ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದ ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಇಲ್ಲ ಪಾಕಿಸ್ತಾನದ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್, ಈಶ್ವರಪ್ಪ ಹರಿಹಾಯ್ದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಚಿವ ಜಮೀರ್ ಅಹಮ್ಮದ್ ಅವರು ತೆಲಂಗಾಣದಲ್ಲಿ ಪ್ರಚಾರಕ್ಕೆ ಹೋದಾಗ ಮುಸ್ಲಿಂ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಿ ವಿಧಾನಸಭೆ ಚಟುವಟಿಕೆ ನಡೆಸಬೇಕು ಎಂದಿದ್ದಾರೆ. ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ. ನಾವು ಗೌರವ ಕೊಡುತ್ತಿರುವುದು ಖಾದರ್ ಅನ್ನೋ ಬೋಳಪ್ಪ ಇದ್ದಾನೆ ಅಂತಲ್ಲ. ದೇಶದ ಸಂವಿಧಾನ ಹಾಗೂ ಸ್ಪೀಕರ್ ಸ್ಥಾನಕ್ಕೆ. ಈ ರೀತಿ ರಾಷ್ಟ್ರದ್ರೋಹಿ ಹೇಳಿಕೆ ನೀಡಿರುವ ಜಮೀರ್ ಅಹಮ್ಮದ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಜಮೀರ್ ಹೇಳಿಕೆಗೆ ಮುಂದಿನ ಚುನಾವಣೆಯಲ್ಲಿ ಹಿಂದುಗಳು, ಮುಸ್ಲಿಮರು ಸೇರಿ ಉತ್ತರ ಕೊಡುತ್ತಾರೆ. ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಏಕೆ, ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಗಂಭೀರವಾಗಿ ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಸುವಂತೆ ಸೂಚನೆ ನೀಡಬೇಕು. ಈ ವಿಷಯದಲ್ಲಿ ಹಿಂದೂಗಳು ಜಾಗೃತರಾಗಬೇಕು. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕಿದೆ ಎಂದರು.
ರಾಜ್ಯದಲ್ಲಿ ತಾಲಿಬಾನ್ ಶಿಕ್ಷಣ!:ದೇಶದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಶಿಕ್ಷಣ ಕೊಡುವ ವ್ಯವಸ್ಥೆ ದೇಶದಲ್ಲಿ ಇಲ್ಲ. ಆದರೂ, ರಾಜ್ಯದಲ್ಲಿ ತಾಲಿಬಾನ್ ಶಿಕ್ಷಣ ನಡೆಯುತ್ತಿದೆ. ಅನಾಥಾಲಯದಲ್ಲಿ ತಾಲಿಬಾನ್ ಶಿಕ್ಷಣ ಕೊಡುತ್ತಿರುವ ಬಗ್ಗೆ ಸುದ್ದಿಯಾಗಿದೆ. ರಾಷ್ಟ್ರೀಯ ಮಕ್ಕಳ ಆಯೋಗದವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡಬೇಕು ಎಂದು ಒತ್ತಾಯಿಸಿದರು.ಬೆಂಗಳೂರಿನಲ್ಲಿ ಸಯ್ಯದ್ ಅನಾಥಾಲಯದಲ್ಲಿ 200 ಅನಾಥ ಮಕ್ಕಳಿಗೆ ತಾಲಿಬಾನ್ ಶಿಕ್ಷಣ ಕೊಡಲಾಗುತ್ತಿದೆ. ಅಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲ. ಆ ಮಕ್ಕಳಿಗೆ ಭಾರತೀಯ ರಾಷ್ಟ್ರೀಯ ಶಿಕ್ಷಣ ಕೊಡಲಿ, ತಾಲಿಬಾನ್ ಶಿಕ್ಷಣ ಕೊಡಬಾರದು ಎಂದು ಟೀಕಿಸಿದರು.ಜಾತಿ ಜನಗಣತಿ ಸಂವಿಧಾನ ಬದ್ಧವಾಗಿರಬೇಕು:
