ದುಬಾರೆ ನೂತನ ತೂಗು ಸೇತುವೆಗೆ ಈಶ್ವರ ಖಂಡ್ರೆ ಶಂಕುಸ್ಥಾಪನೆ

KannadaprabhaNewsNetwork |  
Published : May 07, 2026, 03:00 AM IST
ಶಂಕುಸ್ಥಾಪನೆ ನೆರವೇರಿಸುತ್ತಿರುವ ಈಶ್ವರ ಖಂಡ್ರೆ | Kannada Prabha

ಸಾರಾಂಶ

ವನ್ಯಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರ ಅಮೂಲ್ಯ ಜೀವ, ಬೆಳೆ ಹಾನಿ ತಪ್ಪಿಸಲು ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಸಲಹೆಗಳು ಬಂದಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ತಜ್ಞರ ಮಟ್ಟದಲ್ಲಿ ಚರ್ಚೆ ಆಗುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ವನ್ಯಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರ ಅಮೂಲ್ಯ ಜೀವ, ಬೆಳೆ ಹಾನಿ ತಪ್ಪಿಸಲು ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಸಲಹೆಗಳು ಬಂದಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ತಜ್ಞರ ಮಟ್ಟದಲ್ಲಿ ಚರ್ಚೆ ಆಗುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.ದುಬಾರೆಯ ಕಾವೇರಿ ಹೊಳೆಯಲ್ಲಿ ನಿರ್ಮಿಸಲಾಗುವ ಸುಮಾರು 7.30 ಕೋಟಿ ರು. ವೆಚ್ಚದ ತೂಗು ಸೇತುವೆ ಹಾಗೂ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಆನೆ-ಮಾನವ ಸಂಘರ್ಷ ನಿಯಂತ್ರಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ಅವರು ವರದಿ ನೀಡಿದ್ದಾರೆ. ಕಾಡಿನಂಚಿನ ಜನರು ಕೂಡ ಈ ಬಗ್ಗೆ ಸಲಹೆ ನೀಡಬೇಕು ಎಂದರು.ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಇಲ್ಲ. ಅನುದಾನದ ಕೊರತೆ ಇಲ್ಲ. ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಆದಷ್ಟು ಶೀಘ್ರ ಹೆಚ್ಚಿನ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು. ಅರಣ್ಯವಾಸಿಗಳು ಮತ್ತು ಅರಣ್ಯದಂಚಿನ ಜನರು ದೀರ್ಘ ಕಾಲದಿಂದ ಅರಣ್ಯವನ್ನು ಸಂರಕ್ಷಿಸಿದ್ದಾರೆ. ಆದರೆ ಇಂದು ಮಾನವ-ವನ್ಯಜೀವಿ ಸಂಘರ್ಷದಿಂದ ಅಮೂಲ್ಯ ಜೀವಹಾನಿ ಆಗುತ್ತಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಜನರ ಜೀವ ಉಳಿಸಲು ಪ್ರಥಮ ಆದ್ಯತೆ ನೀಡಬೇಕು ಎಂದರು.7.3 ಕೋಟಿ ವೆಚ್ಚದಲ್ಲಿ ತೂಗು ಸೇತುವೆ:ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ದುಬಾರೆ ಹಾಡಿಯಲ್ಲಿರುವ 150 ಮನೆಗಳ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ನಗರಕ್ಕೆ ಬರಲು ಅನುಕೂಲವಾಗುವಂತೆ 7 ಕೋಟಿ 30 ಲಕ್ಷ ರು. ವೆಚ್ಚದಲ್ಲಿ ಗುಣಮಟ್ಟದ ತೂಗು ಸೇತುವೆ ನಿರ್ಮಿಸಲಾಗುತ್ತಿದೆ. ಈ ಮೂಲಕ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದರು.ದುಬಾರೆ ಆನೆ ಶಿಬಿರಕ್ಕೆ 100 ವರ್ಷಗಳ ಇತಿಹಾಸವಿದೆ. ಇಲ್ಲಿ 15 ಕುಮ್ಕಿ ಆನೆಗಳಿದ್ದು, ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿವೆ. ವಿವಿಧ ಕಾರ್ಯಚರಣೆಯಲ್ಲಿ ಭಾಗಿಯಾಗುತ್ತಿವೆ. ಆನೆಗಳಿಗೆ ಪೂಜ್ಯ ಸ್ಥಾನ ಇದೆ. ಹೀಗಾಗಿ ನಾವು ವನ್ಯಜೀವಿಗಳ ಸಂರಕ್ಷಣೆಗೂ ಮುಂದಾಗಬೇಕು ಎಂದರು.ಸೆಕ್ಷನ್ 4, ಡೀಮ್ಡ್ ಅರಣ್ಯ ಮೊದಲಾದ ವಿಚಾರಗಳ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದು, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಅರಣ್ಯ ಇಲಾಖೆಯ ಜನಸಂಪರ್ಕ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ, ಕಾಡಿನಂಚಿನ ಗ್ರಾಮದ ಮಹಿಳೆಯರಿಗೆ ಹೊಲಿಗೆ ಯಂತ್ರ ಇತ್ಯಾದಿ ಸೌಲಭ್ಯಗಳನ್ನು ವಿತರಿಸಲಾಯಿತು.ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಸ್ಥಳೀಯ ಅರಣ್ಯ ವಲಯ ಅಧಿಕಾರಿ ರಕ್ಷಿತ್, ಮತ್ತಿತರರು ಪಾಲ್ಗೊಂಡಿದ್ದರು.

