ಶಾಸಕ ಡಾ. ಚಂದ್ರು ಲಮಾಣಿಗೆ ಕಂಟಕವಾಗುತ್ತಾ ಲಂಚದ ಆಡಿಯೋ?

KannadaprabhaNewsNetwork |  
Published : Feb 23, 2026, 02:15 AM IST
ಡಾ. ಚಂದ್ರು ಲಮಾಣಿ | Kannada Prabha

ಸಾರಾಂಶ

ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಶಾಸಕರು ನೇರವಾಗಿಯೇ ಗುತ್ತಿಗೆದಾರ ವಿಜಯರಾಜ ಅವರೊಂದಿಗೆ ಮಾತನಾಡಿರುವುದು ಸ್ಪಷ್ಟವಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಗುತ್ತಿಗೆದಾರರಿಂದ ಲಂಚ ಕೇಳಿ ಅದನ್ನು ಪಡೆಯುವ ವೇಳೆ ಸಿಕ್ಕಿ ಬಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಭಾನುವಾರ ಸಾಮಾಜಿಕ ಜಾಣತಾಣಗಳಲ್ಲಿ ಹರಿದಾಡುತ್ತಿರುವ ಶಾಸಕರದ್ದು ಎಂದು ಹೇಳಲಾದ ಆಡಿಯೋಗಳು ಮಾತ್ರ ಖಂಡಿತವಾಗಿಯೂ ಶಾಸಕರಿಗೆ ಕಂಟಕ ಸೃಷ್ಟಿಸುವ ಲಕ್ಷಣಗಳಿವೆ.

ಶನಿವಾರ ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿಯಾಗಿದ್ದು, ಈ ಹಣವನ್ನು ನಾನು ತೆಗೆದುಕೊಳ್ಳುತ್ತಿರಲಿಲ್ಲ, ನನ್ನ ಆಪ್ತ ಸಹಾಯಕ ಈ ತಪ್ಪನ್ನು ಮಾಡಿದ್ದಾನೆ. ಇದರಲ್ಲಿ ನನ್ನದೇ ಪಾತ್ರವಿಲ್ಲ ಎನ್ನಲು ಶಾಸಕರಿಗೆ ಅವಕಾಶವಿತ್ತು.

ಆದರೆ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಶಾಸಕರು ನೇರವಾಗಿಯೇ ಗುತ್ತಿಗೆದಾರ ವಿಜಯರಾಜ ಅವರೊಂದಿಗೆ ಮಾತನಾಡಿರುವುದು ಸ್ಪಷ್ಟವಾಗಿದೆ. ಇದನ್ನು ಲೋಕಾಯುಕ್ತರು ತನಿಖೆಗೆ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಖಂಡಿತ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಕೆಲವು ಹಿರಿಯ ವಕೀಲರು.

ಧ್ವನಿ ಪರೀಕ್ಷೆಯಾಗಬೇಕು: ಶಾಸಕ ಡಾ. ಚಂದ್ರು ಲಮಾಣಿ ಗುತ್ತಿಗೆದಾರ ವಿಜಯರಾಜ ಹಾಕಿದ ಆವಾಜ್, ಹಣ ನೀಡುವಂತೆ ಸೂಚಿಸಿರುವುದು, ನಿನ್ನ ನಡ (ಸೊಂಟ) ಮುರಿಸುತ್ತೇನೆ ಎಂದು ಆವಾಜ್ ಹಾಕಿರುವ ಆಡಿಯೋಗಳು ಬಹಿರಂಗವಾಗಿವೆ. ಆದರೆ ಇದರಲ್ಲಿ ಮಾತನಾಡಿರುವುದು ಶಾಸಕರೇ ಎಂಬ ಕುರಿತು ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಧ್ವನಿ ಪರಿಶೀಲನೆಯಾಗಬೇಕು. ಒಂದೊಮ್ಮೆ ಇದು ಶಾಸಕರದ್ದೇ ಧ್ವನಿ ಎಂದು ಸಾಬೀತಾದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಮತ್ತಷ್ಟು ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕಾಂಗ್ರೆಸ್ ಕಾರ್ಯಕರ್ತ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿ, ವಿರೋಧ ಪಕ್ಷವಾಗಿರುವ ಬಿಜೆಪಿ ಜಂಘಾಬಲವನ್ನೇ ಉಡುಗಿಸಿದ ಡಾ. ಚಂದ್ರು ಲಮಾಣಿ ಅವರ ಟ್ರ್ಯಾಪ್ ಆಗಲು ದೂರು ನೀಡಿದ ವ್ಯಕ್ತಿ ವಿಜಯರಾಜ ಪೂಜಾರ ಪ್ರಮುಖ ಕಾರಣವಾಗಿದ್ದಾರೆ. ವಿಜಯರಾಜ ಪೂಜಾರ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಳಗುಂದ ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ. ಪೂಜಾರ ಈ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಸಚಿವ ಎಚ್.ಕೆ. ಪಾಟೀಲ ಅವರ ಪುತ್ರ ಕೃಷ್ಣಗೌಡ ಪಾಟೀಲ ಅವರ ಆಪ್ತರಾಗಿದ್ದರು. ಹಾಗಾಗಿ ಈ ಪ್ರಕರಣದ ಹಿಮದೆ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಪ್ರಬಲವಾಗಿ ಆರೋಪಿಸುತ್ತಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳ ಎಲ್ಲ ವೇದಿಕೆಗಳಲ್ಲಿಯೂ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಫೆ. 7ರಂದು ಜಿಲ್ಲೆಯ ಬೆಳ್ಳಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಮಾತಿನ ಮೂಲಕ ಕುಟುಕಿ, ನೀವು ಕೇವಲ ವಿಧಾನಸೌಧದಲ್ಲಿ ಮಾತನಾಡುವ ಬದಲು ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಡಿ ಎನ್ನುವ ರೀತಿಯಲ್ಲಿ ಹೇಳಿದ್ದರು.

