ಆಯುಷ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ?

KannadaprabhaNewsNetwork |  
Published : Dec 19, 2025, 02:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

​ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಹಾಗೂ ದೆಹಲಿ ಮೂಲದ ರೋನ್ಪಾಲ್ ಬಯೊಟೆಕ್ ಕಂಪನಿಯ ಪ್ರತಿನಿಧಿ ರಾಜೀವ್ ನಡುವೆ ನಡೆದಿದೆ ಎನ್ನಲಾದ 24 ನಿಮಿಷಗಳ ಸುದೀರ್ಘ ಸಂಭಾಷಣೆ ಈಗ ಇಡೀ ಇಲಾಖೆಯನ್ನು ವ್ಯವಹಾರವನ್ನು ಬೆತ್ತಲೆ ಮಾಡಿದೆ.

ವಿಶೇಷ ವರದಿ

​ಗದಗ: ಜನರ ಆರೋಗ್ಯ ಕಾಪಾಡಬೇಕಾದ ಇಲಾಖೆಯಲ್ಲೇ ಈಗ ಕಮಿಷನ್ ಕ್ಯಾನ್ಸರ್ ವ್ಯಾಪಿಸಿಕೊಂಡಿದೆ. ಇದಕ್ಕೆ ಉತ್ತಮ ಸಾಕ್ಷಿ ಎನ್ನುವಂತೆ ಜಿಲ್ಲೆಯ ಆಯುಷ್‌ ಇಲಾಖೆಯ ಅಧಿಕಾರಿಯೊಬ್ಬರು ಗುತ್ತಿಗೆದಾರರೊಂದಿಗೆ ಕಮಿಷನ್ ವಿಷಯವಾಗಿ ಮಾತನಾಡಿದ ಆಡಿಯೋ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈಗಾಗಲೇ ಕಮಿಷನ್ ವಿಷಯವಾಗಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಸಾಕಷ್ಟು ಆರೋಪ ಮಾಡುತ್ತಿವೆ. ಆದರೆ ಗದುಗಿನಲ್ಲಿ ಬಹಿರಂಗಗೊಂಡಿರುವ ಆಡಿಯೋದಲ್ಲಿ 15, 20 ಪರ್ಸೆಂಟ್ ಅಲ್ಲ, ಬರೋಬ್ಬರಿ 55 ಪರ್ಸೆಂಟ್‌ವರೆಗೆ ಕಮಿಷನ್ ದಂಧೆ ನಡೆಯುತ್ತಿದೆ ಎನ್ನುವ ಸ್ಫೋಟಕ ಮಾಹಿತಿ ಈಗ ಬಯಲಾಗಿದೆ.

24 ನಿಮಿಷದ ಆಡಿಯೋ ಸಂಭಾಷಣೆ!: ​ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಹಾಗೂ ದೆಹಲಿ ಮೂಲದ ರೋನ್ಪಾಲ್ ಬಯೊಟೆಕ್ ಕಂಪನಿಯ ಪ್ರತಿನಿಧಿ ರಾಜೀವ್ ನಡುವೆ ನಡೆದಿದೆ ಎನ್ನಲಾದ 24 ನಿಮಿಷಗಳ ಸುದೀರ್ಘ ಸಂಭಾಷಣೆ ಈಗ ಇಡೀ ಇಲಾಖೆಯನ್ನು ವ್ಯವಹಾರವನ್ನು ಬೆತ್ತಲೆ ಮಾಡಿದೆ. ಈ ಸಂಭಾಷಣೆಯಲ್ಲಿ ಕಮಿಷನ್ ಪಡೆಯುವ ರೀತಿ, ಲ್ಯಾಬ್ ರಿಪೋರ್ಟ್ ಮ್ಯಾನೇಜ್ ಮಾಡುವ ತಂತ್ರ ಹಾಗೂ ಹಣ ಹಂಚಿಕೆಯ ಮಾತುಗಳು ಎಳೆಎಳೆಯಾಗಿ ಬಿಚ್ಚಿಕೊಂಡಿವೆ.

ಸುಮಾರು ₹90 ಲಕ್ಷ ಮೊತ್ತದ ಔಷಧಿ ಖರೀದಿಯಲ್ಲಿ ದೊಡ್ಡ ಮಟ್ಟದ ಗೋಲ್‌ಮಾಲ್ ನಡೆದಿದೆ. ಟೆಂಡರ್ ಅಪ್ರೂವಲ್ ಆಗಬೇಕಾದರೆ ಕನಿಷ್ಠ 30 ಪರ್ಸೆಂಟ್ ಕಮಿಷನ್ ನೀಡಲೇಬೇಕು ಎಂಬ ಬೇಡಿಕೆ ಇಡಲಾಗಿದೆ. ಸರ್ಕಾರಕ್ಕೆ ಪೂರೈಸುವ ಔಷಧಿಯೇ ಬೇರೆ, ಲ್ಯಾಬ್‌ಗೆ ಟೆಸ್ಟಿಂಗ್ ಕಳುಹಿಸುವ ಸ್ಯಾಂಪಲ್ ಬೇರೆ! ಒಂದು ವೇಳೆ ಕಮಿಷನ್ ಕಡಿಮೆ ಕೊಟ್ಟರೆ, ಲ್ಯಾಬ್ ಟೆಸ್ಟ್‌ನಲ್ಲಿ ಔಷಧಿ ಫೇಲ್ ಮಾಡಿಸುವುದಾಗಿ ಅಧಿಕಾರಿ ಬೆದರಿಕೆ ಹಾಕಿರುವ ಮಾತು ಆಡಿಯೋದಲ್ಲಿದೆ.

ಈ ಆಡಿಯೋದಲ್ಲಿ ಸರ್ಕಾರಕ್ಕೆ ಮೋಸ ಮಾಡಲು ಹೊಸ ದಾರಿ ಕಂಡುಕೊಳ್ಳಲಾಗಿದೆ ಎನ್ನುವುದು ಕೂಡಾ ಸಾಬೀತಾಗುತ್ತಿದ್ದು, ಪೂರೈಕೆಯಾಗುವ ಔಷಧಿಯಲ್ಲಿ ಶೇ. 20ರಷ್ಟು ಕಡಿತಗೊಳಿಸಿ, ದಾಖಲೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದ ಔಷಧಿ ಬಂದಿದೆ ಎಂದು ತೋರಿಸಿ ಬಿಲ್ ಪಾಸ್ ಮಾಡುವ ಡೀಲಿಂಗ್ ಕೂಡಾ ಬಹಿರಂಗವಾಗಿದೆ. ಈ ಭ್ರಷ್ಟಾಚಾರ ದಂಧೆಯಲ್ಲಿ ಕೇವಲ ಜಿಲ್ಲಾ ಮಟ್ಟದ ಅಧಿಕಾರಿ ಮಾತ್ರವಲ್ಲದೆ, ಜಿಪಂ ಸಿಇಒ ಕಚೇರಿಯಿಂದ ಹಿಡಿದು ಸೂಪರಿಂಟೆಂಡೆಂಟ್‌ ವರೆಗೂ ಎಲ್ಲರಿಗೂ ಪಾಲಿದೆ ಎಂಬ ಆತಂಕಕಾರಿ ಸಂಗತಿಯನ್ನು ಸಂಭಾಷಣೆಯಲ್ಲಿ ಉಲ್ಲೇಖಿಸಲಾಗಿದೆ.

​ರಾಜ್ಯಾದ್ಯಂತ ಜಾಲ?: ಆಡಿಯೋದಲ್ಲಿ ​ವ್ಯಾಪಾರಿಯ ಅಳಲಿನ ಪ್ರಕಾರ, ಈ ಕಮಿಷನ್ ದಂಧೆ ಕೇವಲ ಗದಗಕ್ಕೆ ಸೀಮಿತವಾಗಿಲ್ಲ. ಉತ್ತರ ಕನ್ನಡ, ಹಾಸನ, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಇದೇ ರೀತಿ ಲೂಟಿ ನಡೆಯುತ್ತಿದೆ. ಬಳ್ಳಾರಿ ಮತ್ತು ಹಾಸನದಲ್ಲಿ ಕೇವಲ ₹1 ಲಕ್ಷ ಬೆಲೆಬಾಳುವ ಪಂಚಕರ್ಮ ಟೇಬಲ್‌ಗಳನ್ನು ₹4.80 ಲಕ್ಷಕ್ಕೆ ಖರೀದಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ಒಟ್ಟು ಕಮಿಷನ್ ಪ್ರಮಾಣ ಟ್ಯಾಕ್ಸ್ ಸೇರಿ ಶೇ. 55ಕ್ಕೆ ತಲುಪಿದರೆ, ಜನರಿಗೆ ಸಿಗುವ ಔಷಧಿಯ ಗುಣಮಟ್ಟ ಎಂತಿರಬಹುದು? ಕೇವಲ ಶೇ. 45ರಷ್ಟು ಹಣದಲ್ಲಿ ತಯಾರಾದ ಔಷಧಿ ರೋಗ ವಾಸಿ ಮಾಡುತ್ತದೆಯೇ ಅಥವಾ ಹೊಸ ರೋಗ ತರುತ್ತದೆಯೇ ಎಂಬ ಪ್ರಶ್ನೆ ಎದುರಾಗಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆಯೇ ಎನ್ನುವ ಆತಂಕ ಎದುರಾಗಿದೆ.

ತನಿಖೆಯಾಗಲಿ: ಈ ಆಡಿಯೋ ಸಂಭಾಷಣೆಯ ಆಧಾರದ ಮೇಲೆ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಕಂಪನಿಗಳ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೆ, ಆಯುಷ್ ಇಲಾಖೆಯ ಮೇಲಿನ ವಿಶ್ವಾಸ ಸಂಪೂರ್ಣವಾಗಿ ಕುಸಿಯುವುದರಲ್ಲಿ ಸಂಶಯವಿಲ್ಲ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು