₹400 ಕೋಟಿ ದರೋಡೆಗೆ ರಾಜಕೀಯ ನಂಟು?

KannadaprabhaNewsNetwork |  
Published : Jan 27, 2026, 04:15 AM IST
ಜಮಖಂಡಿ ತಾಲೂಕಿನ ಮುತ್ತೂರು ಮಹಾಲಕ್ಷ್ಮೀಯನ್ನು ತ್ರಿವರ್ಣ ಧ್ವಜದ ಅಲಂಕಾರದಲ್ಲಿ ಸೋಮುವಾರ ಪೂಜೆ ಸಲ್ಲಿಸಲಾಗಿತ್ತು. | Kannada Prabha

ಸಾರಾಂಶ

ದೇಶವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ–ಗೋವಾ ಗಡಿ ಭಾಗದ ಚೋರ್ಲಾ ಘಾಟ್‌ನಲ್ಲಿ ನಡೆದ ₹400 ಕೋಟಿ ದರೋಡೆ ಪ್ರಕರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆಯುತ್ತಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ–ಗೋವಾ ಗಡಿ ಭಾಗದ ಚೋರ್ಲಾ ಘಾಟ್‌ನಲ್ಲಿ ನಡೆದ ₹400 ಕೋಟಿ ದರೋಡೆ ಪ್ರಕರಣ ದಿನಕ್ಕೊಂದು ಸ್ಫೋಟಕ ತಿರುವು ಪಡೆಯುತ್ತಿದೆ. ಮಹಾರಾಷ್ಟ್ರ ಎಸ್‌ಐಟಿ ತನಿಖೆ ಮುಂದುವರಿದಿರುವ ನಡುವೆ, ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ ಸಾಳ್ವೆ ಹಾಗೂ ಜಯೇಶ ಕದಂ ನಡುವಿನ ಮರಾಠಿ ಭಾಷೆಯ ಆಡಿಯೋ ಸಂಭಾಷಣೆ ವೈರಲ್ ಆಗಿದ್ದು, ಪ್ರಕರಣಕ್ಕೆ ರಾಜಕೀಯ ನಂಟಿನ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಬೃಹತ್ ಮೊತ್ತ ಕಾಂಗ್ರೆಸ್‌ಗೇ ಸೇರಿದ್ದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು, ಈ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ಸಿಗರೂ ಭಾಗವಹಿಸಿರಬಹುದು. ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದರ ನಡುವೆ ಪ್ರಕರಣದ ಹಿಂದೆ ಗುಜರಾತ್‌ನ ಪ್ರಭಾವಿ ರಾಜಕಾರಣಿಯೊಬ್ಬರ ಹೆಸರು ತಳಕುಹಾಕಿಕೊಂಡಿದೆ ಎಂಬುದು ತನಿಖಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಆ ರಾಜಕಾರಣಿ ಯಾರು ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿದೆ.

ಆರಂಭದಲ್ಲಿ ಸಾಮಾನ್ಯ ಲೂಟಿ ಪ್ರಕರಣವೆಂದು ದಾಖಲಾಗಿದ್ದ ಈ ಘಟನೆ, ಇದೀಗ ತನ್ನ ಗಂಭೀರತೆಯನ್ನು ಮೀರಿ ದೇಶವ್ಯಾಪಿ ರಾಜಕೀಯ ಮತ್ತು ಆರ್ಥಿಕ ಸಂಚಲನಕ್ಕೂ ಕಾರಣವಾಗಿದೆ. ಮಹಾರಾಷ್ಟ್ರ ಎಸ್‌ಐಟಿ ತನಿಖೆ ಆಳಕ್ಕೆ ಇಳಿದಂತೆ, ಈ ದರೋಡೆ ಮನಿ ಲಾಂಡರಿಂಗ್, ರಾಜಕೀಯ ಸಂಪರ್ಕ ಹಾಗೂ ನಿಷೇಧಿತ ನೋಟುಗಳ ಅಕ್ರಮ ಸಾಗಣೆ ಜಾಲದತ್ತ ದಾರಿ ತೋರಿಸುತ್ತಿದೆ. ತನಿಖಾ ಮೂಲಗಳ ಪ್ರಕಾರ, ದರೋಡೆಗೊಳಗಾದ ಹಣ ಕೇವಲ ಸಾಗಣೆಯಲ್ಲಿದ್ದ ಮೊತ್ತವಲ್ಲ. ಇದು ಪೂರ್ವನಿಯೋಜಿತ ಹಣಕಾಸು ವ್ಯವಹಾರದ ಭಾಗವಾಗಿತ್ತು ಎಂಬ ಶಂಕೆ ಬಲವಾಗಿದೆ. ಗೋವಾದಿಂದ ನಿಷೇಧಿತ ₹2000 ಮುಖಬೆಲೆಯ ನೋಟುಗಳ ಕಂತೆಗಳನ್ನು ಕಂಟೇನರ್‌ಗಳ ಮೂಲಕ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿಯು ಪ್ರಕರಣದ ಅಸಲಿ ಮುಖವನ್ನು ಬಹಿರಂಗಪಡಿಸಿದೆ.

₹400 ಕೋಟಿ ಮೊತ್ತವು ಯಾವುದೇ ಸಾಮಾನ್ಯ ವ್ಯವಹಾರವಲ್ಲ. ಈ ಹಣವನ್ನು ಯಾರು ಸಂಗ್ರಹಿಸಿದರು? ಯಾರು ಎಣಿಸಿದರು? ಯಾವ ಉದ್ದೇಶಕ್ಕಾಗಿ ರಾಜ್ಯಗಳ ಗಡಿಗಳನ್ನು ದಾಟಿಸಿ ಸಾಗಿಸಲಾಗುತ್ತಿತ್ತು ಎಂಬ ಹಲವಾರು ಪ್ರಶ್ನೆಗಳು ತನಿಖಾಧಿಕಾರಿಗಳ ಮುಂದಿವೆ.ಪ್ರಕರಣ ಹಿಂದೆ ಗುಜರಾತ ರಾಜಕಾರಣಿ?:

ಎಸ್‌ಐಟಿ ತನಿಖೆಯಲ್ಲಿ ಹೊರಬಂದ ಅತ್ಯಂತ ಸ್ಫೋಟಕ ಅಂಶವೆಂದರೆ, ಈ ಹಣ ಗುಜರಾತ್‌ನ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿರಬಹುದೆಂಬ ಅನುಮಾನ. ಹೆಸರು ಅಧಿಕೃತವಾಗಿ ಬಹಿರಂಗವಾಗದಿದ್ದರೂ, ರಾಜಕೀಯ ಶಕ್ತಿಯ ನೆರಳು ಈ ವ್ಯವಹಾರದ ಮೇಲೆ ಬಿದ್ದಿದೆ ಎಂಬುದು ತನಿಖಾ ವಲಯದಲ್ಲಿ ಚರ್ಚೆಯಾಗುತ್ತಿದೆ.ರಾಜಕೀಯ ನಾಯಕತ್ವ ಮತ್ತು ಕಪ್ಪು ಹಣದ ನಡುವಿನ ನಂಟು ಹೊಸದಲ್ಲ. ಆದರೆ ಇಷ್ಟು ದೊಡ್ಡ ಮೊತ್ತ, ನಿಷೇಧಿತ ನೋಟುಗಳಲ್ಲಿ, ರಾಜ್ಯಗಳ ಗಡಿಗಳನ್ನು ದಾಟಿ ಸಾಗಿರುವುದು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಕೂಡ ಎದ್ದು ಕಾಣುತ್ತಿದೆ ಎಂಬ ಬಲವಾದ ಆರೋಪ ಕೂಡ ಕೇಳಿಬರುತ್ತಿದೆ.ಆಡಿಯೋ ವೈರಲ್‌:

ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ ಸಾಳ್ವೆ ಅಲಿಯಾಸ್ ಶೇಟ್ ಈ ಹಣಕಾಸು ವ್ಯವಹಾರದ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾನೆ ಎಂಬ ಶಂಕೆಯೂ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿಶೋರ ಸಾಳ್ವೆ ಮತ್ತು ಜಯೇಶ ಕದಂ ನಡುವಿನ ಆಡಿಯೋ ಸಂಭಾಷಣೆ ವೈರಲ್ ಆಗಿದ್ದು, ತನಿಖೆಗೆ ಮಹತ್ವದ ಸುಳಿವು ನೀಡಿದೆ ಎನ್ನಲಾಗುತ್ತಿದೆ. ಆದರೆ ವೈರಲ್ ಆಡಿಯೋಗಳು ನ್ಯಾಯಾಂಗ ಸಾಕ್ಷ್ಯವಾಗಿ ಪರಿಗಣಿಸಲ್ಪಡುತ್ತವೆಯೇ? ಅಥವಾ ರಾಜಕೀಯ ಒತ್ತಡದ ನಡುವೆ ತನಿಖೆಯ ಅಂಚಿಗೆ ತಳ್ಳಲ್ಪಡುವವೆಯೇ? ಎಂಬ ಪ್ರಶ್ನೆ ಕೂಡ ಎದುರಾಗಿದೆ. ಅಲ್ಲದೆ, ಹಣ ಸಾಗಣೆ ನಡೆದ ಚೋರ್ಲಾ ಘಾಟ್ ಮಾರ್ಗದ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ, ಸಿಬ್ಬಂದಿ ವಿವರಗಳ ಅಪೂರ್ಣತೆ ಹಾಗೂ ದಾಖಲೆಗಳ ಅಸ್ಪಷ್ಟತೆ ಪ್ರಕರಣದ ಮೇಲೆ ಅನುಮಾನಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಈ ಪ್ರಕರಣ ಸಂಬಂಧ ಮಹಾರಾಷ್ಟ್ರ ಎಸ್‌ಐಟಿ ತನಿಖೆ ಇನ್ನೂ ಮುಂದುವರಿದಿದ್ದು, ಹಣದ ಮೂಲ, ಅಂತಿಮ ಗುರಿ, ರಾಜಕೀಯ ಆಶ್ರಯ ಹಾಗೂ ಆಡಳಿತಾತ್ಮಕ ಹೊಣೆಗಾರಿಕೆ ಈ ಎಲ್ಲಾ ಅಂಶಗಳನ್ನು ಸ್ಪಷ್ಟವಾಗಿ ಹೊರತರುವುದು ತನಿಖಾಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.ಮಹಾದ ಘೋಟಿ ಠಾಣೆಗೆ ನೀಡಿದ ಎಫ್‌ಐಆರ್‌ನಲ್ಲಿ ಏನಿದೆ?:

ಚೋರ್ಲಾ ಘಾಟ್ ಬಳಿ ನಡೆದಿರುವ ₹400 ಕೋಟಿ ನಗದು ಸಾಗಾಟ ಹಾಗೂ ಕಂಟೇನರ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ, ಜೀವ ಬೆದರಿಕೆ ಮತ್ತು ಹಣದ ದಬ್ಬಾಳಿಕೆ ಆರೋಪಗಳಡಿ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಯಲ್ಲಿ ಐ‍ವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ರಾಯಗಡದ ಜಯೇಶ ಕದಂ, ಕಲ್ಯಾಣದ ವಿಶಾಲ ನಾಯ್ಡು, ಟಿಟವಾಳಾದ ಸುನೀನ ಧುಮಾಳ, ಗುಜರಾತಿನ ವಿರಾಟ ಗಾಂಧಿ ಮತ್ತು ಮುಂಬೈನ ಜನಾರ್ಧನ ಧಾಯಗುಡೆ ವಿರುದ್ಧ ಸಂದೀಪ ದತ್ತಾ ಪಾಟೀಲ್‌ ಎಂಬುವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಗಳು ದೂರುದಾರರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲ್ಲೆ ನಡೆಸಿ, ಕುಟುಂಬದವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ದರೋಡೆ ಪ್ರಕರಣದ ಬಗ್ಗೆ ಮಾಹಿತಿ ಇದೆ ಎಂದು ಆರೋಪಿಸಿ ₹100 ಕೋಟಿ ಹಣದ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ವಿಡಿಯೋ ಕಾಲ್ ಮೂಲಕ ಭಾರಿ ಮೊತ್ತದ ಹಣದ ಬೇಡಿಕೆ ಇಟ್ಟು, ಚೋರ್ಲಾ ಘಾಟ್ ಬಳಿ ನಡೆದ ₹400 ಕೋಟಿ ನಗದು ದರೋಡೆಗೆ ತಮ್ಮ ಸಂಪರ್ಕವಿದೆ ಎಂಬುದನ್ನು ಸೂಚಿಸಿರುವುದಾಗಿ ದೂರುದಾರ ತಿಳಿಸಿದ್ದಾರೆ. ಜೀವಭಯದ ಕಾರಣದಿಂದ ತಕ್ಷಣ ದೂರು ನೀಡಲು ಸಾಧ್ಯವಾಗಿರಲಿಲ್ಲ ಎಂದು ಸಂದೀಪ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಆಯುಧ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌)ಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಸಂಘಟಿತ ಅಪರಾಧ, ಅಪಹರಣ ಮತ್ತು ಹಣದ ದಬ್ಬಾಳಿಕೆ ಆರೋಪಗಳು ದಾಖಲಾಗಿವೆ. ಘೋಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚೋರ್ಲಾ ಘಾಟ್‌ನಲ್ಲಿ ನಾಪತ್ತೆಯಾಗಿರುವ ಕಂಟೇನರ್‌ಗಳಲ್ಲಿದ್ದ ₹ 400 ಕೋಟಿ ಕಾಂಗ್ರೆಸ್‌ಗೆ ಸೇರಿದ ಹಣ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡವ್ನೀಸ್‌ ಮಾಡಿರುವ ಆರೋಪ ನಿರಾಧಾರ. ಅಷ್ಟು ದೊಡ್ಡ ಮೊತ್ತದ ಹಣವನ್ನು ಯಾರು ಎಣಿಸಿದರು? ಹಣದ ಮೂಲವೇನು? ಈ ಘಟನೆ ನಿಖರವಾಗಿ ಎಲ್ಲಿ ನಡೆದಿದೆ, ಅಲ್ಲಿ ವಾಸ್ತವವಾಗಿ ಏನಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ.

- ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