...ಬಾಕ್ಸ್‌....

150 ಕುಟುಂಬಗಳಿಗೆ ಪ್ರಯೋಜನ

ಕುಶಾಲನಗರ ವಲಯದ ನಂಜರಾಯಪಟ್ಟಣ ಗ್ರಾಮದ ದುಬಾರೆಯಲ್ಲಿ ಕಾವೇರಿ ನದಿಗೆ ತೂಗು ಸೇತುವೆ ನಿರ್ಮಿಸುತ್ತಿದ್ದು, ಈ ಯೋಜನೆಯು ದುಬಾರೆ ಹಾಡಿಯಲ್ಲಿ ವಾಸಿಸುತ್ತಿರುವ 150ಕ್ಕೂ ಹೆಚ್ಚು ಕುಟುಂಬಗಳ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದು, ತುರ್ತು ಸಂದರ್ಭದಲ್ಲಿ ದುಬಾರೆ ಹಾಡಿ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಹೊಳೆ ದಾಟುವ ಪರಿಸ್ಥಿತಿ ಇನ್ನು ಅಥವಾ ದುಬಾರೆ ಮಾಲ್ದಾರೆ ಮಾರ್ಗವಾಗಿ ಮೀಸಲು ಅರಣ್ಯದ ಒಳಗಡೆ ಸುಮಾರು 10 ಕಿ.ಮೀ.ಗಳು ತೆರಳಬೇಕಾಗಿರುವುದಿಂದ ಬಹಳ ಅನಾನುಕೂಲವಾಗುತ್ತಿತ್ತು. ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ಶಿಬಿರಕ್ಕೆ, ಬರುವ ಪ್ರವಾಸಿಗರಿಗೂ ಸಹ ಅನಾನುಕೂಲವಾಗುತ್ತಿತ್ತು.ತೂಗು ಸೇತುವೆ ನಿರ್ಮಾಣದಿಂದ ದುಬಾರೆ ಹಾಡಿಯ 150ಕ್ಕೂ ಹೆಚ್ಚು ಕುಟುಂಬದ ಜನರಿಗೂ, ಸಾಕಾನೆ ಶಿಬಿರದ ಸಿಬ್ಬಂದಿಗಳಿಗೂ ಮತ್ತು ಪ್ರವಾಸಿಗರಿಗೂ ಹೆಚ್ಚು ಅನುಕೂಲವಾಗುತ್ತದೆ.ಅರಣ್ಯ ಸಚಿವರ ಗಮನ ಸೆಳೆದ ಶಾಸಕ ಡಾ. ಮಂತರ್ ಆನೆ-ಮಾನವ ಸಂಘರ್ಷದಿಂದ ಜೀವ ಕಳೆದುಕೊಂಡವರಿಗೆ ನಾವು ಎಂದಿಗೂ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಸಾವಿನ ಮನೆಯಲ್ಲಿ ಅವರಿಗೆ ಪರಿಹಾರ ಚೆಕ್ ನೀಡುವುದು ನಮಗೆ ನೋವಾಗುತ್ತದೆ. ಆದರೂ ಸರ್ಕಾರದ ಈಗಿರುವ ಪರಿಹಾರ ಮೊತ್ತವನ್ನು 20 ಲಕ್ಷದಿಂದ 50 ಲಕ್ಷ ರು.ಗೆ ಏರಿಸಬೇಕು. ಅರಣ್ಯ ಅಧಿಕಾರಿಗಳು ಬೆಳೆಗಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವನ್ಯಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ಆದಷ್ಟು ಬೇಗ ಪರಿಹಾರ ನೀಡುವುದರೊಂದಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಹೀಗೆ ಹಲವು ಬೇಡಿಕೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಅರಣ್ಯ ಸಚಿವರ ಮುಂದಿಟ್ಟರು.ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ಅರಣ್ಯ ಇಲಾಖೆಯಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ತೋಟದ ಆನೆಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.ನಾನು-ಅಮ್ಮ ಬಂದಿದ್ದೆವು!ಬಾಲ್ಯದಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ನಾನು ನನ್ನ ತಾಯಿಯವರ ಜೊತೆಗೆ ಬಂದಿದ್ದೆ. ಆ ಸಂದರ್ಭ ನದಿಯನ್ನು ದಾಟಲು ದೋಣಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ನನ್ನ ಅವಧಿಯಲ್ಲೇ ದುಬಾರೆಯಲ್ಲಿ ನೂತನ ತೂಗು ಸೇತುವೆ ಆಗುತ್ತಿರುವುದು ಖುಷಿ ನೀಡುತ್ತಿದೆ. ಈ ಮಳೆಗಾಲದ ಒಳಗಾಗಿ ಮುಂದಿನ ಮಳೆಗಾಲದಲ್ಲಿ ಕೆಲಸ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಶಾಸಕ ಮಂತರ್‌ ಗೌಡ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವೇಕಾನಂದ ಕಾನೂನು ಕಾಲೇಜ್‌: 8ರಿಂದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ
ಆಳ್ವಾಸ್ ಸಂಸ್ಥೆ ಮಿನಿ ಇಂಡಿಯಾ ಇದ್ದಂತೆ: ಡಾ. ಆಳ್ವ