ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ರಾಜಕೀಯ?

KannadaprabhaNewsNetwork |  
Published : Jan 16, 2026, 12:45 AM IST
ಅಪಘಾತದಲ್ಲಿ ಸಾವಿಗೀಡಾದ ಪಾಂಡುನಾಯ್ಕ ಪತ್ನಿ ಗಾಯತ್ರಿಬಾಯಿ | Kannada Prabha

ಸಾರಾಂಶ

ಜ. 10ರಂದು ಬಾಗಲಕೋಟೆಯ ಜಿಲ್ಲೆಯ ಕಮತಗಿ ಬಳಿ ನಡೆದ ಅಪಘಾತದಲ್ಲಿ ಆನೇಕಲ್ಲ ತಾಂಡಾದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಈ ನಡುವೆ ಕುಟುಂಬದವರು ಪರಿಹಾರಕ್ಕೆ ಕಾಯುತ್ತಿದ್ದಾರೆ. ಆದರೆ ಗುರುವಾರ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡುವ ಕಾರ್ಯಕ್ರಮ ದಿಢೀರ್ ರದ್ದಾಗಿದೆ.

ಬಿ. ಲಕ್ಷ್ಮೀಕಾಂತಸಾ

ಹಗರಿಬೊಮ್ಮನಹಳ್ಳಿ: ಆ ಪುಟ್ಟ ಹೆಂಚಿನ ಮನೆಯ ಮುಂದೆ ಮಹಿಳೆ ತನ್ನೆರಡು ಮಕ್ಕಳ ಜತೆ ನಿಂತಿದ್ದರು. ಆಕೆಯ ಮುಖದಲ್ಲಿ ದುಃಖ, ನೋವು, ಚಿಂತೆಗಳು ದಟ್ಟವಾಗಿ ತುಂಬಿದ್ದವು. ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯತ್ರಿಬಾಯಿ ಪತಿ ಪಾಂಡು ನಾಯ್ಕ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಟ್ರ್ಯಾಕ್ಟರ್‌ ಚಲಾಯಿಸುತ್ತಿದ್ದ ಪಾಂಡುನಾಯ್ಕ ಸಹೋದರ ಶ್ರೀಕಾಂತ ನಾಯ್ಕ ಕುರ್ಚಿಯಲ್ಲಿ ಕುಸಿದು ಕುಳಿತಿದ್ದಾರೆ. ಅದೇ ಅಪಘಾತದಲ್ಲಿ ಅವರು ಪತ್ನಿ ರುಕ್ಮಿಣಿಬಾಯಿ, ಸಹೋದರಿ ಅನುಷಾಬಾಯಿ ಜತೆಗೆರಡು ಮಕ್ಕಳನ್ನು ಕಳೆದುಕೊಂಡಿದ್ದಾರೆ.

ವಕ್ಫ್‌ ಹಾಗೂ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಜತೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಸಿರಾಜ್ ಶೇಖ್ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಗ್ರಾಮಕ್ಕೆ ''''ಕನ್ನಡಪ್ರಭ'''' ಗುರುವಾರ ತೆರಳಿದಾಗ ಕಂಡು ಬಂದ ದೃಶ್ಯಗಳಿವು.

ಆದರೆ ನೆರವಿನ ನಿರೀಕ್ಷೆಯಲ್ಲಿದ್ದ ಈ ಕುಟುಂಬಕ್ಕೆ ನಿರಾಸೆ ಕಾದಿತ್ತು. ಸಚಿವ ಜಮೀರ್ ಅಹಮದ್‌ ಖಾನ್ ಭೇಟಿ ದಿಢೀರ್‌ ರದ್ದಾಯಿತು.

ಅಪಘಾತದ ಆಘಾತ: ಇದ್ದ ಒಂದು ಎಕರೆ ಬಂಜರು ಭೂಮಿ ಮತ್ತು ಸ್ಥಳೀಯವಾಗಿ ಸಿಗುವ ಅರೆಗಾಸಿನ ಕೂಲಿ ಬಡತನದ ಬೇಗೆ ತಣಿಸದಾದಾಗ ಕೂಲಿ ಅರಸಿ ಊರು ತೊರೆದಿದ್ದ ಶ್ರೀಕಾಂತ್ ನಾಯ್ಕ ಕುಟುಂಬದ ಐವರು ಕಬ್ಬು ಕಟಾವು ಮುಗಿಸಿ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ವಾಪಸ್‌ ಬರುವಾಗ ದಾರಿಯಲ್ಲಿಯೇ ಜ. 10ರಂದು ನಡೆದ ಅಪಘಾತದಲ್ಲಿ ಅಸು ನೀಗಿದರು.

ಬಾಗಲಕೋಟೆಯ ಜಿಲ್ಲೆಯ ಕಮತಗಿ ಬಳಿ ಬರುತ್ತಿದ್ದಂತೆಯೇ ಟ್ರ್ಯಾಕ್ಟರ್‌ ಮುಂದಿನ ಬಂಪರ್ ತುಂಡಾಗಿ ನಡೆದ ದುರ್ಘಟನೆಯಲ್ಲಿ ತುಂಬು ಗರ್ಭಿಣಿ ರುಕ್ಮಿಣಿಬಾಯಿ (೩೬), ಮಗಳು ಶಿವಾನಿಬಾಯಿ (೫), ಪಾಂಡುನಾಯ್ಕ(೩೦), ರೋಷನ್‌ನಾಯ್ಕ (೫೦) ಸ್ಥಳದಲ್ಲಿಯೇ ಸಾವಿಗೀಡಾದರೆ ತೀವ್ರವಾಗಿ ಗಾಯಗೊಂಡಿದ್ದ ಅನುಷಾಬಾಯಿ (೩೦) ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮೊದಲು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹಗರಿಬೊಮ್ಮನಹಳ್ಳಿ ತಾಲೂಕು ಕ್ಷೇತ್ರ ಪುನರ್ ವಿಂಗಡಣೆಯ ಆನಂತರ ಹಗರಿಬೊಮ್ಮನಹಳ್ಳಿ ಸ್ವತಂತ್ರ ವಿಧಾನಸಭೆಯಾಗಿ ಮಾರ್ಪಟ್ಟಿತು. ಎರಡು ಬಾರಿ ಬಂಜಾರ ಸಮುದಾಯದವರೇ ಆದ ಭೀಮಾನಾಯ್ಕ ಹಾಗೂ ಎರಡು ಬಾರಿ ನೇಮಿರಾಜ ನಾಯ್ಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೂ ಕೂಲಿ ಅರಸಿ ವಲಸೆ ಹೋಗುವ ಬಂಜಾರ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪಗಳಲ್ಲಿ ಬದಲಾವಣೆ ಆಗಿಲ್ಲ.

ಹಾಲಿ ಶಾಸಕರಾದ ನೇಮಿರಾಜನಾಯ್ಕ ತಾಂಡಾಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಧನಸಹಾಯ ನೀಡಿದ್ದಾರೆ. ಆದರೆ ಕುಟುಂಬಕ್ಕೆ ವಸತಿ, ಇತರ ಸೌಲಭ್ಯ ಕುರಿತಂತೆ ಭರವಸೆ ನೀಡಿಲ್ಲ. ಮಾಜಿ ಶಾಸಕ ಭೀಮಾನಾಯ್ಕ ತಾಂಡಾಕ್ಕೆ ಭೇಟಿ ನೀಡಿಲ್ಲ.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಗುರುವಾರ ತಾಂಡಾಗೆ ತೆರಳಿ ಪರಿಹಾರ ಒದಗಿಸುವ ಕಾರ್ಯಕ್ರಮ ದಿಢೀರ್ ರದ್ದಾಗಿದೆ. ಮೂಲಗಳ ಪ್ರಕಾರ ಮಾಜಿ ಕಾಂಗ್ರೆಸ್ ಶಾಸಕರ ಗುಂಪು, ಜಿಲ್ಲಾ ಉಸ್ತುವಾರಿ ಸಚಿವರಿಂದ ದಿಢೀರ್ ಪರಿಹಾರ ವಿತರಿಸುವ ಕಾರ್ಯಕ್ರಮ ಆಯೋಜಿಸಿರುವ ಕುರಿತು ಅಸಮಾಧಾನಗೊಂಡಿದೆ. ಅಲ್ಲದೇ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪರಿಹಾರ ವಿತರಿಸಲು ಹೊರಟಿರುವುದಕ್ಕೆ ಆಕ್ಷೇಪಿಸಿದೆ. ಹೀಗಾಗಿ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಶ್ರೀಕಾಂತ್ ನಾಯ್ಕ ಕುಟುಂಬದ ರೋದನ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ ಎಂದು ತಾಂಡಾದ ಬಂಜಾರ ಸಮುದಾಯ ದೂರುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನರೇಗಾ ಯೋಜನೆ ಹೆಸರು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧಿ ಹತ್ಯೆ
ಶ್ರೀರಂಗಪಟ್ಟಣ: ಕೋಟ್ಪಾ ಕಾಯ್ದೆ ನಿಯಮದಡಿ ವಿಶೇಷ ಕಾರ್ಯಾಚರಣೆ