ರೆಡ್ಡಿ ಜೈಲುಪಾಲು, ಶ್ರೀರಾಮುಲುಗೆ ಅನುಕೂಲ?

KannadaprabhaNewsNetwork | Updated : May 08 2025, 12:33 PM IST

ಸಾರಾಂಶ

ಜನಾರ್ದನ ರೆಡ್ಡಿ ಜೈಲು ಸೇರಿರುವುದು ರೆಡ್ಡಿ ಮಾಜಿ ಸ್ನೇಹಿತ ಶ್ರೀರಾಮುಲು ಭವಿಷ್ಯಕ್ಕೆ ಅನುಕೂಲಕರ ವಾತಾವರಣ ಒದಗಿಸಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

 ಬಳ್ಳಾರಿ : ಅಕ್ರಮ ಗಣಿಗಾರಿಕೆ ಸಾಬೀತಾಗಿ ಶಾಸಕ ಜಿ. ಜನಾರ್ದನ ರೆಡ್ಡಿ ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಮೇಲಾಗುವ ಪರಿಣಾಮಗಳ ಕುರಿತು ಚರ್ಚೆಯಾಗುತ್ತಿದ್ದು, ಜನಾರ್ದನ ರೆಡ್ಡಿ ಜೈಲು ಸೇರಿರುವುದು ರೆಡ್ಡಿ ಮಾಜಿ ಸ್ನೇಹಿತ ಶ್ರೀರಾಮುಲು ಭವಿಷ್ಯಕ್ಕೆ ಅನುಕೂಲಕರ ವಾತಾವರಣ ಒದಗಿಸಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಸುಮಾರು ಎರಡೂವರೆ ದಶಕಗಳ ಹಿಂದೆ ಜತೆಯಾಗಿಯೇ ರಾಜಕೀಯ ಅಖಾಡಕ್ಕೆ ಎಂಟ್ರಿ ನೀಡಿದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಆಪ್ತ ಸ್ನೇಹಿತರೆಂದೇ ಗುರುತಿಸಿಕೊಂಡಿದ್ದರು. ರೆಡ್ಡಿ ಗಣಿಗಾರಿಕೆ ಚಟುವಟಿಕೆ ಜತೆಗೆ ಜಿಲ್ಲೆಯ ರಾಜಕೀಯ ಹಿಡಿತ ತೆಗೆದುಕೊಳ್ಳುವಾಗಲೂ ಶ್ರೀರಾಮುಲು ಜತೆಗಿದ್ದು ಸಹಕಾರ ನೀಡಿದರು. ಶ್ರೀರಾಮುಲು ಹಾಗೂ ರೆಡ್ಡಿ ಪರಸ್ಪರ ಸಹಕಾರ ಮಾಡಿಕೊಂಡೇ ಗಣಿ ಜಿಲ್ಲೆಯ ರಾಜಕೀಯ ಸಾಮ್ರಾಜ್ಯ ವಿಸ್ತರಿಸಿದರು. ಪರಿಣಾಮ ಇಬ್ಬರಿಗೂ ಸಚಿವರಾಗಿ ಅಧಿಕಾರ ಉಣ್ಣುವ ಯೋಗ ಕೂಡಿ ಬಂತು. ಆದರೆ, ಕಳೆದ ಒಂದೂವರೆ ವರ್ಷಗಳಿಂದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ವಿರಸ ಶುರುವಾಗಿದೆ. ಅಲ್ಲದೆ ಪರಸ್ಪರ ಬಹಿರಂಗವಾಗಿ ಏಕವಚನದಲ್ಲಿ ಬೈದಾಡಿಕೊಳ್ಳುವ ಮಟ್ಟಿಗೆ ಅಸಮಾಧಾನ ಹೊರ ಬಿತ್ತು.

ಈ ಬೆಳವಣಿಗೆ ಬರುವ ಚುನಾವಣೆಯಲ್ಲಿ ಶ್ರೀರಾಮುಲು ಗೆಲುವಿಗೆ ರೆಡ್ಡಿ ಪರೋಕ್ಷವಾಗಿ ಎದುರೇಟು ನೀಡಬಹುದು ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು.

