ಕಾನೇರಿಯಿಂದ ಗುಂದದ ಉಳವಿ ಕ್ರಾಸ್ ವರೆಗೆ ಹದಗೆಟ್ಟ ರಸ್ತೆ
ತಾಲೂಕಿನ ಗುಂದ-ಉಳವಿ ರಸ್ತೆಯ ಕಾನೇರಿಯಿಂದ ಗುಂದದ ಉಳವಿ ಕ್ರಾಸ್‌ವರೆಗೆ ರಸ್ತೆ ಹದಗೆಟ್ಟಿದ್ದು, ಹೊಂಡದಲ್ಲಿ ರಸ್ತೆ ಇದೆಯೋ, ರಸ್ತೆಯಲ್ಲಿ ಹೊಂಡವಿದೆವೋ ತಿಳಿಯದಂತಾಗಿದೆ. ಕಳೆದ 3 ವರ್ಷಗಳಿಂದ ಜನರು ಈ ರಸ್ತೆಯಲ್ಲಿ ಓಡಾಡಿ ಸಾಕಪ್ಪ ಸಾಕು ಈ ರಸ್ತೆಯ ಸಹವಾಸ ಎನ್ನುತ್ತಿದ್ದಾರೆ. ಉತ್ತಮ ರಸ್ತೆ ಮಾಡುವಲ್ಲಿ ಕಾಳಜಿ ತೋರದ ಜನಪ್ರತಿನಿಧಿಗಳಿಗೆ ಶಾಪ ಹಾಕದ ದಿನಗಳಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ನಂದಿಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಶಾಸಕರಿಗೆ ಹೆಚ್ಚಿನ ಬೆಂಬಲ ನೀಡಿದ್ದರೂ ಅಭಿವೃದ್ಧಿಯಲ್ಲಿ ಕಡೆಗಣಿಸಲಾಗಿದೆ ಎಂಬ ನೋವು ಇಲ್ಲಿಯ ಮತದಾರರನ್ನು ಕಾಡುತ್ತಿದೆ. ಇದಕ್ಕೆಲ್ಲ ಲೋಕೋಪಯೋಗಿ ಇಲಾಖೆಯ ನಿಷ್ಕಾಳಜಿಯೇ ಕಾರಣವಾಗಿದೆ. ಈ ರಸ್ತೆ ಸುಧಾರಣೆ ಕಾಮಗಾರಿ ಏಪ್ರಿಲ್ 2025ರಲ್ಲೇ ಶುರುವಾಗಿತ್ತು. ಆದರೆ, ಗುತ್ತಿಗೆದಾರನ ನಿಧಾನಗತಿಯ ಹಾಗೂ ನಿರ್ಲಕ್ಷ್ಯದ ಕಾರಣದಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಇಂತಹ ರಸ್ತೆಯಲ್ಲಿ ಸಂಚರಿಸಿ ಸ್ಥಳೀಯರು, ಪ್ರವಾಸಿಗರು ಹೈರಾಣಾಗಿದ್ದಾರೆ.ಕಾನೇರಿಯಿಂದ-ಹೆಣಕೋಳ ಕ್ರಾಸ್ ವರೆಗೆ ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹9 ಕೋಟಿ ಮಂಜೂರು ಮಾಡಲಾಗಿತ್ತು. ಆದರೆ, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಎರಡು ವರ್ಷವಾದರೂ 12 ಕಿಮೀ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ. ಮುಂದೆ ಮಳೆಗಾಲ ಆರಂಭವಾಗುತ್ತದೆ. ಅಷ್ಟರೊಳಗೆ ಕಾನೇರಿಯಿಂದ ಗುಂದ ಕ್ರಾಸ್ ತನಕ ರಸ್ತೆ ಮಾಡಿಕೊಡಿ ಎಂದು ನಂದಿಗದ್ದೆ ಗ್ರಾಪಂ ಜನತೆ ಒತ್ತಾಯಿಸಿದ್ದಾರೆ.
ಉಳವಿ ನಂದಿಗದ್ದೆ ಗುಂದ ಭಾಗದಲ್ಲಿ ರಸ್ತೆಗಳ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದ್ದು ಶಾಸಕರು ಈ ಬಗ್ಗೆ ಕಾಳಜಿ ವಹಿಸಿ ಮಂಜೂರಾದ ಕೆಲಸ ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಹೇಳಬೇಕು. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತ ಬಸವರಾಜ್ ಕೂಡಲೇ ಹಾಳಾದ ರಸ್ತೆ ಸರಿಪಡಿಸಲು ಗುತ್ತಿಗೆದಾರರಿಗೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.