)
ಹಾವೇರಿ: ನಾಗರ ಪಂಚಮಿ ಹಬ್ಬದ ಸಂಭ್ರಮದ ನಡುವೆಯೇ ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ. ಮಕ್ಕಳು, ಮಹಿಳೆಯರು ಉಂಡೆ ತಿಂದು, ಜೋಕಾಲಿ ಜೀಕಿ ಸಂಭ್ರಮಿಸುತ್ತಿದ್ದರೆ, ಜೂಜುಕೋರರು ಕೈಯಲ್ಲಿ ಎಕ್ಕಾ, ರಾಜಾ ಎಲೆ ಹಿಡಿದು ದಿನವಿಡೀ ಜೂಜಾಟದಲ್ಲಿ ನಿರತರಾಗಿರುವುದು ಬೆಳಕಿಗೆ ಬಂದಿದೆ.
ವಿವಿಧೆಡೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಂದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದವರ ವಿರುದ್ಧ 7 ಪ್ರಕರಣಗಳ ದಾಖಲಿಸಿದ್ದಾರೆ. ಆ. 17ರಂದು ಹಾವೇರಿ ಶಹರ ಠಾಣೆಯಲ್ಲಿ 2, ಹಾವೇರಿ ಗ್ರಾಮೀಣ ಠಾಣೆಯಲ್ಲಿ 3 ಹಾಗೂ ಬ್ಯಾಡಗಿ ಠಾಣೆಯಲ್ಲಿ 2 ಸೇರಿ ಒಟ್ಟು 7 ಇಸ್ಪೀಟ್ ಜೂಜಾಟ ಪ್ರಕರಣಗಳು ದಾಖಲಾಗಿವೆ. ಹಬ್ಬದ ದಿನ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಕೆಲವರು ಸಾರ್ವಜನಿಕ ಸ್ಥಳಗಳನ್ನೇ ಜೂಜಾಟದ ಅಡ್ಡೆಗಳನ್ನಾಗಿ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆಹಚ್ಚಿ ದಾಳಿ ನಡೆಸಿದ್ದಾರೆ. ರೈಲ್ವೆ ಅಂಡರ್‌ಬ್ರಿಡ್ಜ್, ಎಪಿಎಂಸಿ ಸಮೀಪ, ಬಸ್‌ಸ್ಟ್ಯಾಂಡ್ ಹಿಂಭಾಗ, ಗ್ರಾಮದ ಬಯಲು ಪ್ರದೇಶ, ಕ್ರಾಸ್ ಹಾಗೂ ಸಾರ್ವಜನಿಕ ರಸ್ತೆಗಳ ಬಳಿಯೂ ಜೂಜಾಟ ನಡೆದಿರುವುದು ಪ್ರಕರಣಗಳ ವಿವರದಿಂದ ಬೆಳಕಿಗೆ ಬಂದಿದೆ.
ನಗರದಲ್ಲೇ ಎರಡು ಪ್ರಕರಣ..ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರ ಬಡಾವಣೆಯ ರೈಲ್ವೆ ಅಂಡರ್‌ಬ್ರಿಡ್ಜ್ ಕೆಳಗಿನ ಸಾರ್ವಜನಿಕ ಸ್ಥಳದಲ್ಲಿ ಐದಾರು ಜನ ಜೂಜುಕೋರರು ಗುಂಪಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ.
ಗ್ರಾಮೀಣರ ಅಬ್ಬರ: ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಗಡಿ ಗ್ರಾಮದ ಬಸ್‌ಸ್ಟ್ಯಾಂಡ್ ಹಿಂಭಾಗದ ಸಾರ್ವಜನಿಕ ಬಯಲು ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ, ಚಿಕ್ಕಲಿಂಗದಹಳ್ಳಿ ಗ್ರಾಮದ ವಡ್ಡಮ್ಮನ ಕ್ರಾಸ್ ಸಮೀಪದ ಸಾರ್ವಜನಿಕ ಬಯಲು ಪ್ರದೇಶದಲ್ಲೂ ಕೆಲವರು ಗುಂಪಾಗಿ ಕುಳಿತು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ದೂರು ದಾಖಲಾಗಿದೆ. ನೆಲೋಗಲ್ ಗ್ರಾಮದ ಹದ್ದಿಯಲ್ಲಿರುವ ಶಿವಾಜಿ ದಾಬಾ ಹಿಂದಿನ ಬಯಲು ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ. ಈ ಪ್ರಕರಣವೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಬ್ಬದ ನೆಪದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ ಜೂಜಾಟಕ್ಕೆ ಅವಕಾಶ ಕಲ್ಪಿಸದೇ ವಿಶೇಷ ಕಾರ್ಯಾಚರಣೆ ನಡೆಸಿ ನಡೆಸಿ ಪ್ರಕರಣ ದಾಖಲಿಸಿದ್ದೇವೆ ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.