ಕಾಂತರಾಜ್ ಅವರ ಹಿಂದುಳಿದ ಆಯೋಗದ ವರದಿಗೆ ಕಾರ್ಯದರ್ಶಿ ಸಹಿ ಹಾಕಿಲ್ಲ. ಕಾರ್ಯದರ್ಶಿ ಸಹಿ ಹಾಕಿಲ್ಲ ಅಂದರೆ ಕವಡೆ ಕಾಸಿನ ಕಿಮ್ಮತ್ತು ಇರಲ್ಲ. ಅದಕ್ಕೆ ಬೆಂಕಿ ಹಾಕಿ ಅಂತಾ ನಾನು ಹೇಳಿದ್ದೆ. ಈ ಹೇಳಿಕೆಯನ್ನು ತಿರುಚಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತೀ,ನ.ಶ್ರೀನಿವಾಸ್ ಅವರು ವರದಿ ಜಾರಿಗೆ ಬಿಜೆಪಿ ನಾಯಕರ ವಿರೋಧ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಅವರಿಗೆ ಇನ್ನೂ ಕಾಂಗ್ರೆಸ್ ವಾಸನೆ ಹೋಗಿಲ್ಲ ಎಂದು ಖಾರವಾಗಿ ಹೇಳಿದರು.ಜಾತಿ ಜನಗಣತಿಗಳು ಸಂವಿಧಾನ, ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ಕೊಡಬೇಕು. ನಮ್ಮ ದೇಶದ ತಜ್ಞರ ಜೊತೆ ಚರ್ಚೆ ನಡೆಸಬೇಕು. ಆದರೆ, ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಅಂತಾ ಹೆಸರು ಪಡೆಯಲು ಸಿದ್ದರಾಮಯ್ಯ ಕಾಂತರಾಜ್ ಆಯೋಗ ರಚಿಸಿದರು. ವರದಿ ಬಿಡುಗಡೆ ಮಾಡದಿದ್ದಕ್ಕೆ ಜಾತಿ ಜಾತಿ ನಡುವೆ ಬೆಂಕಿ ಹತ್ತಿಕೊಂಡಿದೆ. ಕೆಲವರು ಸ್ವಾಗತಿಸಿದರೆ, ಕೆಲವರು ವಿರೋಧ ಮಾಡ್ತಿದ್ದಾರೆ. ವರದಿ ಬಿಡುಗಡೆಗೆ ಮೊದಲು ಸಿದ್ದರಾಮಯ್ಯ ಹಿಂದು ಸಮಾಜದ ಪ್ರಮುಖ ಸ್ವಾಮೀಜಿಗಳ ಸಭೆ ಕರೆಯಲಿ. ಯಾವುದೇ ಜಾತಿಗೆ ಅನ್ಯಾಯ ಆಗೋದು ಬೇಡ. ವರದಿಯಿಂದ ಜಾತಿ ಜಾತಿಗಳು ಛಿದ್ರವಾಗೋದು ಬೇಡ. ಮೊದಲು ವರದಿಯನ್ನು ಚರ್ಚೆಗೆ ಬಿಡಿ, ಚರ್ಚೆ ನಂತರ ವರದಿ ಬಿಡುಗಡೆ ಮಾಡಿ. ಇದರಲ್ಲಿ ಸರ್ವಾಧಿಕಾರ ಧೋರಣೆ ಮಾಡಿದರೆ ನಿಮ್ಮ ಸರ್ಕಾರ ಬಾಳ ದಿನ ಉಳಿಯಲ್ಲ ಎಂದು ಹರಿಹಾಯ್ದರು.
- - -ಬಾಕ್ಸ್ "ಹಲೋ ಅಪ್ಪ... " ವಿಡಿಯೋ ವಿಚಾರ ಬಗ್ಗೆ ತನಿಖೆಯಾಗಲಿಹಲೋ ಅಪ್ಪ ಸಿಎಂ ಪುತ್ರನ ಅಡಿಯೋ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ ಅವರು, ಅವರ ಪಕ್ಷದ ಅನೇಕ ಸಚಿವರು, ಶಾಸಕರು ನನ್ನ ಬಳಿ ಹೇಳಿದ್ದಾರೆ. ಯಾವುದೇ ಸರ್ಕಾರದಲ್ಲಿ ಆಗದ ಭ್ರಷ್ಟಾಚಾರ ಈ ಸರ್ಕಾರದಲ್ಲಿ ಆಗಿದೆ. ಸಿಎಂ ಕುಟುಂಬ, ಡಿಸಿಎಂ ಕುಟುಂಬ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಅವರದ್ದೇ ಪಕ್ಷದ ಶಾಸಕರ ಆರೋಪ ಇದು. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಓಟು ಹಾಕಿದ್ರೆ ಗ್ಯಾರಂಟಿ ಯೋಜನೆ ವಾಪಸ್ ಪಡೆಯಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆ ಎಲ್ಲಿಯೂ ಅವ್ಯವಹಾರ ಆಗಿಲ್ಲ. ಬಡವರಿಗೆ ಅನುಕೂಲ ಆಗಿದೆ ಅಂದ್ರೆ ಮುಂದುವರಿಸುತ್ತೇವೆ. ವಾಜಪೇಯಿ ಅವರ ಕಾಲದಲ್ಲೂ ಕಾಂಗ್ರೆಸ್ ಇದೇ ರೀತಿ ಹೇಳಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ತೆಗೆಯುತ್ತಾರೆ ಎಂದಿದ್ದರು. ಈಗ ದಲಿತರು ಕಾಂಗ್ರೆಸ್‌ನವರನ್ನು ನಂಬುತ್ತಿಲ್ಲ. ಬಡವರಿಗೆ ಅನುಕೂಲ ಆಗುವ ಯೋಜನೆ ಮುಂದುವರಿಸುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ವಿಚಾರ ಕೆಲವರಿಗೆ ಅಸಮಾಧಾನ ಇರಬಹುದು. ಆದರೆ, ಮನೆಯ ಹಿರಿಯರು ಏನು ಹೇಳ್ತಾರೋ ಅದನ್ನು ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.- - - (-ಫೋಟೋ: ಕೆ.ಎಸ್.ಈಶ್ವರಪ್ಪ)