ಕುಸುಮಾವತಿಯೇ ಸೌಜನ್ಯ ತಾಯಿನಾ?: ತನಿಖೆಗೆ ಆಗ್ರಹ

KannadaprabhaNewsNetwork |  
Published : Oct 30, 2026, 02:15 AM IST
ಕುಸುಮಾವತಿ | Kannada Prabha

ಸಾರಾಂಶ

ಧರ್ಮಸ್ಥಳ ಪಾಂಗಳದ ಕುಸುಮಾವತಿ ಅವರು ಇಂದಿರಾವತಿ ಎಂಬ ಮತ್ತೊಂದು ಹೆಸರು ಮತ್ತು ಗುರುತನ್ನು ಬಳಸಿಕೊಂಡು, ಸುಳ್ಳು ಪ್ರಮಾಣಪತ್ರ ಸಲ್ಲಿಸಿ, ಧರ್ಮಸ್ಥಳ ಗ್ರಾಮದಲ್ಲಿ ಸರ್ಕಾರಿ ಜಮೀನುಗಳನ್ನು ಪಡೆದುಕೊಂಡಿರುವ ಬಗ್ಗೆ ಹಾಗೂ ಮೃತ ಸೌಜನ್ಯಾ ಕುಸುಮಾವತಿ ಅವರ ಮಗಳೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಎಸ್‌ಐಟಿಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕಿಶೋರ್‌ ಎಂಬುವವರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ:

ಧರ್ಮಸ್ಥಳ ಪಾಂಗಳದ ಕುಸುಮಾವತಿ ಅವರು ಇಂದಿರಾವತಿ ಎಂಬ ಮತ್ತೊಂದು ಹೆಸರು ಮತ್ತು ಗುರುತನ್ನು ಬಳಸಿಕೊಂಡು, ಸುಳ್ಳು ಪ್ರಮಾಣಪತ್ರ ಸಲ್ಲಿಸಿ, ಧರ್ಮಸ್ಥಳ ಗ್ರಾಮದಲ್ಲಿ ಸರ್ಕಾರಿ ಜಮೀನುಗಳನ್ನು ಪಡೆದುಕೊಂಡಿರುವ ಬಗ್ಗೆ ಹಾಗೂ ಮೃತ ಸೌಜನ್ಯಾ ಕುಸುಮಾವತಿ ಅವರ ಮಗಳೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಎಸ್‌ಐಟಿಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕಿಶೋರ್‌ ಎಂಬುವವರು ಆಗ್ರಹಿಸಿದ್ದಾರೆ.

ಈ ಕುರಿತು ಅವರು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಮನವಿ ಹಾಗೂ ಬೆಳ್ತಂಗಡಿ ತಹಸೀಲ್ದಾರ್‌ ಹಾಗೂ ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿರುವ ಸ.ನಂ. 171/1ಪಿ1 (0.40 ಎಕ್ರೆ), 175/ಪಿ1 (0.25 ಎಕ್ರೆ) ಮತ್ತು 171/ಪಿ1 (1.97 ಎಕ್ರೆ) ಸ್ಥಿರಾಸ್ತಿಗಳು ಮೂಲತಃ ಸರ್ಕಾರಿ ಜಮೀನುಗಳಾಗಿರುತ್ತವೆ. ಈ ಜಮೀನುಗಳು ಅಕ್ರಮ-ಸಕ್ರಮ ಯೋಜನೆಯಡಿ ಇಂದಿರಾವತಿ ಚಂದಪ್ಪಗೌಡ ಎಂಬವರಿಗೆ 2015ರಲ್ಲಿ ಮಂಜೂರಾಗಿದೆ. ಆದರೆ ಜಮೀನುಗಳು ವಾಸ್ತವದಲ್ಲಿ ಕುಸುಮಾವತಿ ಎಂಬವರ ಸ್ವಾಧೀನದಲ್ಲಿರುತ್ತವೆ. ಇಂದಿರಾವತಿ ಎಂಬ ಹೆಸರಿನ ಯಾವುದೇ ಮಹಿಳೆ ಪಾಂಗಳ ಪರಿಸರದಲ್ಲಿ ವಾಸವಾಗಿರುವುದಿಲ್ಲ ಎಂದು ಕಿಶೋರ್‌ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸುವ ಮೊದಲೇ ಏ.10ರಂದು ದೂರು ಸಲ್ಲಿಸಿದ್ದೇನೆ. ನಂತರ ದಾಖಲೆಗಳನ್ನು ಪರಿಶೀಲಿಸುವಾಗ ಗಂಭೀರ ವ್ಯತ್ಯಾಸ ಕಂಡುಬಂದಿದ್ದು, ಇವು ಕೇವಲ ಕಂದಾಯ ವಿಷಯವಾಗಿರದೆ ಓರ್ವ ಮಹಿಳೆಯ ಇರುವಿಕೆ ಮತ್ತು ವ್ಯಕ್ತಿ ಗುರುತಿನ ವಂಚನೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಮೂನೆ 53ರ ಪ್ರಕಾರ ಇಂದಿರಾವತಿ ಜನಿಸಿದ್ದು 1967ರಲ್ಲಿ. ಆಧಾರ್ ದಾಖಲೆ ಪ್ರಕಾರ ಕುಸುಮಾವತಿ ಜನಿಸಿದ್ದು 1978. ಇಬ್ಬರ ನಡುವೆ ಸುಮಾರು 11 ವರ್ಷಗಳ ವ್ಯತ್ಯಾಸವಿದ್ದು, ಇವರು ಒಬ್ಬರೇ ವ್ಯಕ್ತಿಯಾಗಿರಲು ಸಾಧ್ಯವಿಲ್ಲ. ಮಾತ್ರವಲ್ಲದೆ ಪಡಿತರ ಚೀಟಿಯ ಪ್ರಕಾರ ಕುಸುಮಾವತಿ ಜನಿಸಿದ್ದು 1981. ಇದು ಅವರದ್ದೇ ಆಧಾರ್ ದಾಖಲೆಗೂ ಹೊಂದಿಕೆಯಾ ಗುವುದಿಲ್ಲ. ಹೀಗಿದ್ದರೂ ಕುಸುಮಾವತಿ ಅವರು ಕುಸುಮಾವತಿ ಯಾನೆ ಇಂದಿರಾವತಿ ಎಂದು ತಾನು ಮತ್ತು ಇಂದಿರಾವತಿ ಒಬ್ಬರೇ ಎಂಬುದಾಗಿ ಪ್ರಮಾಣಪತ್ರ (ಅಫಿಡವಿಟ್) ಹಾಗೂ ಇತರ ದಾಖಲೆಗಳನ್ನು ಸಲ್ಲಿಸಿರುತ್ತಾರೆ ಎಂದು ಕಿಶೋರ್‌ ತಿಳಿಸಿದ್ದಾರೆ.

2008ರ ಪಡಿತರ ಚೀಟಿಯಲ್ಲಿ ಕುಸುಮಾವತಿ ವಯಸ್ಸು 27 ವರ್ಷ ಎಂದಿದ್ದು, ಅವರ ಮಕ್ಕಳು ಎನ್ನಲಾದ ಸೌಜನ್ಯ ಮತ್ತು ಸೌಮ್ಯ ಇಬ್ಬರಿಗೂ 13 ವರ್ಷ ಎಂದು ನಮೂದಾಗಿದೆ. ಅಂದರೆ ಕುಸುಮಾವತಿ ಸುಮಾರು 14 ವರ್ಷದವರಿದ್ದಾಗ ಈ ಮಕ್ಕಳು ಜನಿಸಿರಬೇಕಾಗುತ್ತದೆ. ಇದು ಸೌಜನ್ಯ ಮತ್ತು ಸೌಮ್ಯ ಇವರು ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಸಂಶಯ ಉಂಟುಮಾಡುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇಂದಿರಾವತಿ ಮತ್ತು ಕುಸುಮಾವತಿ ಬೇರೆ ಬೇರೆ ವ್ಯಕ್ತಿಗಳೇ? ಈ ಮೇಲೆ ತಿಳಿಸಿರುವ ದಾಖಲೆಗಳ ಪ್ರಕಾರ ಇಬ್ಬರೂ ಒಂದೇ ವ್ಯಕ್ತಿಯಾಗಲು ಸಾಧ್ಯವಿಲ್ಲ. ಇಂದಿರಾವತಿ ಮತ್ತು ಕುಸುಮಾವತಿ ಅವರಿಗೆ ದಿ.ಚಂದಪ್ಪ ಗೌಡರೊಂದಿಗಿನ ಸಂಬಂಧವೇನು? ವಯಸ್ಸಿನ ಅಂತರ /ವ್ಯತ್ಯಾಸಗಳ ಕಾರಣಕ್ಕೆ, ಸೌಜನ್ಯ ಮತ್ತು ಸೌಮ್ಯ ಇವರ ನಿಜವಾದ ತಾಯಿ ಯಾರು ಎಂಬ ಸಂಶಯವಿದೆ. ಇಂದಿರಾವತಿ ಈಗ ಎಲ್ಲಿದ್ದಾರೆ? ಅವರು ಜೀವಂತವಿದ್ದಾರೆಯೇ? ಮರಣ ಹೊಂದಿದ್ದರೆ ಅದರ ದಿನಾಂಕ, ಸ್ಥಳ, ಕಾರಣ ಹಾಗೂ ಮರಣ ನೋಂದಣಿ ಆಗಿದೆಯೇ? ಕಾಣೆಯಾಗಿದ್ದರೆ ಯಾವಾಗಿನಿಂದ, ಮತ್ತು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆಯೇ? ಇಂದಿರಾವತಿ ಹೆಸರಿನಲ್ಲಿ 1999ರಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಯಾರು? 2015ರಲ್ಲಿ ಮಂಜೂರಾತಿ ಪಡೆದ ವ್ಯಕ್ತಿ ಯಾರು? ಮಂಜೂರಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ/ನೌಕರರು ಶಾಮೀಲಾಗಿದ್ದಾರೆಯೇ? ಕುಸುಮಾವತಿಯವರು ಸೌಜನ್ಯಳ ನಿಜವಾದ ತಾಯಿ ಅಲ್ಲದಿದ್ದರೂ, ಜನರ ಸಹಾನುಭೂತಿ ಪಡೆಯುವ ಉದ್ದೇಶದಿಂದ ತಾನು ಅವಳ ತಾಯಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆಯೇ? ಈ ಮೇಲಿನ ಜಮೀನಿನ ವಿಚಾರಕ್ಕಾಗಿ ಸೌಜನ್ಯಳ ಕೊಲೆಯನ್ನು ಮಾಡಿಸಲಾಯಿತೇ? ಈ ವಿಚಾರಗಳಲ್ಲಿ ವಿಠಲ ಗೌಡರ ಪಾತ್ರದ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಕುಸುಮಾವತಿ ಸೌಜನ್ಯಾ ತಾಯಿ ಎಂಬುದರಲ್ಲಿ ಶಂಕೆ ಇಲ್ಲ: ಎಸ್‌ಐಟಿ:

ಸೌಜನ್ಯಾ ಮತ್ತು ಕುಸುಮಾವತಿ ಅವರ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಸುವಂತೆ ಬಂದಿರುವ ದೂರಿನ ವಿಚಾರವಾಗಿ ಎಸ್‌ಐಟಿ ತಂಡದ ಸದಸ್ಯರೂ ಆಗಿರುವ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೆಲವು ಮಾಧ್ಯಮಗಳು ಕುಸುಮಾವತಿ ಅವರು ಸೌಜನ್ಯಾಳ ತಾಯಿಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಾಗಿ ವರದಿ ಮಾಡಿವೆ. ಆದರೆ, ಈ ವಿಚಾರದಲ್ಲಿ ಎಸ್‌ಐಟಿಗೆ ಯಾವುದೇ ರೀತಿಯ ಅನುಮಾನಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತನಿಖೆಯ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ. ಸ್ಥಳೀಯವಾಗಿ ಬೇರೆ ಯಾವುದೇ ವಿವಾದಗಳಿದ್ದರೆ, ಅವುಗಳನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸರು ಪರಿಶೀಲಿಸಲಿದ್ದಾರೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು