ಮಹದಾಯಿಗೆ ಸಹಕರಿಸಿ, ಗೋವಾ ಸಚಿವರಿಗೆ ಈಶ್ವರ್‌ ಖಂಡ್ರೆ ಮನವಿ

KannadaprabhaNewsNetwork |  
Published : Sep 21, 2025, 02:00 AM IST
Eshwar Khandre 3 | Kannada Prabha

ಸಾರಾಂಶ

ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಕಳಸಾ ಬಂಡೂರಿ (ಮಹದಾಯಿ) ಯೋಜನೆ ಅನುಷ್ಠಾನಕ್ಕೆ ಸಹಕರಿಸುವಂತೆ ಗೋವಾ ಅರಣ್ಯ ಸಚಿವ ವಿಶ್ವಜಿತ್‌ ರಾಣೆ ಅವರಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮನವಿ ಮಾಡಿದ್ದಾರೆ.

 ಬೆಂಗಳೂರು :  ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಕಳಸಾ ಬಂಡೂರಿ (ಮಹದಾಯಿ) ಯೋಜನೆ ಅನುಷ್ಠಾನಕ್ಕೆ ಸಹಕರಿಸುವಂತೆ ಗೋವಾ ಅರಣ್ಯ ಸಚಿವ ವಿಶ್ವಜಿತ್‌ ರಾಣೆ ಅವರಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮನವಿ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಗೋವಾ ಅರಣ್ಯ ಸಚಿವರ ನಿಯೋಗ ಗೋವಾದಲ್ಲಿನ ಕಾಡಾನೆ ಸಮಸ್ಯೆ ನಿವಾರಣೆಗೆ ಕರ್ನಾಟಕದಿಂದ ಕುಮ್ಕಿ ಆನೆಗಳನ್ನು ನೀಡುವಂತೆ ಈಶ್ವರ್‌ ಖಂಡ್ರೆ ಅವರಲ್ಲಿ ಮನವಿ ಮಾಡಿದರು. ಜತೆಗೆ ಎರಡೂ ರಾಜ್ಯಗಳ ಸಂಬಂಧದ ಕುರಿತು ಮಾತುಕತೆ ನಡೆಸಿದರು. ಈ ವೇಳೆ ಈಶ್ವರ್‌ ಖಂಡ್ರೆ, ಕಳಸಾ ಬಂಡೂರಿ ಯೋಜನೆಯ ಮಹತ್ವ ತಿಳಿಸಿ, ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಚಾರದಲ್ಲಿ ನೆರೆ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು. ಕುಡಿಯುವ ನೀರಿನ ಯೋಜನೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ವಿಶ್ವಜಿತ್‌ ರಾಣೆ, ಗೋವಾ ಪುಟ್ಟ ರಾಜ್ಯ. ನಾವು ನೆರೆಯ ರಾಜ್ಯದೊಂದಿಗೆ ಸಹಬಾಳ್ವೆಯಿಂದಿದ್ದೇವೆ. ಮಹದಾಯಿ ವಿಚಾರದ ಕುರಿತು ಗೋವಾ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್‌ ಖಂಡ್ರೆ, ಉತ್ತರ ಕರ್ನಾಟಕ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಮಹದಾಯಿ ಯೋಜನೆ ಧೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದೆ. ಅದರ ಜಾರಿಗೆ ಗೋವಾ ಸರ್ಕಾರ ಸಹಕಾರ ನೀಡಬೇಕು. ಅಭಿವೃದ್ಧಿ ಮತ್ತು ಜನರ ಸಮಸ್ಯೆ ನಿವಾರಣೆಯಲ್ಲಿ ನೆರೆ ರಾಜ್ಯಗಳು ಪರಸ್ಪರ ನೆರವು ನೀಡಬೇಕು ಎಂದು ಹೇಳಿದರು.

ಗೋವಾದಲ್ಲಿ ಶೇ. 60ರಷ್ಟು ಅರಣ್ಯ ಪ್ರದೇಶವಿದ್ದರೂ ಆನೆ ಸಮಸ್ಯೆ ಇರಲಿಲ್ಲ. ಈಗ ಓಂಕಾರ ಎಂಬ ಪುಂಡಾನೆ ಉಪಟಳ ನೀಡುತ್ತಿದ್ದು, ಬೆಳೆ ಹಾನಿಯಾಗುತ್ತಿದೆ. ಹೀಗಾಗಿ ಕಾಡಾನೆ ಸೆರೆಗೆ ತರಬೇತಿ ಪಡೆದ ಕುಮ್ಕಿ ಆನೆಗಳು ಮತ್ತು ತಜ್ಞರನ್ನು ಕಳುಹಿಸುವಂತೆ ಗೋವಾ ಸರ್ಕಾರ ಮನವಿ ಮಾಡಿದೆ. ಗೋವಾ ಮನವಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಕುಮ್ಕಿ ಆನೆ ನೀಡುವುದಿಲ್ಲ:

ದಸರಾ ಹಬ್ಬದ ನಂತರ ಗೋವಾ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಗೋವಾ ರಾಜ್ಯಕ್ಕೆ ಪುಂಡಾನೆ ಸೆರೆಗೆ ನಾವು ಸಹಕಾರ ನೀಡುತ್ತೇವೆ. ಆದರೆ, ಕುಮ್ಕಿ ಆನೆಗಳನ್ನು ಗೋವಾಕ್ಕೆ ನೀಡುವುದಿಲ್ಲ ಎಂದು ಈಶ್ವರ್‌ ಖಂಡ್ರೆ ಸ್ಪಷ್ಟಪಡಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಆನೆ ಯೋಜನೆಯ ಎಪಿಸಿಸಿಎಫ್‌ ಮನೋಜ್‌ ರಾಜನ್‌ ಇದ್ದರು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