ಏತನ್ಮಧ್ಯೆ ಶ್ರೀರಾಮುಲು ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧಿಸುವುದೇ ಬೇಡ ಎಂಬ ನಿರ್ಧಾರ ಕೈಗೊಂಡು ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಗಿಳಿಯಲು ನಿರ್ಧರಿಸಿ, ರಾಜಕೀಯ ಚಟುವಟಿಕೆಯನ್ನು ಕೂಡ್ಲಿಗಿಗೆ ಶಿಫ್ಟ್ ಮಾಡಿದರು.

ಕೂಡ್ಲಿಗಿಯಿಂದ ಸ್ಪರ್ಧಿಸುವ ಇಂಗಿತವನ್ನು ಸಹ ಶ್ರೀರಾಮುಲು ಅನೇಕ ಬಾರಿ ಹೇಳಿಕೊಂಡರು. ಆದರೆ, ಕೂಡ್ಲಿಗಿಯಿಂದ ಶ್ರೀರಾಮುಲು ಸ್ಪರ್ಧಿಸಿದರೂ ಜನಾರ್ದನ ರೆಡ್ಡಿ ತನ್ನ ರಾಜಕೀಯ ತಂತ್ರಗಾರಿಕೆ ಬಳಸಿ ಶ್ರೀರಾಮುಲು ಅವರಿಗೆ ಸೋಲುಣ್ಣಿಸಲು ಮುಂದಾಗಬಹುದು ಎಂದೇ ಭಾವಿಸಲಾಗಿತ್ತು. ಈ ಅಪಾಯವನ್ನು ಅರಿತಿರುವ ಶ್ರೀರಾಮುಲು, ಕೂಡ್ಲಿಗಿಯಲ್ಲಿ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರು. ಜಾತ್ರೆ, ಮದುವೆ, ಸಾವು, ನೋವು ಸೇರಿದಂತೆ ನಾನಾ ಕಾರ್ಯಗಳಿಗೆ ಸ್ಪಂದಿಸುವ ಮೂಲಕ ಕೂಡ್ಲಿಗಿ ಜನರಿಗೆ ಹತ್ತಿರವಾಗುವ ರಾಜಕೀಯ ಕಾರ್ಯತಂತ್ರಗಳನ್ನು ಶ್ರೀರಾಮುಲು ರೂಪಿಸಿಕೊಂಡೇ ರಾಜಕೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಶ್ರೀರಾಮುಲು ಬರುವ ಚುನಾವಣೆಗೆ ತಯಾರಿಯಲ್ಲಿರುವಾಗಲೇ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪ ಸಾಬೀತಾಗಿ ಜೈಲು ಪಾಲಾಗಿದ್ದಾರೆ. ಈಗ ಶ್ರೀರಾಮುಲು ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ರೆಡ್ಡಿ ಜೈಲು ಪಾಲು ಶ್ರೀರಾಮುಲು ಅವರಿಗೆ ಅನುಕೂಲವೇ ಆಗಲಿದೆ ಎಂದೇ ಸಂತಸಗೊಂಡಿದ್ದಾರೆ.

ಹಾಗಂತ ಶ್ರೀರಾಮುಲು ಅವರಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಗೆಲುವು ಸುಲಭದ ತುತ್ತಲ್ಲ. ಕಾಂಗ್ರೆಸ್‌ನ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅತಿ ಹೆಚ್ಚು ಅನುದಾನ ತಂದು ಅಭಿವೃದ್ಧಿಗೊಳಿಸುತ್ತಿರುವ ಶಾಸಕ ಎಂದು ಹೆಸರು ಮಾಡುತ್ತಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯಾಗಿ ಯಾರೇ ಕಣಕ್ಕಿಳಿದರೂ ಡಾ. ಶ್ರೀನಿವಾಸ್ ಎದುರೇಟು ನೀಡುವ ಸಾಧ್ಯತೆ ಇದೆ.

ಸದ್ಯ ರೆಡ್ಡಿ ಜೈಲು ಸೇರಿರುವುದು ಶ್ರೀರಾಮುಲು ಬೆಂಬಲಿಗರಿಗೆ ಸಂತಸ ತಂದಿದೆಯಾದರೂ ಬರುವ ಚುನಾವಣೆ ಹೊತ್ತಿಗೆ ರಾಜಕೀಯವಾಗಿ ಜರುಗುವ ಪಲ್ಲಟಗಳ ಮೇಲೆಯೇ ಶ್ರೀರಾಮುಲು ರಾಜಕೀಯ ಭವಿಷ್ಯ ನಿಂತಿದೆ.

Share this article