ಕನ್ನಡಪ್ರಭ ವಾರ್ತೆ ಮೈಸೂರು
ಎಐಡಿಎಸ್ಒ ಜಿಲ್ಲಾ ಸಮಿತಿಯಿಂದ ನಗರ ರೈಲು ನಿಲ್ದಾಣದ ಬಳಿ ಈಶ್ವರಚಂದ್ರ ವಿದ್ಯಾಸಾಗರವರ ಸ್ಮರಣ ದಿನವನ್ನು ಮಂಗಳವಾರ ಆಚರಿಸಿದರು. ಇದೇ ವೇಳೆ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದರು.ಈ ವೇಳೆ ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಉಳಿಗಮಾನ್ಯ ಆಳ್ವಿಕೆಯಡಿ ಬಹುಕಾಲದವರೆಗೆ ಅಜ್ಞಾನ ಹಾಗೂ ಮೌಢ್ಯದ ಅಂಧಕಾರದಲ್ಲಿ ಮುಳುಗಿ ಬಳಲುತ್ತಿದ್ದ ಭಾರತದ ನೆಲಕ್ಕೆ ಆಧುನಿಕ ಜ್ಞಾನದ ಬೆಳಕನ್ನು ಹೊತ್ತು ತಂದ ಸೂರ್ಯನಂತೆ ಉದಯಿಸಿದವರು ಈಶ್ವರಚಂದ್ರ ವಿದ್ಯಾಸಾಗರ್ ಎಂದರು.
ಶತಮಾನಗಳವರೆಗೂ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಕೆಳವರ್ಗದ ಸಮುದಾಯಗಳಿಗೆ ವಿದ್ಯೆಯನ್ನು ನೀಡಲು ಮತ್ತು ಬಾಲ್ಯದಲ್ಲೇ ವಿಧವೆಯರಾಗಿ ನರಕದ ಬದುಕು ಸವೆಸುತ್ತಿದ್ದ ಹೆಣ್ಣು ಮಕ್ಕಳ ಮರುವಿವಾಹಕ್ಕಾಗಿ ಅವರು ಅವಿರತ ಶ್ರಮಿಸಿದರು. ಜೊತೆಗೆ, ಹಳೆಯ ಗೊಡ್ಡು ಸಂಪ್ರದಾಯಗಳ ಸಂಕುಚಿತ ಚಿಂತನೆಗಳ ವಿರುದ್ಧ ಹೋರಾಡಿದ ವಿದ್ಯಾಸಾಗರರು, ನವೋದಯ ಚಳವಳಿಯ ಪತಾಕೆಯನ್ನು ಭಾರತದ ಆಗಸದಲ್ಲಿ ಹಾರಿಸಿದರು ಎಂದರು.ಇಂದು ಶಿಕ್ಷಣವು ಖಾಸಗೀಕರಣಗೊಂಡು ಮಾರಾಟವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ 6000 ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 3500 ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೆ ಛಾವಣಿಗಳು ಸೋರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59000 ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 29 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದದಿಂದ ವಂಚಿತರಾಗುತ್ತಿದ್ದಾರೆ. ನಿರುದ್ಯೋಗ, ಬಡತನ, ಹಸಿವು ದೇಶದಾದ್ಯಂತ ತಾಂಡವವಾಡುತ್ತಿದೆ. ಬಡ ರೈತ ಕಾರ್ಮಿಕರು, ಮಧ್ಯಮವರ್ಗದ ಜನತೆ ತುಳಿತಕ್ಕೊಳಪಡುತ್ತಿದ್ದಾರೆ. ಕುಸಂಸ್ಕೃತಿ ತೀವ್ರವಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್, ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಅಭಿಷೇಕ್ ,ದಿಶಾ, ಅಂಜಲಿ, ವಿದ್ಯಾರ್ಥಿಗಳಾದ ಆರತಿ, ಸ್ನೇಹಾ, ಪ್ರಿಯಾಂಕಾ ,ಚೈತ್ರಾ ಮೊದಲಾದವರು ಇದ್ದರು.