ಸಚಿವರ ಮೈಮುಟ್ಟಿ ತಳ್ಳಾಡುವುದು ಎಸ್ಪಿಯ ಕೆಲಸವೇ ?- ಎಚ್.ಕೆ.ಪಾಟೀಲ.

KannadaprabhaNewsNetwork |  
Published : Oct 24, 2026, 02:15 AM IST
 | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ಯಾರಿಗೆ ಪ್ರವೇಶಾವಕಾಶ ಇದೆ, ಯಾರಿಗೆ ಇಲ್ಲ ಎಂಬುದನ್ನು ಭದ್ರತಾ ಸಿಬ್ಬಂದಿ ಮೊದಲೇ ಸ್ಪಷ್ಟಪಡಿಸಬೇಕಿತ್ತು.

​ಗದಗ: ಸಚಿವರು ಎಂದರೆ ಸರ್ಕಾರವಿದ್ದಂತೆ. ಅಂತಹ ಮಂತ್ರಿಗಳನ್ನೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡೆದು, ಮೈಮುಟ್ಟಿ ತಳ್ಳಾಡುವುದು ಅತ್ಯಂತ ಅಶಿಸ್ತಿನ ಹಾಗೂ ಖಂಡನೀಯ ವರ್ತನೆ. ಈ ದುಂಡಾವರ್ತನೆಗೆ ತಕ್ಕ ಕಾನೂನು ಶಿಕ್ಷೆಯಾಗಬೇಕು ಎಂದು ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ​ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ತಮ್ಮ ಮತ ಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯಾರಿಗೆ ಪ್ರವೇಶಾವಕಾಶ ಇದೆ, ಯಾರಿಗೆ ಇಲ್ಲ ಎಂಬುದನ್ನು ಭದ್ರತಾ ಸಿಬ್ಬಂದಿ ಮೊದಲೇ ಸ್ಪಷ್ಟಪಡಿಸಬೇಕಿತ್ತು. ತಮ್ಮ ಕಣ್ಣೆದುರೇ ಕೆಲವರನ್ನು ಬಿಟ್ಟು, ಸಚಿವರನ್ನು ತಡೆಯುವುದು ಯಾವ ನ್ಯಾಯ ? ಹೊರಗಿನಿಂದ ಕರ್ತವ್ಯಕ್ಕೆ ಬಂದಿರುವ ಸಿಆರ್‌ಪಿಎಫ್ ಅಥವಾ ಮಿಲಿಟರಿ ಸಿಬ್ಬಂದಿಗೆ ನಮ್ಮ ರಾಜ್ಯದ ರಾಜಕಾರಣಿಗಳ ಮುಖ ಪರಿಚಯವಿಲ್ಲದಿದ್ದರೆ ಅರ್ಥ ಮಾಡಿಕೊಳ್ಳಬಹುದು. ಆದರೆ ನಮ್ಮದೇ ರಾಜ್ಯದ ಎಸ್ಪಿ ಆದವರಿಗೆ ಕ್ರಿಯಾಶೀಲ ನಾಯಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ನರೇಂದ್ರಸ್ವಾಮಿ ಅವರಾಗಲಿ ಅಥವಾ ಕೃಷಿ ಸಚಿವರಾಗಲಿ ಗುರುತು ಸಿಗಲಿಲ್ಲ ಎಂದರೆ ಹೇಗೆ ? ಗುರುತಿದ್ದರೂ ಅವರೊಂದಿಗೆ ಹೀಗೆ ದರ್ಪ ತೋರುವುದು ಸರಿಯೇ ? ಜನಪ್ರತಿನಿಧಿಗಳ ಮೈಮುಟ್ಟಿ ತಳ್ಳಾಡುವುದು ಎಸ್ಪಿಯ ಕೆಲಸವೇ ? ಎಂದು ನೇರವಾಗಿ ಪ್ರಶ್ನಿಸಿದರು.

ಮಂತ್ರಿಗಳ ಗೌರವಕ್ಕೆ ಧಕ್ಕೆ ಬಂದಿರುವ ಈ ಸಂದರ್ಭದಲ್ಲಿ ಸರ್ಕಾರ ನೈತಿಕ ಶಕ್ತಿ ಹಾಗೂ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದೆ ಪಿಎಸ್‌ಐ ಕೂಡ ಮಂತ್ರಿಗಳನ್ನು ತಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ಅಧಿಕಾರಿಗಳು ಈ ರೀತಿಯ ದಬ್ಬಾಳಿಕೆ, ಧರ್ಮಶಾಹಿ ಮಾಡುವುದು ಅಕ್ಷಮ್ಯ. ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಘಟನೆಗಳು ಎಲ್ಲೂ ಯಾರಿಂದಲೂ ಮರುಕಳಿಸಬಾರದು ಎಂದರು.

​ಕಾಂಗ್ರೆಸ್‌ಗೆ ಗೆಲುವಿನ ವಿಶ್ವಾಸ:

ಇದೇ ವೇಳೆ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಕಣದ ಬಗ್ಗೆ ಮಾತನಾಡಿದ ಎಚ್.ಕೆ. ಪಾಟೀಲ, ಸದ್ಯ ದೇಶ ಮತ್ತು ರಾಜ್ಯದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದು ಶತಸಿದ್ಧ ಎಂಬ ಅಚಲ ಆತ್ಮವಿಶ್ವಾಸ ನನಗಿದೆ. 2008 ರಿಂದ ಪಶ್ಚಿಮ ಪದವೀಧರ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿದೆ. ಅದನ್ನು ಈ ಬಾರಿ ಮರಳಿ ಪಡೆಯುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ತಾಲೂಕಿನಲ್ಲಿ ಶೇ. ೮೦.೨೯ ಮತದಾನ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ರೂಪಾಲಿ ನಾಯ್ಕ