ರಾಣಿಬೆನ್ನೂರಿನ ಜವಳಿ ಪಾರ್ಕ್, ಬಜೆಟ್ ಘೋಷಣೆಗೆ ಸೀಮಿತವಾಯ್ತೇ?

KannadaprabhaNewsNetwork | Published : Apr 10, 2025 1:19 AM

ಸಾರಾಂಶ

ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ತಾಲೂಕಿಗೆ ಜವಳಿ ಪಾರ್ಕ್ ಎಂದು ಘೋಷಣೆ ಮಾಡಿದ್ದರೂ ಕೆಲವೊಂದು ಕಾರಣಗಳನ್ನು ನೀಡಿ ಪಾರ್ಕ್ ಮಾಡುವುದಿಲ್ಲ ಎನ್ನುತ್ತಿದ್ದಾರೆ ಜಿಲ್ಲಾ ಸಚಿವರು.

ಬಸವರಾಜ ಸರೂರ

ರಾಣಿಬೆನ್ನೂರು: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ತಾಲೂಕಿಗೆ ಘೋಷಣೆ ಮಾಡಿದ್ದ ಜವಳಿ ಪಾರ್ಕ್‌ಗೆ ಅಡೆತಡೆಗಳು ಬಂದಿದ್ದು, ಪಾರ್ಕ್ ಸ್ಥಾಪನೆ ಯಾವಾಗ ಎಂದು ಸ್ಥಳೀಯರು ಪ್ರಶ್ನಿಸುವಂತಾಗಿದೆ.ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯನಗರಿ ಎಂದು ಗುರುತಿಸಿಕೊಂಡಿರುವ ರಾಣಿಬೆನ್ನೂರು ತಾಲೂಕಿನಲ್ಲಿ ಈಗಾಗಲೇ ಹಲವಾರು ಬೀಜೋತ್ಪಾದನೆ ಕಂಪನಿಗಳಿವೆ. ಸಾಕಷ್ಟು ಜನರಿಗೆ ಉದ್ಯೋಗ ದೊರೆತಿವೆ. ಇನ್ನು ಈ ಭಾಗದಲ್ಲಿ ನೇಕಾರರ ಸಂಖ್ಯೆ ಹೆಚ್ಚಿನ ಪ್ರಮಾಣ ಇರುವ ಕಾರಣ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಜವಳಿ ಪಾರ್ಕ್ ಘೋಷಣೆ ಮಾಡಲಾಗಿದೆ. ಆದರೆ ಇಂದಿನ ಸರ್ಕಾರ ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ತಾಲೂಕಿಗೆ ಘೋಷಣೆಯಾಗಿದ್ದ ಜವಳಿ ಪಾರ್ಕ್‌ಅನ್ನು ಸ್ಥಾಪನೆ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.ತುಮ್ಮಿನಕಟ್ಟಿ ಹತ್ತಿರದಲ್ಲಿ ಜಾಗ: ಈ ಹಿಂದೆ ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಜವಳಿ ಪಾರ್ಕ್ ಘೋಷಣೆ ಮಾಡಿ ತಾಲೂಕಿನ ತುಮ್ಮಿನಕಟ್ಟಿ ಹತ್ತಿರದ ಬಡಸಂಗಾಪುರ ಗ್ರಾಮದ ಹತ್ತಿರದಲ್ಲಿ ಜಾಗ ಗುರುತಿಸಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿತ್ತು. ಅಷ್ಟರಲ್ಲಿಯೇ ಚುನಾವಣೆ ಘೋಷನೆಯಾದ ಹಿನ್ನೆಲೆ ಅದನ್ನು ಕೈಬಿಡಲಾಯಿತು.ಮತ್ತೆ ಈಗಿನ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ತಾಲೂಕಿಗೆ ಜವಳಿ ಪಾರ್ಕ್ ಎಂದು ಘೋಷಣೆ ಮಾಡಿದ್ದರೂ ಕೆಲವೊಂದು ಕಾರಣಗಳನ್ನು ನೀಡಿ ಪಾರ್ಕ್ ಮಾಡುವುದಿಲ್ಲ ಎನ್ನುತ್ತಿದ್ದಾರೆ ಜಿಲ್ಲಾ ಸಚಿವರು.

ನಿರ್ವಹಣೆ ಕಷ್ಟಕರ: ಜವಳಿ ಪಾರ್ಕ್‌ಅನ್ನು ಪಿಪಿಪಿ(ಖಾಸಗಿ, ಸರ್ಕಾರಿ ಸಹಭಾಗಿತ್ವ) ಮಾದರಿಯಲ್ಲಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಜವಳಿ ಪಾರ್ಕ್ ಸ್ಥಾಪನೆಗೆ ಹೂಡಿಕೆ ಮಾಡಲು ಖಾಸಗಿಯವರು ಯಾರೂ ಮುಂದೇ ಬಾರದಿರುವ ಹಿನ್ನೆಲೆ ಹಾಗೂ ಅದನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿರುವುದರಿಂದ ಸರ್ಕಾರ ಅದನ್ನು ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸಭೆ ಕರೆದಿಲ್ಲ: ಜವಳಿ ಪಾರ್ಕ್ ಸ್ಥಾಪನೆ ಮಾಡುವ ಕುರಿತು ಖಾಸಗಿಯವರು ಮುಂದೆ ಬರುತ್ತಿಲ್ಲ ಎಂದು ಸಚಿವರು ಕಾರಣ ನೀಡುತ್ತಿದ್ದಾರೆ. ಆದರೆ ಸರ್ಕಾರ ಇಲ್ಲಿವರೆಗೂ ಯಾವುದೇ ಉದ್ದಿಮೆದಾರರ ಸಭೆ ಕರೆದಿಲ್ಲ. ಪಾರ್ಕ್ ಸ್ಥಾಪನೆಗೆ ಉದ್ದಿಮೆದಾರರಿಗೆ ಆಹ್ವಾನ ನೀಡಿದರೆ ಯಾರಾದರೂ ಬರುತ್ತಾರೆ ಎಂದು ರಾಣಿಬೆನ್ನೂರಿನ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ತಿಳಿಸಿದರು.

ಸರಿಯಲ್ಲ: ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಜವಳಿ ಪಾರ್ಕ್ ಮಾಡಲು ಘೋಷಣೆ ಮಾಡಲಾಗಿತ್ತು. ಇದರಿಂದ ಸ್ಥಳೀಯ ನೇಕಾರರಿಗೆ ಅನುಕೂಲವಾಗುವ ಜತೆಗೆ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತಿತ್ತು. ನಾವು ಪಾರ್ಕ್ ಸ್ಥಾಪನೆ ಮಾಡುವ ಹಂತದಲ್ಲಿ ಇರುವಾಗ ಚುನಾವಣೆ ಘೋಷಣೆಯಾಗಿದ್ದರಿಂದ ಅದನ್ನು ಅರ್ಧಕ್ಕೆ ಬಿಡಲಾಯಿತು. ಈ ಸರ್ಕಾರ ತಮ್ಮ ಬಜೆಟ್‌ನಲ್ಲಿ ಘೋಷಿಸಿ, ಈಗ ಮಾಡಲು ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.

Share this article