ಪೊಲೀಸರ ನಿರ್ಲಕ್ಷ್ಯವೇ ಆಟೋಗಳ ಅಪಘಾತಕ್ಕೆ ಕಾರಣ?

KannadaprabhaNewsNetwork | Published : Feb 22, 2024 1:47 AM

ಸಾರಾಂಶ

ಠಾಣಾ ಸರಹದ್ದಿನಲ್ಲಿ ಸಂಚರಿಸುವ ಗೂಡ್ಸ್ ಹಾಗೂ ಪ್ಯಾಸೆಂಜರ್ ಆಟೋಗಳ ಹಾವಳಿ ಹಾಗೂ ಜನರ ಪ್ರಾಣದೊಂದಿಗೆ ಬೇಗೂರು ಠಾಣಾ ಪೊಲೀಸರು ಚೆಲ್ಲಾಟವಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಠಾಣಾ ಸರಹದ್ದಿನಲ್ಲಿ ಸಂಚರಿಸುವ ಗೂಡ್ಸ್ ಹಾಗೂ ಪ್ಯಾಸೆಂಜರ್ ಆಟೋಗಳ ಹಾವಳಿ ಹಾಗೂ ಜನರ ಪ್ರಾಣದೊಂದಿಗೆ ಬೇಗೂರು ಠಾಣಾ ಪೊಲೀಸರು ಚೆಲ್ಲಾಟವಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.ಪೊಲೀಸರ ಮೇಲಿನ ಸಾರ್ವಜನಿಕರ ಆರೋಪಕ್ಕೆ ಪುಷ್ಠಿ ಎಂಬಂತೆ ಬೇಗೂರು ಠಾಣಾ ವ್ಯಾಪ್ತಿಯ ಮೈಸೂರು-ಊಟಿ ಹೆದ್ದಾರಿಯ ಚಿಕ್ಕಹುಂಡಿ-ಚಿಕ್ಕಾಟಿ ಗೇಟ್‌ ನಡುವೆ ಮಂಗಳವಾರ ಪ್ಯಾಸೆಂಜರ್‌ ಆಟೋ ಹಾಗೂ ಕಾರು ಮುಖಾಮುಖಿ ಅಪಘಾತ ಸಾಕ್ಷಿಯಾಗಿದೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುವ ಬಹುತೇಕ ಗೂಡ್ಸ್, ಪ್ಯಾಸೆಂಜರ್ ಆಟೋಗಳಲ್ಲಿ ಇನ್ಸೂರೆನ್ಸ್, ಡ್ರೈವಿಂಗ್‌ ಲೈಸನ್ಸ್ ಇಲ್ಲದವರೂ ಚಾಲನೆ ಮಾಡುತ್ತಿದ್ದಾರೆ. ಅಲ್ಲದೆ ದಾಖಲಾತಿ ಇಲ್ಲದಿರುವ ಬಗ್ಗೆ ಹಾಗೂ ಸಣ್ಣ ಪುಟ್ಟ ಹುಡುಗರು ಓಡಿಸುತ್ತಿದ್ದರೂ ತಪಾಸಣೆ ಮಾಡುತ್ತಿಲ್ಲ. ಪ್ಯಾಸೆಂಜರ್ ಆಟೋ ಮತ್ತು ಕಾರಿನ ನಡುವೆ ಅಪಘಾತ ನಡೆದಿದ್ದು, ಪ್ಯಾಸೆಂಜರ್‌ ಆಟೋದಲ್ಲಿದ್ದ ೮ ಮಂದಿಗೂ ಕೈ, ಕಾಲು, ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅದೃಷ್ಠವಶಾತ್‌ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ನೂರಾರು ಆಟೋಗಳು ಸಂಚರಿಸುತ್ತಿವೆ. ಆದರೆ ಪೊಲೀಸರು ಬೈಕ್ ಸವಾರರ ಹಿಡಿದು ದಂಡವನ್ನು ಹಾಕುತ್ತಾರೆ. ಕುಡಿದು ತೆರಳುವ ಮಂದಿಗೆ ಕೇಸು ದಾಖಲಿಸುತ್ತಾರೆ. ಆದರೆ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುವ ಬಹುತೇಕ ಆಟೋಗಳ ತಪಾಸಣೆ ನಡೆಸುತ್ತಿಲ್ಲ ಹಾಗೂ ಆಟೋ ಚಾಲಕರು ಸಮವಸ್ತ್ರ ಧರಿಸುತ್ತಿಲ್ಲ. ಪರಿಸರ ಮಾಲಿನ್ಯ ಪತ್ರ ಇಲ್ಲದಿದ್ದರೂ ಪೊಲೀಸರು ಆಟೋ ತಪಾಸಣೆ ಮಾಡುತ್ತಿಲ್ಲವೇಕೆ ಎಂಬ ಪ್ರಶ್ನೆ ಎದ್ದಿದೆ. ಬೇಗೂರು ಸಂಚರಿಸುವ ಆಟೋಗಳಲ್ಲಿ ಕೆಲ ಚಾಲಕರು ನಿಯಮ ಮೀರಿ ಜನರನ್ನು ಕುರಿಗಳಂತೆ ತುಂಬಿಕೊಂಡು ಬೇಗೂರು ಪೊಲೀಸ್‌ ಠಾಣೆಯ ಮುಂದೆಯೇ ಹೋದರೂ ಪೊಲೀಸರು ಕೇಳುತ್ತಿಲ್ಲ. ಮಂಗಳವಾರ ಅಪಘಾತವಾದ ಪ್ಯಾಸೆಂಜರ್‌ ಆಟೋದಲ್ಲಿ ೮ ಮಂದಿ ಪ್ರಯಾಣಿಕರು ಇದ್ದರು. ಇಷ್ಟೊಂದು ಜನರನ್ನು ತುಂಬಿ ಹೋಗಲು ಪೊಲೀಸರು ಅವಕಾಶ ನೀಡಿರುವುದೇ ಅಪಘಾತಕ್ಕೆ ಕಾರಣ ಎನ್ನಬಹುದಾಗಿದೆ. ಇನ್ಸ್ಯೂರೆನ್ಸ್‌, ಡ್ರೈವಿಂಗ್ ಲೈಸನ್ಸ್, ಎಫ್‌ಸಿ, ವಾಯು ಮಾಲಿನ್ಯ ಪ್ರಮಾಣ ಪತ್ರ ಇಲ್ಲದಿರುವುದು ಹಾಗೂ ಸಮವಸ್ತ್ರ ಧರಿಸಿಲ್ಲದವರ ಮೇಲೆ ತಪಾಸಣೆ ನಾಳೆಯಿಂದ ಬಿಗಿಗೊಳಿಸಲಾಗುವುದು.

ವಿ.ಸಿ. ವನರಾಜು, ಸರ್ಕಲ್‌ ಇನ್ಸ್‌ಪೆಕ್ಟರ್

Share this article