆಗುತ್ತೆ.ಕೆ.ಜೆ.ಜಾರ್ಜ್ ರಾಜೀನಾಮೆ ಕೊಡುತ್ತಾರೆ ಎಂದು ವಿಪಕ್ಷದವರು ಆರೋಪ ಮಾಡಿದ್ದಾರೆ. ಇದರ ಬಗ್ಗೆ ಮಾಹಿತಿ ಇಲ್ಲ. ಜಾರ್ಜ್ ಬಹಳ ಹಿರಿಯ ಮಂತ್ರಿ. ಸ್ವಾಭಿಮಾನದಿಂದ ಕೆಲಸ ಮಾಡಿದವರು. ವಿರೋಧ ಪಕ್ಷದವರಿಗೆ ಆರೋಪ ಮಾಡುವುದೇ ಕೆಲಸ ಎಂದು ಪ್ರತಿಕ್ರಿಯಿಸಿದ ಅವರು, ಎಲ್ಲ ಇಲಾಖೆ ಸಂಬಂಧ ನನಗೆ ಮನವಿ ಕೊಡ್ತಾರೆ. ಗುತ್ತಿಗೆದಾರ ಸಂಘದವರು ಯಾವಾಗ ಏನು ಹೇಳ್ತಾರೋ ಗೊತ್ತಿಲ್ಲ. ನನ್ನ ಬಳಿ ಬಂದಾಗ ಅವರ ಸಮಸ್ಯೆ ಬಗೆಹರಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಬದಲಾವಣೆ ವಿಚಾರ:
ಕಾಲವೇ ಉತ್ತರ ಕೊಡುತ್ತೆಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೆಲಸ ಮಾಡಿದ್ದಾರೆ. ನಾನು ಸೇರಿದಂತೆ ಮುಖಂಡರು, ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲಾತಿ ಬಗ್ಗೆ ನಾಳೆ ಅಥವಾ ನಾಡಿದ್ದು ಕೋರ್ಟ್ ಇದೆ. ಮೀಸಲಾತಿ ಬಗ್ಗೆ ನಿರ್ಧಾರ ಆಗುತ್ತದೆ. ನಮ್ಮ ನಾಯಕರಿಗೆ ಸಿದ್ಧವಾಗಲು ಸೂಚಿಸಿದ್ದೇವೆ ಬ್ಯಾಲೆಟ್ ಅಲ್ಲಿ ಚುನಾವಣಾ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.