ಇದರಿಂದ ಕುಪಿತಗೊಂಡ ಶಾಸಕ ಡಾ. ಚಂದ್ರು ಲಮಾಣಿ ವೇದಿಕೆಯಲ್ಲಿಯೇ ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ನಿಮ್ಮದೇ ಸರ್ಕಾರ, ನೀವೇ ಉಸ್ತುವಾರಿ ಸಚಿವರು, ನೀವು ಜಿಲ್ಲೆಯ ಅಭಿವೃದ್ಧಿಗೆ, ಸಹಕಾರಿ ರಂಗಕ್ಕೆ ಏನು ಕೊಡುಗೆ ನೀಡಿದ್ದೀರಿ? ಎಂದು ಮರುಪ್ರಶ್ನೆ ಮಾಡುತ್ತಿದ್ದಂತೆ ಸಭೆಯಲ್ಲಿ ಗೊಂದಲ, ಕೋಲಾಹಲ ಉಂಟಾಗುತ್ತಿದ್ದಂತೆ ಸಚಿವ ಎಚ್.ಕೆ. ಪಾಟೀಲ ಸಭೆಯಿಂದ ನಿರ್ಗಮಿಸಿದ್ದರು.

ನಂತರ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ಘಟನೆಯಾದ 15 ದಿನಗಳಲ್ಲಿಯೇ ಶಾಸಕ ಡಾ. ಚಂದ್ರು ಲಮಾಣಿ ಮೇಲೆ ಲೋಕಾ ದಾಳಿಯಾಗಿರುವುದು, ಮುಖ್ಯವಾಗಿ ಟ್ರ್ಯಾಪ್ ಆಗಲು ಕಾಂಗ್ರೆಸ್ ಕಾರ್ಯಕರ್ತ, ಯುವ ಕಾಂಗ್ರೆಸ್ ಅಧ್ಯಕ್ಷರ ಆಪ್ತನೇ ಮಾಡಿರುವುದು ಹಲವಾರು ರೀತಿಯ ಸಂಶಯ ಮತ್ತು ಚರ್ಚೆಗೆ ಕಾರಣವಾಗಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಿದೆ.

ನಮ್ಮ ಶಾಸಕರು ಗುತ್ತಿಗೆದಾರರಿಗೆ ಉತ್ತಮವಾಗಿ ಕೆಲಸ ಮಾಡಿ ಎಂದು ಎಚ್ಚರಿಸುತ್ತಾರೆ. ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು ಆಗಬಾರದು ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್‌ನವರು ಷಡ್ಯಂತ್ರ ಮಾಡಿ ಅವರನ್ನು ಈ ಜಾಲದಲ್ಲಿ ಸಿಲುಕಿಸಿದ್ದಾರೆ. ನಾವು ನೈತಿಕವಾಗಿ ಶಾಸಕರೊಂದಿಗೆ ಇದ್ದೇವೆ ಎಂದು ಬಿಜೆಪಿ ಮುಖಂಡರಾದ ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯವರಂತೆ ನಿಂದಿಸುವ ಕೆಲಸ ಮಾಡಿಲ್ಲ
ಬಾಡಿಗೆ ಪಾವತಿಸದಿರುವ ಅಂಗಡಿಗಳಿಗೆ ಬೀಗ ಜಡಿದ ನಗರಸಭೆ