ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನಲ್ಲಿ ನಡೆಯುತ್ತಿರುವ ಕನ್ನಡ, ಇತಿಹಾಸ ಎಂ.ಎ ಕೋರ್ಸ್‌ಗಳನ್ನು ಆರ್ಥಿಕ ಸಂಕಷ್ಟದ ನೆಪವೊಡ್ಡಿ ಬಂದ್ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.ಸ್ನಾತಕೋತ್ತರ ಕೋರ್ಸುಗಳ ಸಾಮಾನ್ಯ ಪ್ರವೇಶ ಪ್ರವೇಶಾತಿಯಿಂದ ಸಂಜೆ ಕಾಲೇಜನ್ನು ಹೊರಗಿಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಮೈಸೂರು ವಿವಿ ಘಟಕ ಕಾಲೇಜಾದ ಸಂಜೆ ಕಾಲೇಜಿನಲ್ಲಿ ಪದವಿಯ ಜೊತೆಗೆ ಎಂ.ಕಾಂ, ಎಂಎ- ಕನ್ನಡ ಮತ್ತು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ವದವಿ ಕಲಿಕೆಗೂ ಅವಕಾಶ ನೀಡಲಾಗಿತ್ತು. ಎಂ.ಎ- ಇತಿಹಾಸ ಆರಂಭವಾಗಿ 12 ವರ್ಷಗಳು, ಎಂಎ- ಕನ್ನಡ ಆರಂಭವಾಗಿ 4 ವರ್ಷಗಳು ಕಳೆದಿವೆ. ಎಂ.ಕಾಂ ಆರಂಭವಾಗಿ 10 ವರ್ಷಗಳು ಕಳೆದಿವೆ. ಈವರೆಗೆ ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು, ಸ್ನಾತಕೋತ್ತರ ಪದವೀಧರರಾಗಿದ್ದಾರೆ.ಆದರೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿವಿ ಸಂಜೆ ಕಾಲೇಜಿನಲ್ಲಿ ಎಂ.ಕಾಂಗೆ ಮಾತ್ರ ಪ್ರವೇಶಾತಿ ಪಡೆಯುವಂತೆ ಸೂಚಿಸಲಾಗಿದೆ. ಕನ್ನಡ ಮತ್ತು ಇತಿಹಾಸ ಕೋರ್ಸುಗಳನ್ನು ಪ್ರವೇಶಾತಿಯಿಂದ ಹೊರಗಿಡಲಾಗಿದೆ. ಸಾಂಪ್ರದಾಯಿಕ ಅಧ್ಯಯನ ವಿಷಯಗಳನ್ನು ಕಡೆಗಣಿಸಿರುವುದರ ಜೊತೆಗೆ ಇಲ್ಲಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಆಂತಕವನ್ನುಂಟು ಮಾಡಿದೆ.
ಹಗಲು ಕಲಿಯಲು ಸಾಧ್ಯವಾಗದ ಹಲವಾರು ಮಂದಿ ಸಂಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಇತಿಹಾಸ ಹಾಗೂ ಕನ್ನಡ ಎಂ.ಎ. ಕಲಿತು.ಉದ್ಯೋಗ ಪಡೆದಿದ್ದಾರೆ. ವಿವಿ ಮಟ್ಟದಲ್ಲಿ ಚಿನ್ನದ ಪದಕಗಳಿಗೂ ಭಾಜನರಾಗಿದ್ದಾರೆ. ಆದ್ದರಿಂದ ವಿವಿಯ ಕುಲಪತಿಗಳು ತಕ್ಷಣ ಈ ಬಗ್ಗೆ ಗಮನ ಹರಿಸಿ, ಗೊಂದಲ ನಿವಾರಿಸಬೇಕು. ಎಂದಿನಂತೆ ಮೈಸೂರು ವಿವಿ ಸಂಜೆ ಕಾಲೇಜಿನಲ್ಲಿಯೂ ಕನ್ನಡ ಹಾಗೂ ಇತಿಹಾಸ ಎಂ.ಎ.ಪ್ರವೇಶಕ್ಕೆ ಆವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.ಎಸ್ ಡಿಎಂ ಮಹಿಳಾ ಕಾಲೇಜಿನಲ್ಲಿ ಫ್ರೆಶರ್ಸ್ ಡೇ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಕ್ಷೇಮ ಪಾಲನ ಸಮಿತಿಯ ಆಶ್ರಯದಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿನಿಯರು ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ ಮಾತನಾಡಿ, ಗುಣಾತ್ಮಕ ಚಿಂತನೆಗಳಿಂದ ಗುಣಾತ್ಮಕ ಮತ್ತು ಧನಾತ್ಮಕ ಫಲಿತಾಂಶಗಳನ್ನು ಕಾಣಲು ಸಾಧ್ಯ. ಪೋಷಕರು ಮತ್ತು ಅಧ್ಯಾಪಕರು ನಿಮ್ಮ ಶೈಕ್ಷಣಿಕ ಜೀವನದ ಮಾರ್ಗದರ್ಶಕರಾಗಿದ್ದು, ಅವರ ಸಮರ್ಪಣೆಯ ಜ್ಞಾನವನ್ನು ತಮ್ಮ ಭವಿಷ್ಯಕ್ಕೆ ಬಳಸಿಕೊಂಡು ಉನ್ನತ ವ್ಯಾಸಾಂಗವನ್ನು ನೆರವೇರಿಸಿಕೊಂಡು ಸುಂದರ ಭವಿಷ್ಯವನ್ನು ಕಾಣಲು ಧೃಡ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.ಮಿಸ್ ಫ್ರೆಶರ್ಸ್ ಸ್ಪರ್ಧೆ:
ಇದೇ ವೇಳೆ ಮಿಸ್ ಫ್ರೆಶರ್ಸ್ ಸ್ಪರ್ಧೆಯನ್ನು ನಡೆಸಲಾಯಿತು. ದಿವಿಜಾ ಭಾರದ್ವಾಜ್ ಅವರನ್ನು ಮಿಸ್ ಫ್ರೆಶರ್, ತ್ರೆಸಿಯಾ ವಿ. ಜಾರ್ಜ್ ಅವರನ್ನು ರನ್ನರ್ ಅಪ್, ಎ. ಮಾನ್ಯ ಅವರನ್ನು ಅತ್ಯುತ್ತಮ ವೇಷಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸಂಹಿತಾ ಪಿ. ಭಟ್ ಮತ್ತು ಯೋಗಿತಾ ಅವರು ಬಹುಮಾನ ಪಡೆದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ, ಅಮೂಲ್ಯ, ಗ್ರಂಥಪಾಲಕಿ ಬಿ.ಎಸ್. ಪದ್ಮಾ ಅವರು ತೀರ್ಪುಗಾರರಾಗಿ ನೆರವೇರಿಸಿದರು.ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ವಿದ್ಯಾರ್ಥಿ ಕಲ್ಯಾಣ ಸಮಿತಿ ಸಂಯೋಜಕಿ ಜ್ಯೋತಿಲಕ್ಷ್ಮಿ ಜಿ. ಕಾವಾ ಮೊದಲಾದವರು ಇದ್ದರು.