ಶಿವಾನಂದ ಗೊಂಬಿ
ಹುಬ್ಬಳ್ಳಿ: ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ಕುರಿತಂತೆ ಸಮಾಜದ ಮುಖಂಡರಲ್ಲಿ ಎದ್ದಿರುವ ಭಿನ್ನಮತ ಇದೀಗ ತಾರಕಕ್ಕೇರಿದ್ದು, ನಾಲ್ಕನೆಯ ಪೀಠದ ಹುಟ್ಟಿಗೆ ಮುನ್ನುಡಿ ಬರೆದಂತಾಗುತ್ತಿದೆ.ಶ್ರೀಗಳ ವಿಷಯವಾಗಿ ಅಸಮಾಧಾನ, ಭಿನ್ನಮತ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಭಿನ್ನಮತ ಬೀದಿರಂಪವಾಗಿತ್ತು. ಆದರೆ, ಈಗ ಈ ಶ್ರೀಗಳಿಂದಾಗಿ ಪಂಚಮಸಾಲಿ ಸಮಾಜದ ಕನ್ನಡಿ ಒಡೆದು ಚೂರು ಚೂರಾಗಿದೆ.
6 ವರ್ಷಗಳ ಹಿಂದೆ (2019) ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪರವಾಗಿ ಶ್ರೀಗಳು ಬ್ಯಾಟಿಂಗ್ ಮಾಡಿದ್ದರು. ಇತ್ತ ಧಾರವಾಡದಿಂದ ವಿನಯ ಕುಲಕರ್ಣಿ, ಅತ್ತ ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ ಕಾಂಗ್ರೆಸ್‌ನಿಂದ ಕಣಕ್ಕಿಳಿದಾಗ ಅವರ ಪರವಾಗಿ ಪ್ರಚಾರ ಮಾಡಿದ್ದರು. ಆಗಲೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಈ ವಿಷಯವಾಗಿ ಶ್ರೀಗಳಿಗೆ ತಿಳಿವಳಿಕೆ ನೋಟಿಸ್ ನೀಡಿತ್ತು."ಸಮಾಜ ಮತ್ತು ಪೀಠದ ಅಭಿವೃದ್ಧಿಗಾಗಿ ಕೆಲಸ ಮಾಡಿ. ರಾಜಕಾರಣಿಗಳ ಓಲೈಕೆ, ರಾಜಕೀಯ ಪಕ್ಷದ ಪರವಾಗಿ ಹೇಳಿಕೆ ನೀಡುವುದು ಬಿಡಿ. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ " ಎಂದು ನೋಟಿಸ್‌ಲ್ಲಿ ಸ್ಪಷ್ಟವಾಗಿಯೇ ಎಚ್ಚರಿಕೆ ನೀಡಲಾಗಿತ್ತು.
ಈ ನೋಟೀಸಿಗೆ ಉತ್ತರ ನೀಡಿದ್ದ ಶ್ರೀಗಳು, ಸಮಾಜದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದರಂತೆ. ಬಳಿಕ ಸಂಧಾನ ನಡೆದು ಶ್ರೀಗಳೇ ಪೀಠದ ಅಧ್ಯಕ್ಷರಾಗಿ ಮುಂದುವರೆದರು.ಯತ್ನಾಳ ಪರ ಬ್ಯಾಟಿಂಗ್: ನಾಲ್ಕೈದು ತಿಂಗಳ ಹಿಂದೆ ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿದಾಗ ಶ್ರೀಗಳು ಬಹಿರಂಗವಾಗಿ ಯತ್ನಾಳ ಪರ ಬ್ಯಾಟ್ ಬೀಸಿದ್ದರು. ಜತೆಗೆ ಊರೂರು ಅಲೆದು ಯತ್ನಾಳ ಉಚ್ಚಾಟನೆ ಖಂಡಿಸಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದುಂಟು. ಅದರಂತೆ ಕೆಲವರು ಯತ್ನಾಳ ಉಚ್ಚಾಟನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.
ಇದು ಟ್ರಸ್ಟ್‌ನ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕರೂ ಆದ ವಿಜಯಾನಂದ ಕಾಶಪ್ಪನವರ ಅವರನ್ನು ಕೆರಳಿಸಿತು. ಹೀಗಾಗಿ ಶ್ರೀಗಳಿಗೆ ಮತ್ತೊಮ್ಮೆ ನೋಟಿಸ್ ಜಾರಿ ಮಾಡಲಾಯಿತು. ಜತೆಗೆ ಪೀಠಕ್ಕೆ ಬೀಗವನ್ನು ಜಡಿದಿದ್ದುಂಟು. ಬಳಿಕ ಸ್ವಾಮೀಜಿ ಪರವಾಗಿರುವವರು ಬೀಗ ಒಡೆದು ಸ್ವಾಮೀಜಿ ಅವರನ್ನು ಒಳಗೆ ಕಳುಹಿಸಿದ್ದಾರೆ.ಮತ್ತೊಂದು ಪೀಠ: ಇವೆಲ್ಲದರ ನಡುವೆಯೇ ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಬೇರೆ ಸ್ವಾಮೀಜಿ ಅವರನ್ನು ನೇಮಕ ಮಾಡುತ್ತೇವೆ ಎಂದೆಲ್ಲ ಕಾಶಪ್ಪನವರ ಹೇಳಿದ್ದರಿಂದ ಸ್ವಾಮೀಜಿ ಪರ ಹಾಗೂ ವಿರೋಧ ಎರಡು ಬಣಗಳನ್ನು ಸೃಷ್ಟಿಯಾಗಿ ಮತ್ತೊಂದು ಪೀಠಕ್ಕೆ ರಹದಾರಿ ಮಾಡಿದೆ.
ಜಯಮೃತ್ಯುಂಜಯ ಶ್ರೀಗಳನ್ನು ಕೂಡಲಸಂಗಮ ಪೀಠದಿಂದ ತೆಗೆದರೆ ಮತ್ತೊಂದು ಪೀಠವನ್ನು ಹುಟ್ಟುಹಾಕಲು ಶ್ರೀಗಳ ಪರವಾಗಿರುವ ನಾಯಕರು ನಿರ್ಧರಿಸಿದ್ದಾರಂತೆ. ಇದಕ್ಕಾಗಿ ಧಾರವಾಡ- ಬೆಳಗಾವಿ ಮಾರ್ಗಮಧ್ಯೆದಲ್ಲಿ ಇದಕ್ಕಾಗಿ 10 ಎಕರೆ ಜಾಗೆ ಖರೀದಿಗೂ ಮುಂದಾಗಿದ್ದಾರಂತೆ. ಒಂದು ವೇಳೆ ಧಾರವಾಡ- ಬೆಳಗಾವಿ ಮಧ್ಯೆ ಪೀಠ ಸ್ಥಾಪನೆ ಮಾಡಲಾಗದಿದ್ದರೆ ಬೆಳಗಾವಿ ಜಿಲ್ಲೆ ಘಟಪ್ರಭಾದಲ್ಲಿ ಜಾಗೆ ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.ಎಷ್ಟನೆಯ ಪೀಠ?: 2008ರಲ್ಲಿ ಕೂಡಲಸಂಗಮದಲ್ಲಿ ಪೀಠ ಸ್ಥಾಪಿಸಲಾಗಿತ್ತು. ಬಳಿಕ ಕೆಲವೇ ದಿನಗಳಲ್ಲಿ ಮುಖಂಡರಲ್ಲಿ ಭಿನ್ನಮತ ಬಂದು ಹರಿಹರದಲ್ಲಿ 2ನೆಯ ಪೀಠ ಅಸ್ತಿತ್ವಕ್ಕೆ ಬಂತು. ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಮನಗೂಳಿಯಲ್ಲಿ 3ನೆಯ ಪೀಠ ಸ್ಥಾಪಿಸಲಾಗಿದೆ. ಇದೀಗ ನಾಲ್ಕನೆಯ ಪೀಠ ಹುಟ್ಟಿಗೆ ವೇದಿಕೆ ಸಜ್ಜಾಗುತ್ತಿದೆ. ಸಮಾಜದ ಸಂಘಟನೆಯ ಬದಲು ವಿಘಟನೆಯಾಗುತ್ತಿದೆಯೇ? ಎಂಬ ಪ್ರಶ್ನೆಯೂ ಉದ್ಭವವಾಗುತ್ತಿದೆ.ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಶ್ರೀಗಳಿಗೆ ಅಭದ್ರತೆ ಭಾವ ಕಾಡಿದರೆ ಕೂಡಲ ಸಂಗಮ ಪೀಠವನ್ನು ಮೂಲವಾಗಿಟ್ಟುಕೊಂಡು ಮತ್ತೊಂದು ಪರ್ಯಾಯ ಶಾಖಾ ಮಠವನ್ನು ಅವರಿಗಾಗಿನಿರ್ಮಾಣ ಮಾಡುತ್ತೇವೆ ಎಂದು ಮಾಜಿ ಸಚಿವ, ಪಂಚಮಸಾಲಿ ಸಮಾಜದ ಹಿರಿಯ ಧುರೀಣರಾದ ಸಿ.ಸಿ. ಪಾಟೀಲ ಹೇಳಿದರು.